ವಿಜಯ್ ದೇವರಕೊಂಡ ಅನ್ನು ತುಳಿಯಲು ಯತ್ನಿಸಿದ್ದರೇ ಆ ಸ್ಟಾರ್ ನಟ?
Vijay Deverakonda: ವಿಜಯ್ ದೇವರಕೊಂಡ ಈಗ ತೆಲುಗು ಚಿತ್ರರಂಗದ ಸ್ಟಾರ್ ನಟ. ಆರಂಭದ ದಿನಗಳಲ್ಲಿ ಹಲವು ಸಣ್ಣ ಪುಟ್ಟ ಪಾತ್ರಗಳು, ಸೆಕೆಂಡ್ ಹೀರೋ ಪಾತ್ರಗಳಲ್ಲಿ ನಟಿಸಿ ಈ ಹಂತಕ್ಕೆ ಅವರು ತಲುಪಿದ್ದಾರೆ. ಆದರೆ ಅವರ ಆರಂಭದ ದಿನಗಳಲ್ಲಿ ತೆಲುಗಿನ ಸ್ಟಾರ್ ನಟರೊಬ್ಬರು ವಿಜಯ್ ಅನ್ನು ತುಳಿಯುವ ಯತ್ನ ಮಾಡಿದ್ದರು ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ. ಯಾರದು?

ವಿಜಯ್ ದೇವರಕೊಂಡ ಈಗ ಸ್ಟಾರ್ ನಟ. ‘ಅರ್ಜುನ್ ರೆಡ್ಡಿ’ ಸಿನಿಮಾದಿಂದಾಗಿ ಅವರು ಸ್ಟಾರ್ ನಟರಾಗಿ ಬೆಳೆದರು. ವಿಜಯ್ ದೇವರಕೊಂಡ ‘ಅರ್ಜುನ್ ರೆಡ್ಡಿ’ಗೆ ಮುಂಚೆ ಹಲವಾರು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ನಾಯಕ, ಎರಡನೇ ನಾಯಕನಾಗಿಯೂ ನಟಿಸಿದ್ದರು. ಆ ಸಮಯದಲ್ಲಿ ಸ್ಟಾರ್ ನಟನೊಬ್ಬ ವಿಜಯ್ ದೇವರಕೊಂಡ ಅನ್ನು ತುಳಿಯುವ ಪ್ರಯತ್ನ ಮಾಡಿದ್ದರು ಎಂಬ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಫ್ಯಾನ್ಸ್ ವಾರ್ಗೆ ಕಾರಣವಾಗಿದೆ.
ವಿಜಯ್ ದೇವರಕೊಂಡ 2011 ರಲ್ಲಿ ಬಿಡುಗಡೆ ಆದ ‘ನುವ್ವಿಲ’ ಹಾಗೂ 2012 ರಲ್ಲಿ ಬಿಡುಗಡೆ ಆದ ಶೇಖರ್ ಕಮ್ಮುಲ ನಿರ್ದೇಶನದ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರು. ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ಪಾತ್ರ ತುಸು ವಿಲನ್ ಶೇಡ್ನ ಪಾತ್ರವಾಗಿತ್ತು. ಅದಾದ ಬಳಿಕ ಮೂರು ವರ್ಷ ಯಾವುದೇ ಅವಕಾಶ ಸಿಕ್ಕಿರಲಿಲ್ಲ ಬಳಿಕ 2015 ರಲ್ಲಿ ಬಿಡುಗಡೆ ಆದ ‘ಯವಡೇ ಸುಬ್ರಹ್ಮಣ್ಯಂ’ ಸಿನಿಮಾದಲ್ಲಿ ಎರಡನೇ ನಾಯಕನ ಪಾತ್ರ ವಿಜಯ್ಗೆ ದೊರಕಿತು. ಆ ಸಿನಿಮಾದಲ್ಲಿ ಈಗಿನ ಸ್ಟಾರ್ ನಟ ನಾನಿ ನಾಯಕ.
‘ಯವಡೇ ಸುಬ್ರಹ್ಮಣ್ಯಂ’ ಸಿನಿಮಾ ಬಿಡುಗಡೆ ವೇಳೆಗಾಗಲೇ ನಾನಿ ಜನಪ್ರಿಯ ನಾಯಕ ನಟರಾಗಿದ್ದರು. ‘ಯವಡೇ ಸುಬ್ರಹ್ಮಣ್ಯಂ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ಪಾತ್ರ, ನಾನಿ ಪಾತ್ರಕ್ಕಿಂತ ಹೆಚ್ಚು ಚೆನ್ನಾಗಿತ್ತು, ನಾನಿಯ ಪಾತ್ರ ಅಹಂಕಾರಿ, ಅತಿಯಾಸೆಯ ಹೊಂದಿದ ವ್ಯಕ್ತಿಯ ಪಾತ್ರವಾಗಿತ್ತು. ‘ಯವಡೇ ಸುಬ್ರಹ್ಮಣ್ಯಂ’ ಸಿನಿಮಾದ ಸಮಯದಲ್ಲಿ ನಾನಿ ಉದ್ದೇಶಪೂರ್ವಕವಾಗಿ ವಿಜಯ್ ದೇವರಕೊಂಡ ಅವರನ್ನು ತುಳಿಯಲು ಯತ್ನಿಸಿದ್ದರು ಎಂಬ ಸುದ್ದಿ ಈಗ ಹರಿದಾಡುತ್ತಿದೆ.
ಇದನ್ನೂ ಓದಿ:ವಿಜಯ್ ದೇವರಕೊಂಡಗೆ ರಶ್ಮಿಕಾ ಪ್ರೀತಿಯಿಂದ ಏನೆಂದು ಕರೆಯುತ್ತಾರೆ?
ವಿಜಯ್ ದೇವರಕೊಂಡ ಅವರನ್ನು ಪ್ರಚಾರದಿಂದ ಹೊರಗಿಟ್ಟಿದ್ದರು. ಅವರಿಗಾಗಿ ಬರೆಯಲಾಗಿದ್ದ ಕೆಲವು ಪ್ರಮುಖ ದೃಶ್ಯಗಳಿಗೆ ಕತ್ತರಿ ಹಾಕಿಸಿದರು ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇತ್ತೀಚೆಗಷ್ಟೆ ‘ಯವಡೇ ಸುಬ್ರಹ್ಮಣ್ಯಂ’ ಸಿನಿಮಾದ 10ನೇ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಾನಿ, ವಿಜಯ್ ದೇವರಕೊಂಡ ಸೇರಿದಂತೆ ಆ ಸಿನಿಮಾಕ್ಕೆ ಕೆಲಸ ಮಾಡಿದ ಅನೇಕರು ಭಾಗಿಯಾಗಿದ್ದರು. ಈ ವೇಳೆಯಲ್ಲಿ ವಿಜಯ್ ದೇವರಕೊಂಡ ಸ್ವತಃ, ತಮಗೆ ನಾನಿ ಬಹಳ ಸಹಾಯ ಮಾಡಿದರು ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಇಬ್ಬರ ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಸೋಷಿಯಲ್ ಮೀಡಿಯಾ ವಾರ್ಗೆ ಪೂರ್ಣ ವಿರಾಮ ಇಡುವ ಪ್ರಯತ್ನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Wed, 19 March 25