ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ವಿವಾದ: ಆರೋಪಗಳಿಗೆ ತಮ್ಮಣ್ಣ ಶೆಟ್ಟಿ ತಿರುಗೇಟು
ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಪಾಲ್ಗೊಂಡ ಹರಕೆ ನೇಮೋತ್ಸವ ಸರಿಯಾದ ರೀತಿಯಲ್ಲಿ ಇರಲಿಲ್ಲ ಎಂದು ದೈವರಾಧಕ ತಮ್ಮಣ್ಣ ಶೆಟ್ಟಿ ಗರಂ ಆಗಿದ್ದರು. ಈಗ ಮಂಗಳೂರಿನಲ್ಲಿ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಾರೆಬೈಲು ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ಕ್ಷೇತ್ರದ ಆಡಳಿತ ಮಂಡಳಿ ತಮ್ಮ ಮೇಲೆ ಮಾಡಿದ ಆರೋಪಗಳಿಗೆ ತಮ್ಮಣ್ಣ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.

‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾದ ಯಶಸ್ಸಿನ ನಂತರ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಡೆಸಿದ ಹರಕೆ ನೇಮೋತ್ಸವ ವಿವಾದ ಇನ್ನೂ ಶಮನ ಆಗಿಲ್ಲ. ಈ ಹರಕೆ ನೇಮೋತ್ಸವದ ರೀತಿಯನ್ನು ದೈವರಾಧಕ ತಮ್ಮಣ್ಣ ಶೆಟ್ಟಿ (Tammanna Shetty) ವಿರೋಧಿಸಿದ್ದರು. ಆದರೆ ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ಕ್ಷೇತ್ರ ಬೆಳಗಬಾರದು ಎಂದು ಈ ವಿವಾದ ಹುಟ್ಟು ಹಾಕಿದ್ದಾರೆ ಎಂದು ದೈವರಾಧಕ ತಮ್ಮಣ್ಣ ಶೆಟ್ಟಿ ಮೇಲೆ ಆರೋಪ ಹೊರಿಸಲಾಗಿತ್ತು. ತಮ್ಮ ಮೇಲಿನ ಆರೋಪಗಳಿಗೆಲ್ಲ ಈಗ ಅವರು ತಿರುಗೇಟು ನೀಡಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಈವರೆಗೆ ದೈವಗಳಿಗೆ ನೀಡಿದ ಹರಕೆ ಸೇವೆಗಳೆಲ್ಲಾ ದೈವರಾಧನೆ ನಿಯಮಗಳಿಗೆ ವಿರುದ್ದವಾದದ್ದು ಎಂದು ತಮ್ಮಣ್ಣ ಶೆಟ್ಟಿ ಶೆಟ್ಟಿ ಹೇಳಿದ್ದಾರೆ.
‘ನಾನು ಯಾವುದೇ ತಪ್ಪುಗಳನ್ನು ಮಾಡಿಲ್ಲ. ಅವರು ಮಾಡಿರುವ ಆರೋಪ ಸತ್ಯವಾದರೆ ನಾನು ಕಳ್ಳನೆಂದು ಒಪ್ಪಿಕೊಂಡು ಮುಂದೆ ದೈವರಾಧನೆಯನ್ನೆ ನಿಲ್ಲಿಸುತ್ತೇನೆ. ಅವರು ಮಾಡಿದ ಆರೋಪ ಸುಳ್ಳಾದರೆ ಆ ತಂತ್ರಿಯನ್ನು ಕಂತ್ರಿ ಎಂದು ಕರೆಯುತ್ತೇನೆ. ಒಬ್ಬನ ತೇಜೋವಧೆ ಮಾಡಲು ಬೇರೆ ಬೇರೆ ಕ್ಷೇತ್ರದ ಹೆಸರನ್ನು ದುರುಪಯೋಗ ಮಾಡಿದ್ದಾರೆ’ ಎಂದು ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.
‘ಹರಕೆ ನೇಮದ ನೆಪದಲ್ಲಿ ದೈವವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದರಿಂದ ಎಲ್ಲರಿಗೂ ದೋಷ ಇದೆ. ನಿಯಮ ಪಾಲಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯ. ದೈವಸ್ಥಾನದ ಆಡಳಿತ ಮಂಡಳಿ ದೈವಸ್ಥಾನದ ಎದುರು ಕನ್ನಡದಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಕನ್ನಡದಲ್ಲಿ ಮಾತನಾಡಲು ಇಲ್ಲ. ದೈವಕ್ಕೆ ದೈವ ಭಾಷೆ ಅಂತ ಇದೆ. ತುಳು ಭಾಷೆಯಲ್ಲಿಯೇ ಪ್ರಾರ್ಥನೆ ಮಾಡಬೇಕು’ ಎಂದಿದ್ದಾರೆ ತಮ್ಮಣ್ಣ ಶೆಟ್ಟಿ.
‘ರಿಷಬ್ ಶೆಟ್ಟಿಯವರಿಗೆ ಈ ವಿಷಯ ಮುಟ್ಟಲು ಕನ್ನಡದಲ್ಲಿ ಪ್ರಾರ್ಥನೆ ಮಾಡಿದ್ರಾ? ರಿಷಬ್ ಶೆಟ್ಟಿ, ದೈವ ನರ್ತಕ, ತಂತ್ರಿ ಈ ಮೂವರನ್ನು ದೈವ ಬೆತ್ತಲೆ ಮಾಡುತ್ತಿದೆ. ರಿಷಬ್ ಶೆಟ್ಟಿಗಾಗಿ ಕನ್ನಡದಲ್ಲಿ ಪ್ರಾರ್ಥನೆ ಮಾಡಿದ್ರು. ನಾಳೆ ಅಮಿತಾಭ್ ಬಚ್ಚನ್ ಬಂದಾಗ ಹಿಂದಿಯಲ್ಲಿ ಪ್ರಾರ್ಥನೆ ಆದ್ರೆ? ಮೋಹನ್ಲಾಲ್ ಬಂದು ಮಲಯಾಳಂನಲ್ಲಿ ಪ್ರಾರ್ಥನೆ ಆದ್ರೆ? ಹೀಗಾದ್ರೆ ದೈವಗಳ ಕಥೆಯೇನು’ ಎಂದು ತಮ್ಮಣ್ಣ ಶೆಟ್ಟಿ ಅವರು ಹೇಳಿದ್ದಾರೆ.
ಇದನ್ನೂ ಓದಿ:
‘ದೈವಗಳ ಪ್ರಾರ್ಥನೆ ಸಹ ಪ್ಯಾನ್ ಇಂಡಿಯವಾಗುವ ಆತಂಕವಿದೆ. ಮಾಡಿರೋದು ತಪ್ಪು ತಪ್ಪೇ. ರಿಷಬ್ ಶೆಟ್ಟಿ ದೈವದ ಸಿನಿಮಾ ಮಾಡಿರೋದು ತಪ್ಪು. ಇವರೆಲ್ಲಾ ಈಗ ಅವನ ಸಾವಿರ ಕೋಟಿ ಹಿಂದೆ ಇದ್ದಾರೆ. ನಾಟಕ ಮಾಡ್ತಿದ್ದಾರೆ’ ಎಂದು ತಮ್ಮಣ್ಣ ಶೆಟ್ಟಿ ಆರೋಪ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



