
ಚಿತ್ರರಂಗವೇ ಹಾಗೆ ಇಲ್ಲಿ ಸಾಕಷ್ಟು ಅನಿಶ್ಚಿತತೆಗಳು, ಒಂದೇ ಒಂದು ಸಿನಿಮಾ (Cinema) ಎಂಥಹವರನ್ನು ದೊಡ್ಡ ಸ್ಟಾರ್ಗಳನ್ನಾಗಿ ಮಾಡಿ ಬಿಡುತ್ತದೆ. ಒಂದೇ ಒಂದು ಸೋಲು ದೊಡ್ಡ ಸ್ಟಾರ್ಗಳನ್ನು ನೆಲಕಚ್ಚುವಂತೆ ಮಾಡಿ ಬಿಡುತ್ತದೆ. ಇಂಥಹಾ ಸಾಕಷ್ಟು ಉದಾಹರಣೆಗಳು ಚಿತ್ರರಂಗದಲ್ಲಿ ಈಗಾಗಲೇ ಇವೆ. ಇದೀಗ ಇದಕ್ಕೆ ಹೊಸದೊಂದು ಉದಾಹರಣೆ ಸೇರ್ಪಡೆ ಆಗಲಿಕ್ಕಿದೆ. ಅದುವೇ ಒಂದು ಕಾಲದ ಸೂಪರ್ ಸ್ಟಾರ್ ನಿರ್ದೇಶಕ ಶಂಕರ್ ಅವರದ್ದು.
ಭಾರತೀಯ ಚಿತ್ರರಂಗಕ್ಕೆ ಅದ್ಧೂರಿತನ, ಪ್ಯಾನ್ ಇಂಡಿಯಾ ಕಾನ್ಸೆಪ್ಟನ್ನು ಮೊದಲು ಪರಿಚಯಿಸಿದ್ದೇ ನಿರ್ದೇಶಕ ಶಂಕರ್. 100 ಕೋಟಿ ಬಜೆಟ್ ಎಂಬುದನ್ನು ಊಹೆ ಸಹ ಮಾಡಲು ಸಾಧ್ಯವಿರದಿದ್ದ ಸಮಯದಲ್ಲಿ ರಜನೀಕಾಂತ್ ಅವರನ್ನು ಹಾಕಿಕೊಂಡು ನೂರು ಕೋಟಿ ಬಜೆಟ್ನಲ್ಲಿ ‘ರೋಬೊ’ ಸಿನಿಮಾ ನಿರ್ದೇಶಿಸಿ ಭಾರಿ ದೊಡ್ಡ ಗೆಲುವು ಸಂಪಾದಿಸಿದ್ದರು ಶಂಕರ್. ಅವರ ನಿರ್ದೇಶನದ ‘ಜಂಟಲ್ಮ್ಯಾನ್’, ‘ಬಾಯ್ಸ್’, ‘ಅನ್ನಿಯನ್’, ‘ಇಂಡಿಯನ್’ ಸಿನಿಮಾಗಳೆಲ್ಲ ಅದ್ಧೂರಿತನ, ಭಿನ್ನತೆ, ತಂತ್ರಜ್ಞಾನ ನೈಪುಣ್ಯತೆಯನ್ನು ಹೊಂದಿದ್ದವು. ರಾಜಮೌಳಿಗೂ ಮುಂಚೆ ಭಾರತದ ಸೂಪರ್ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದರು ಶಂಕರ್.
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಶಂಕರ್ ಅವರಿಗೆ ಈಗ ನಿರ್ಮಾಪಕ ಸಿಗದಾಗಿದ್ದಾರೆ. ಶಂಕರ್ ನಿರ್ದೇಶನದ ‘ರೋಬೊ 2’ ಮತ್ತು ‘ಇಂಡಿಯನ್ 2’, ‘ಗೇಮ್ ಚೇಂಜರ್’ ಸಿನಿಮಾಗಳು ಒಂದರ ಹಿಂದೊಂದರಂತೆ ಸೋತ ಬೆನ್ನಲ್ಲೆ ಅವರ ಸಿನಿಮಾಕ್ಕೆ ಬಂಡವಾಳ ಹೂಡಲು ಯಾರೂ ಮುಂದೆ ಬರುತ್ತಿಲ್ಲ. ಶಂಕರ್ ಅವರು ತಮ್ಮ ಬಹು ವರ್ಷದ ಕನಸಾಗಿದ್ದ ‘ವೆಲ್ಪಾರಿ’ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದು, ಇದಕ್ಕೆ ನಿರ್ಮಾಪಕರು ಸಿಕ್ಕಿರಲಿಲ್ಲ.
ಇದನ್ನೂ ಓದಿ:ಒಟಿಟಿಯಲ್ಲಿ ಬ್ಲಾಕ್ ಬಸ್ಟರ್ ಕೊಟ್ಟ ಬಳಿಕ, ದೊಡ್ಡ ಪರದೆಯತ್ತ ಶಾರುಖ್ ಪುತ್ರ ಆರ್ಯನ್
‘ವೆಲ್ಪಾರಿ’ ಸಿನಿಮಾವು ತಮಿಳಿನ ಜನಪ್ರಿಯ ‘ವೀರ ಯುಗ ನಾಯಗನ್ ವೆಲ್ಪಾರಿ’ ಕಾದಂಬರಿ ಆಧರಿಸಿದ ಸಿನಿಮಾ ಆಗಿದ್ದು, ಈ ಕಾದಂಬರಿಯನ್ನು ಸಿನಿಮಾ ಆಗಿಸುವುದು ಶಂಕರ್ ಅವರ ಬಹು ವರ್ಷಗಳ ಕನಸಾಗಿತ್ತು. ಇದೀಗ ಕೊನೆಗೂ ಒಬ್ಬ ನಿರ್ಮಾಪಕರು ಸಿಕ್ಕಿದ್ದಾರಾದರೂ ಶಂಕರ್ ಅವರ ಮೇಲೆ ಬಜೆಟ್ ನಿರ್ಬಂಧನೆಗಳನ್ನು ನಿರ್ಮಾಪಕರು ಹೇರಿದ್ದಾರೆ. ಒಂದು ಕಾಲದಲ್ಲಿ ಬಜೆಟ್ ನಿರ್ಬಂಧಗಳೇ ಇಲ್ಲದೆ ಸಿನಿಮಾ ಮಾಡಿದ್ದ ಶಂಕರ್ ಈಗ ದಶಕಗಳಲ್ಲಿ ಮೊದಲ ಬಾರಿಗೆ ಬಜೆಟ್ ನಿರ್ಬಂಧನೆಗೆ ಒಳಪಟ್ಟು ಸಿನಿಮಾ ನಿರ್ದೇಶಿಸಬೇಕಿದೆ.
ವಿಶೇಷವೆಂದರೆ ಶಂಕರ್ ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ತಮಿಳಿನ ನಿರ್ಮಾಪಕ ಅಥವಾ ದಕ್ಷಿಣದ ನಿರ್ಮಾಪಕರಲ್ಲ ಬದಲಿಗೆ ಬಾಲಿವುಡ್ನ ನಿರ್ಮಾಣ ಸಂಸ್ಥೆ. ದಕ್ಷಿಣದ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದ ನಿರ್ಮಾಣ ಸಂಸ್ಥೆಯೊಂದು ಇದೀಗ ಶಂಕರ್ ಅವರ ಹೊಸ ಸಿನಿಮಾಕ್ಕೆ ಬಂಡವಾಳ ಹೂಡಲು ಮುಂದಾಗಿದೆ.
ಹಿಂದಿಯ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮತ್ತು ದಕ್ಷಿಣದ ‘ಆರ್ಆರ್ಆರ್’ ಇತ್ತೀಚೆಗಿನ ‘ಲೋಕಃ’ ಸೇರಿದಂತೆ ಹಲವು ಸಿನಿಮಾಗಳ ವಿತರಣೆ ಮಾಡಿರುವ ಪೆನ್ ಸ್ಟುಡಿಯೋಸ್, ಶಂಕರ್ ಅವರ ಹೊಸ ಸಿನಿಮಾಕ್ಕೆ ಬಂಡವಾಳ ಹೂಡಲಿದೆ. ಶಂಕರ್ ಜೊತೆಗೆ ಬಜೆಟ್ ಸೇರಿದಂತೆ ಹಲವು ವಿಷಯಗಳಿಗೆ ಕಠಿಣವಾದ ಒಪ್ಪಂದಗಳನ್ನು ಪೆನ್ ಸ್ಟುಡಿಯೋಸ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ‘ವೆಲ್ಪಾರಿ’ ಸಿನಿಮಾದ ಪ್ರೀ ಪ್ರೊಡಕ್ಷನ್ ಅನ್ನು ಶಂಕರ್ ಪ್ರಾರಂಭ ಮಾಡಿದ್ದಾರೆ. ಸಿನಿಮಾದ ನಾಯಕ, ನಾಯಕಿ ಇನ್ನಿತರೆ ಮಾಹಿತಿಯನ್ನು ಶಂಕರ್ ಅವರು ಇನ್ನಷ್ಟೆ ಹಂಚಿಕೊಳ್ಳಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ