ನನ್ನನ್ನು ಮಾತ್ರ ಯಾಕೆ ಅರೆಸ್ಟ್ ಮಾಡಿದ್ದಾರೆ? ನ್ಯಾಯ ಕೇಳಿದ ಡ್ರೋನ್ ಪ್ರತಾಪ್

ತಮಗಿಂತ ಮೊದಲು ಇದೇ ಪ್ರಯೋಗವನ್ನು ಮಾಡಿದ ಅನೇಕರನ್ನು ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಡ್ರೋನ್ ಪ್ರತಾಪ್ ಅವರು ಪ್ರಶ್ನಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬಂದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೃಷಿಹೊಂಡದಲ್ಲಿ ಸೋಡಿಯಂ ಬಳಸಿ ಸ್ಫೋಟ ಮಾಡಿದ್ದಕ್ಕಾಗಿ ಡ್ರೋನ್ ಪ್ರತಾಪ್ ಅವರನ್ನು ಬಂಧಿಸಲಾಗಿತ್ತು. ಇಷ್ಟು ದಿನ ಅವರು ನ್ಯಾಯಾಂಗ ಬಂಧನದಲ್ಲಿದ್ದರು.

ನನ್ನನ್ನು ಮಾತ್ರ ಯಾಕೆ ಅರೆಸ್ಟ್ ಮಾಡಿದ್ದಾರೆ? ನ್ಯಾಯ ಕೇಳಿದ ಡ್ರೋನ್ ಪ್ರತಾಪ್
Drone Prathap
Edited By:

Updated on: Dec 24, 2024 | 7:59 PM

ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಇಂದು (ಡಿಸೆಂಬರ್​ 24) ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ಬ್ಲಾಸ್ಟ್​ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಜಾಮೀನು ಪಡೆದು ಅವರೀಗ ಜೈಲಿನಿಂದ ಹೊರಗೆ ಬಂದಿದ್ದಾರೆ. ಜೈಲಿನ ಎದುರು ಮಾಧ್ಯಮಗಳ ಜೊತೆ ಮಾತನಾಡಿದ ಡ್ರೋನ್ ಪ್ರತಾಪ್ ಅವರು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆ ಎಲ್ಲರನ್ನೂ ಬಿಟ್ಟು ತಮ್ಮನ್ನು ಮಾತ್ರ ಅರೆಸ್ಟ್ ಮಾಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

‘ನನ್ನದು ಒಂದೇ ಪ್ರಶ್ನೆ. ದೇಶಾದ್ಯಂತ ಇದೇ ಸೋಡಿಯಂ ಬಳಸಿ ವಿಜ್ಞಾನದ ನೂರಾರು ಪ್ರಯೋಗ ಮಾಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮೊಬೈಲ್ ಕೊಟ್ಟರೆ ತೋರಿಸುತ್ತೇನೆ. ಹಾಗಾದರೆ ಅವರನ್ನೆಲ್ಲ ಯಾಕೆ ಅರೆಸ್ಟ್ ಮಾಡಿಲ್ಲ? ನನ್ನ ಒಬ್ಬನನ್ನು ಮಾತ್ರ ಯಾಕೆ ಅರೆಸ್ಟ್ ಮಾಡಿದ್ದಾರೆ?’ ಎಂದು ಡ್ರೋನ್ ಪ್ರತಾಪ್ ಅವರು ಪ್ರಶ್ನೆ ಮಾಡಿದ್ದಾರೆ.

‘ನಮ್ಮ ದೇಶದಲ್ಲಿ ಆಗಿರಬಹುದು ಅಥವಾ ವಿದೇಶದಲ್ಲಿ ಆಗಿರಬಹುದು, ತುಂಬ ಜನ ಯೂಟ್ಯೂಬರ್​ಗಳು ಇದನ್ನು ಮಾಡಿದ್ದಾರೆ. ಐಪಿಸಿ ಎಂಬುದು ದೇಶದಲ್ಲಿ ಎಲ್ಲರಿಗೂ ಒಂದೇ. ಕಾನೂನು ಎಲ್ಲರಿಗೂ ಒಂದೇ. ಒಬ್ಬೊಬ್ಬರಿಗೆ ಒಂದೊಂದು ಥರ ಅಲ್ಲ. ಬೇರೆಯವರೆಲ್ಲ ಕೆಜಿಗಟ್ಟಲೆ ಸೋಡಿಯಂ ಬಳಸಿ ಪ್ರಯೋಗ ಮಾಡಿದ್ದಾರೆ. ಆದರೆ ನನ್ನನ್ನು ಮಾತ್ರ ಅರೆಸ್ಟ್ ಮಾಡಿದ್ದು ಯಾಕೆ’ ಎಂದು ಡ್ರೋನ್ ಪ್ರತಾಪ್ ಕೇಳಿದ್ದಾರೆ.

‘ಕ್ರೇಜಿ ಎಕ್ಸ್​ವೈಜಡ್​, ಮಿಸ್ಟರ್​ ಹ್ಯಾಕರ್​ ಹಾಗೂ ಸಾಕಷ್ಟು ಜನ ಯೂಟ್ಯೂಬರ್​ಗಳು ಇಂಥ ಪ್ರಯೋಗ ಮಾಡಿದ್ದಾರೆ. ಇಂಥ ಯಾರ ಮೇಲೂ ಕೇಸ್ ಮಾಡಿಲ್ಲ. ನನ್ನ ಮೇಲೆ ಮಾತ್ರ ಕ್ರಮ ಕೈಗೊಂಡಿದ್ದಕ್ಕೆ ಉದ್ದೇಶ ಏನು ಎಂಬುದು ನೀವೇ ಹುಡುಕಬೇಕು. ನಾನು ಆ ಪ್ರಯೋಗ ಮಾಡಿದ್ದು ವಿಜ್ಞಾನ ಮತ್ತು ಶಿಕ್ಷಣದ ಉದ್ದೇಶಕ್ಕೆ ಅಂತ ಸೂಚನೆ ನೀಡಿಯೇ ಆ ವಿಡಿಯೋ ಹಾಕಿದ್ದೇನೆ’ ಎಂದಿದ್ದಾರೆ ಡ್ರೋನ್ ಪ್ರತಾಪ್.

ಡ್ರೋನ್ ಪ್ರತಾಪ್​ಗೆ ಮತ್ತಷ್ಟು ಸಂಕಷ್ಟ: ಮುಖ್ಯಮಂತ್ರಿಗಳ ಕಚೇರಿಯಿಂದ ಬಂತು ಮಹತ್ವದ ಸೂಚನೆ

‘ಅದು ಸರಳವಾದ ವಿಜ್ಞಾನದ ಪ್ರಯೋಗ. ಹೈಸ್ಕೂಲ್​ ಪಠ್ಯ ಪುಸ್ತಕದಲ್ಲಿ ಆ ಪ್ರಯೋಗ ಇದೆ. ಶಾಲೆ, ಕಾಲೇಜಿನಲ್ಲಿ ಸೋಡಿಯಂ ತುಂಬ ಸುಲಭವಾಗಿ ಲಭ್ಯವಿದೆ. ಅದನ್ನು ಸ್ಫೋಟಕ ಅಂತ ತೋರಿಸಿ ದೊಡ್ಡದು ಮಾಡುವಂಥದ್ದು ಏನೂ ಇರಲಿಲ್ಲ’ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.