ಚೈತ್ರಾ ಅನಾರೋಗ್ಯದ ವಿಚಾರ ಇಟ್ಟುಕೊಂಡು ಪದೇ ಪದೇ ಬರುತ್ತಿವೆ ಚುಚ್ಚು ಮಾತು
ಚೈತ್ರಾ ಕುಂದಾಪುರ ಅವರ ಅನಾರೋಗ್ಯದ ವಿಚಾರವನ್ನು ಇಟ್ಟುಕೊಂಡು ರಜತ್ ಕೆಣಕಿದ್ದಾರೆ. ಚುಚ್ಚುಮಾತಿನ ಮೂಲಕ ತಿವಿದಿದ್ದಾರೆ. ಅದನ್ನು ಕೇಳಿಸಿಕೊಂಡು ಚೈತ್ರಾ ಕುಂದಾಪುರ ಅವರಿಗೆ ನೋವಾಗಿದೆ. ಈ ವಿಚಾರವನ್ನು ಭವ್ಯಾ ಗೌಡ ಬಳಿ ಹೇಳಿಕೊಂಡು ಚೈತ್ರಾ ಕಣ್ಣೀರು ಹಾಕಿದ್ದಾರೆ. ಮಧ್ಯರಾತ್ರಿ ಕುಳಿತು ಅತ್ತಿದ್ದಾರೆ. ಅಲ್ಲದೇ ದೇವರ ಮೊರೆ ಹೋಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ಬಂದಿರುವ ಚೈತ್ರಾ ಕುಂದಾಪುರ ಅವರು 86 ದಿನಗಳನ್ನು ಕಳೆದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಕಣ್ಣೀರು ಹಾಕುವುದನ್ನು ಹೆಚ್ಚು ಮಾಡಿದ್ದಾರೆ. ಈ ಮೊದಲು ಚೈತ್ರಾ ಮಾಡಿದ ಅನೇಕ ತಪ್ಪುಗಳನ್ನು ಇಟ್ಟುಕೊಂಡು ದೊಡ್ಮನೆಯ ಮಂದಿ ಲೇವಡಿ ಮಾಡುತ್ತಿದ್ದಾರೆ. ಕೆಲವರಿಂದ ಚುಚ್ಚು ಮಾತುಗಳು ಕೂಡ ಬರುತ್ತಿವೆ. ಇದರಿಂದಾಗಿ ಚೈತ್ರಾ ಅವರಿಗೆ ಇನ್ನಷ್ಟು ನೋವಾಗುತ್ತಿದೆ. ಅದರಲ್ಲೂ ಅನಾರೋಗ್ಯದ ವಿಚಾರವನ್ನು ಇಟ್ಟುಕೊಂಡು ಚುಚ್ಚು ಮಾತುಗಳನ್ನು ಆಡಿದ್ದನ್ನು ಚೈತ್ರಾಗೆ ಸಹಿಸಲು ಸಾಧ್ಯವಾಗುತ್ತಿಲ್ಲ.
85ನೇ ದಿನ ಚೈತ್ರಾ ಕುಂದಾಪುರ ಅವರು ಆ್ಯಕ್ಟೀವ್ ಆಗಿದ್ದರು. ಆಗ ಅವರನ್ನು ರಜತ್ ಕೆಣಕಿದರು. ‘ಈಗ ಚೈತ್ರಾಗೆ ಜ್ವರ ಎಲ್ಲಿಗೆ ಹೋಯ್ತು? ಇವತ್ತು ಸೋಮವಾರ ಅಲ್ಲವೇ? ನನಗೆ ಗೊತ್ತೇ ಆಗಲಿಲ್ಲ’ ಎಂದು ರಜತ್ ಅವರು ಹೇಳಿದರು. ಅದನ್ನು ಕೇಳಿ ಚೈತ್ರಾಗೆ ನೋವಾಯಿತು. ಅಲ್ಲಿಯವರೆಗೂ ಆ್ಯಕ್ಟೀವ್ ಆಗಿದ್ದ ಅವರು ಕೂಡಲೇ ಡಲ್ ಆದರು. ಅಲ್ಲದೇ ಕಣ್ಣೀರು ಹಾಕಲು ಶುರು ಮಾಡಿದರು.
ಇದನ್ನೂ ಓದಿ: ಅನಾರೋಗ್ಯದ ನಾಟಕ? ಮತ್ತೆ ಕಿಚ್ಚನಿಂದ ಬೈಯ್ಯಿಸಿಕೊಂಡ ಚೈತ್ರಾ
ತಾವು ಆರೋಗ್ಯದ ವಿಚಾರದಲ್ಲಿ ಡ್ರಾಮಾ ಮಾಡುತ್ತಿಲ್ಲ ಎಂಬುದನ್ನು ಚೈತ್ರಾ ಅವರು ಭವ್ಯಾ ಬಳಿ ಹೇಳಿಕೊಂಡು ಅತ್ತಿದ್ದಾರೆ. ‘ನನಗೆ ಇಂದು ಯಾಕೆ ಡ್ರಿಪ್ಸ್ ಹಾಕಿದರು. ಗುರುವಾರ ಒಂಥರ, ಸೋಮವಾರ ಇನ್ನೊಂಥರ ಇರುತ್ತಾರೆ ಎಂಬುದನ್ನು ಸುಳ್ಳು ಅಂತ ನಾನು ಸಾಬೀತು ಮಾಡಬೇಕು. ಸುಮ್ಮನೇ ಇದ್ದರೆ ಬಲಿ ಕಾ ಬಕ್ರಾ ಮಾಡುತ್ತಾರೆ. ಇನ್ಮುಂದೆ ನಾನು ಯಾವುದೇ ಔಷಧಿ ಸೇವಿಸಲ್ಲ’ ಎಂದು ಚೈತ್ರಾ ಹಠ ಮಾಡಿದರು.
ಇದನ್ನೂ ಓದಿ: ‘ನನಗೆ ಬಿಗ್ ಬಾಸ್ ಸರಿಯಲ್ಲ, ತಪ್ಪು ನಿರ್ಧಾರ ಮಾಡಿದೆ’: ಚೈತ್ರಾ ಕುಂದಾಪುರ ವಿಷಾದ
ತಮ್ಮ ನಿರ್ಧಾರದ ಬಗ್ಗೆ ಚೈತ್ರಾ ಕುಂದಾಪುರ ಅವರಿಗೆ ಗೊಂದಲಗಳು ಇವೆ. ಹಾಗಾಗಿ ಅವರು ಮಧ್ಯರಾತ್ರಿಯೇ ದೇವರ ಮುಂದೆ ಬಂದು ನಿಂತಿದ್ದಾರೆ. ದೇವರ ವಿಗ್ರಹದ ಎರಡೂ ಭುಜದ ಮೇಲೆ ಎರಡು ಬೇರೆ ಬೇರೆ ಚೀಟಿಯನ್ನು ಇಟ್ಟು ಕೈಮುಗಿದು ಕುಳಿತಿದ್ದಾರೆ. ಎಡಭುಜದ ಮೇಲಿಂದ ಚೀಟಿ ಬಿದ್ದಿದೆ. ಅದನ್ನು ಎತ್ತಿಕೊಂಡ ಬಳಿಕ ಚೈತ್ರಾ ನಿದ್ರೆ ಮಾಡಿದರು. ಮರುದಿನ ಬೆಳಗ್ಗೆ ಎದ್ದು ತಿಂಡಿ ಸೇವಿಸಿ ಮಾತ್ರೆ ತೆಗೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.