
ಕನ್ನಡ ಚಿತ್ರರಂಗ (Sandalwood) ಮತ್ತು ಟಿವಿ ಲೋಕದ ಪ್ರತಿಭಾವಂತ ನಟ ದಿಲೀಪ್ ರಾಜ್ ಇಂದು (ಮೇ 13) ನಿಧನ ಹೊಂದಿದ್ದು, ಅವರ ಅಂತ್ಯಕ್ರಿಯೆಗಳು ಸಂಜೆ ವೇಳೆಗೆ ರಾಮನಗರದ ಬಳಿ ಇರುವ ಅವರ ಫಾರಂ ಹೌಸ್ನಲ್ಲಿ ನೆರವೇರಿದರು. ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳ ಸಮ್ಮುಖದಲ್ಲಿ ಲಿಂಗಾಯತ ಸಂಪ್ರದಾಯದ ಪ್ರಕಾರ ಕ್ರಿಯೆಗಳನ್ನು ನೆರವೇರಿಸಿ, ಅವರನ್ನು ಅವರ ನೆಚ್ಚಿನ ಸ್ಥಳದಲ್ಲಿ ಸಮಾಧಿ ಮಾಡಲಾಯ್ತು. ದಿಲೀಪ್ ಅವರನ್ನು ಮಣ್ಣಿಗೆ ಕಳಿಸುವ ವೇಳೆ ಅವರ ಪತ್ನಿ ಶ್ರೀವಿದ್ಯಾ ಆಕ್ರಂದನ ಮುಗಿಲು ಮುಟ್ಟಿತ್ತು.
ಹಲವು ಸಿನಿಮಾಗಳು, ನಾಟಕ, ಧಾರಾವಾಹಿಗಳಲ್ಲಿ ನಟಿಸಿದ್ದ ದಿಲೀಪ್ ರಾಜ್ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಇನ್ನೂ 47 ವರ್ಷ ವಯಸ್ಸು. ಪತ್ನಿ ಶ್ರೀವಿದ್ಯಾ ಅವರೊಟ್ಟಿಗೆ ಪ್ರೀತಿಸಿ ಮದುವೆಯಾಗಿದ್ದ ದಿಲೀಪ್, ಇಬ್ಬರು ಬಲು ಅನ್ಯೋನ್ಯದಿಂದ ದಾಂಪತ್ಯ ನಡೆಸುತ್ತಿದ್ದರು. ಆದರೆ ಇದೀಗ ವಿಧಿ ಆಟಕ್ಕೆ ಅವರ ಕುಟುಂಬ ಶೋಕದಲ್ಲಿ ಮುಳುಗಿದೆ.
ದಿಲೀಪ್ ಅವರಿಗೆ ಶ್ರದ್ಧಾಂಜಲಿ ಸಲಿಸಲು ಕಿರುತೆರೆ ಮತ್ತು ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಆಗಮಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ಶುಭಾ ಪೂಂಜಾ, ಖ್ಯಾತ ನಿರ್ದೇಶಕ ಎನ್ ನಾರಾಯಣ್, ಚೇತನ್, ಅನುಶ್ರೀ, ಥ್ರಿಲ್ಲರ್ ಮಂಜು, ದೊಡ್ಡಣ್ಣ, ಕಿರುತೆರೆಯ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಕಣ್ಣೀರು ಹಾಕುತ್ತಲೇ ದಿಲೀಪ್ಗೆ ಅಂತಿಮ ನಮನಗಳನ್ನು ಸಲ್ಲಿಸಿದರು. ಈ ವೇಳೆ ಬಹುತೇಕರು ಹೇಳಿದ್ದು, ‘ದಿಲೀಪ್ ಒಳ್ಳೆಯ ವ್ಯಕ್ತಿ, ಯಾವುದೇ ದುರಭ್ಯಾಸ ಇರಲಿಲ್ಲ, ಆರೋಗ್ಯದ ಬಗ್ಗೆ ಕಾಳಜಿ ಇದ್ದ ವ್ಯಕ್ತಿ. ಅತ್ಯಂತ ಪ್ರತಿಭಾವಂತ, ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಅವರಿಗೆ ಸಿಗಲಿಲ್ಲ’ ಎಂದೇ.
ಇದನ್ನೂ ಓದಿ: ಮಾದರಿ ದಂಪತಿಯಾಗಿದ್ದ ದಿಲೀಪ್-ಶ್ರೀವಿದ್ಯಾ; ಕಾಂಬಿನೇಷನ್ನಲ್ಲಿ ಬಂದಿತ್ತು ಹಿಟ್ ಸೀರಿಯಲ್
ದಿಲೀಪ್ ಅವರು ರಾಮನಗರದ ಬಳಿ ಫಾರಂ ಹೌಸ್ ಒಂದನ್ನು ಖರೀದಿ ಮಾಡಿದ್ದರು. ಆ ಫಾರಂ ಹೌಸ್ ದಿಲೀಪ್ ಅವರ ನೆಚ್ಚಿನ ಜಾಗವಾಗಿತ್ತು. ಇದೀಗ ಅದೇ ಫಾರಂ ಹೌಸ್ ಬಳಿ ದಿಲೀಪ್ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ದಿಲೀಪ್ ಅವರ ಅಣ್ಣ ಹೇಳಿದಂತೆ ಲಿಂಗಾಯತ ಸಂಪ್ರದಾಯದ ಅನುಸಾರ ಅವರ ಅಂತ್ರಕ್ರಿಯೆ ನಡೆಸಲಾಯ್ತು. ಅಂತ್ಯಕ್ರಿಯೆ ವೇಳೆ ಅರುಣ್ ಸಾಗರ್ ಇನ್ನೂ ಹಲವಾರು ಗೆಳೆಯರು ಇದ್ದು, ಗೆಳೆಯನ ಕಳುಹಿಸಿಕೊಟ್ಟರು. ದಿಲೀಪ್ ಅವರನ್ನು ಮಣ್ಣಿಗೆ ಕಳಿಸುವ ವೇಳೆ ಅವರ ಕುಟುಂಬಸ್ಥರ ಅಳು ಕಲ್ಲು ಹೃದಯದವರನ್ನು ಕರಗಿಸುವಂತಿತ್ತು. ಸಾಕಷ್ಟು ಗೆಳೆಯರನ್ನು, ಆಪ್ತರನ್ನು ಸಂಪಾದಿಸಿದ್ದ ಪ್ರತಿಭಾವಂತ ನಟ ದಿಲೀಪ್ ಅವರು ಮಣ್ಣಲ್ಲಿ ಮಣ್ಣಾದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ