AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭೋಲಾ ಶಂಕರ್​’ ವಿರುದ್ಧ ದಾಖಲಿಸಿದ್ದ ಅರ್ಜಿ ವಜಾ: ನಿರ್ಮಾಪಕ ನಿರಾಳ

Bhola Shankar: ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಭೋಲಾ ಶಂಕರ್' ಸಿನಿಮಾದ ಬಿಡುಗಡೆ ತಡೆಯಲು ಮಾಡಲಾಗಿದ್ದ ಯತ್ನ ವಿಫಲವಾಗಿದೆ.

'ಭೋಲಾ ಶಂಕರ್​' ವಿರುದ್ಧ ದಾಖಲಿಸಿದ್ದ ಅರ್ಜಿ ವಜಾ: ನಿರ್ಮಾಪಕ ನಿರಾಳ
ಭೋಲಾ ಶಂಕರ್
ಮಂಜುನಾಥ ಸಿ.
|

Updated on: Aug 10, 2023 | 9:34 PM

Share

ರಜನೀಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾ ಇಂದು (ಆಗಸ್ಟ್ 10) ಬಿಡುಗಡೆ ಆಗಿದೆ. ಒಂದು ದಿನ ತಡವಾಗಿ ಅಂದರೆ ಆಗಸ್ಟ್ 11 ರಂದು ದಕ್ಷಿಣದ ಮತ್ತೊಬ್ಬ ಸೂಪರ್ ಸ್ಟಾರ್ ಚಿರಂಜೀವಿ ನಟನೆಯ ಹೊಸ ಸಿನಿಮಾ ಬಿಡುಗಡೆ ಆಗುತ್ತಿದೆ. ಅದುವೇ ‘ಭೋಲಾ ಶಂಕರ್‘ (Bhola Shankar). ಆದರೆ ಸಿನಿಮಾ ಬಿಡುಗಡೆ ಹತ್ತಿರ ಬಂದಾಗ ವಿತರಕನೊಬ್ಬ ಸಿನಿಮಾ ವಿರುದ್ಧ ಸಿನಿಮಾದ ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು, ಆದರೆ ನ್ಯಾಯಾಲಯದಲ್ಲಿ ವಿತರಕನಿಗೆ ಹಿನ್ನೆಡೆ ಆಗಿದೆ.

‘ಭೋಲಾ ಶಂಕರ್’ ಸಿನಿಮಾದ ವಿರುದ್ಧ ಸಿನಿಮಾ ವಿತರಕ ಹಾಗೂ ನಿರ್ಮಾಪಕರೂ ಆಗಿರುವ ವೈಜಾಗ್ ಸತೀಶ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ‘ಭೋಲಾ ಶಂಕರ್’ ಸಿನಿಮಾದ ನಿರ್ಮಾಪಕ ಅನಿಲ್ ಸುಂಕರ್ ಅವರಿಂದ ತಮಗೆ ಭಾರಿ ನಷ್ಟವಾಗಿದ್ದು, ನಷ್ಟವನ್ನು ಸರಿದೂಗಿಸಿಕೊಡಲು ಅವರ ನಿರ್ಮಾಣದ ಸಿನಿಮಾಗಳ ವಿತರಣೆ ಜಾವಾಬ್ದಾರಿಯನ್ನು ತಮಗೆ ನೀಡುವುದಾಗಿ ಅವರು ಭರವಸೆ ನೀಡಿದ್ದರು ಆದರೆ ಈಗ ಆ ಒಪ್ಪಂದವನ್ನು ಮುರಿದಿದ್ದಾರೆ ಎಂದು ವೈಜಾಗ್ ಸತೀಶ್ ಆರೋಪಿಸಿದ್ದರು. ‘ಭೋಲಾ ಶಂಕರ್’ ಸಿನಿಮಾದ ವಿತರಣೆ ಹಕ್ಕು ತಮಗೆ ಸಿಗಬೇಕಿತ್ತು, ಆದರೆ ಈಗ ಅದು ಬೇರೆಯವರ ಪಾಲಾಗಿರುವ ಕಾರಣ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕೆಂದು ವೈಜಾಗ್ ಸತೀಶ್ ಮನವಿ ಮಾಡಿದ್ದರು.

ಅನಿಲ್ ಸುಂಕರ್ ನಿರ್ಮಾಣ ಮಾಡಿದ್ದ ‘ಏಜೆಂಟ್’ ಸಿನಿಮಾವನ್ನು ವೈಜಾಗ್ ಸತೀಶ್ ವಿತರಣೆ ಮಾಡಿದ್ದರು. ಆ ಸಿನಿಮಾದಿಂದ ಭಾರಿ ನಷ್ಟವನ್ನು ಸತೀಶ್ ಅನುಭವಿಸಿದ್ದರು, ನಷ್ಟ ತುಂಬಿಕೊಡುವಂತೆ ಕೇಳಿದಾಗ, ತಮ್ಮ ನಿರ್ಮಾಣದ ಮುಂದಿನ ಎರಡು ಸಿನಿಮಾದ ವಿತರಣೆಯನ್ನು ನಿಮಗೆ ನೀಡುವುದಾಗಿ ಅನಿಲ್ ಸುಂಕರ್ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಭೋಲಾ ಶಂಕರ್ ವಿತರಣೆಯನ್ನು ಬೇರೆಯವರಿಗೆ ನೀಡಿ ಅನಿಲ್ ಒಪ್ಪಂದ ಮುರಿದ ಕಾರಣ ವೈಜಾಗ್ ಸತೀಶ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇದನ್ನೂ ಓದಿ:Chiranjeevi: ಚಿರಂಜೀವಿ ತೊಟ್ಟ ಈ ವಾಚ್​​ನಲ್ಲಿ ಎರಡು ಐಷಾರಾಮಿ ಕಾರು ಖರೀದಿಸಬಹುದು

ಪ್ರಸ್ತುತ ನ್ಯಾಯಾಲಯದಲ್ಲಿ ಅನಿಲ್ ಪರ ಆದೇಶ ಬಂದಿದ್ದು, ‘ಭೋಲಾ ಶಂಕರ್’ ಸಿನಿಮಾದ ಬಿಡುಗಡೆಗೆ ಯಾವುದೇ ಅಡೆತಡೆ ಇಲ್ಲದಂತಾಗಿದೆ. ಆದರೆ ಪ್ರಕರಣ ಇನ್ನೂ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ. ಅದು ಮಾತ್ರವೇ ಅಲ್ಲದೆ, ವಿತರಣಾ ಸಂಘದ ಕೆಲ ಸದಸ್ಯರು ಸಹ ಅನಿಲ್ ವಿರುದ್ಧ ಗರಂ ಆಗಿದ್ದು ‘ಭೋಲಾ ಶಂಕರ್’ ಸಿನಿಮಾವನ್ನು ವಿತರಣೆ ಮಾಡದಿರಲು ನಿಶ್ಚಯಿಸಿರುವ ಸುದ್ದಿಗಳು ಹರಿದಾಡಿದ್ದವು, ಆದರೆ ನ್ಯಾಯಾಲಯದಲ್ಲಿ ಅನಿಲ್ ಪರ ಆದೇಶ ಬಂದ ಬಳಿಕ ಮುನಿಸಿಕೊಂಡ ಇತರೆ ವಿತರಕರ ಬಳಿ ಮಾತನಾಡಿ ಸಮಸ್ಯೆ ಸರಿಪಡಿಸಲಾಗಿದೆ ಎನ್ನಲಾಗುತ್ತಿದೆ.

ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಸಿನಿಮಾ ಆಗಸ್ಟ್ 11 ರಂದು ತೆರೆಗೆ ಬರುತ್ತಿದೆ. ಸಿನಿಮಾವನ್ನು ಮೆಹೆರ್ ರಮೇಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕೀರ್ತಿ ಸುರೇಶ್, ಚಿರಂಜೀವಿ ಸಹೋದರಿಯ ಪಾತ್ರದಲ್ಲಿ ನಟಿಸಿದ್ದರೆ, ನಟಿ ತಮನ್ನಾ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ರವಿ ಶಂಕರ್, ಮುರಳಿ ಶರ್ಮಾ ಸೇರಿದಂತೆ ಇನ್ನೂ ಹಲವರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ