‘ನನಗೆ ಬಿಗ್ ಬಾಸ್ ಸರಿಯಲ್ಲ, ತಪ್ಪು ನಿರ್ಧಾರ ಮಾಡಿದೆ’: ಚೈತ್ರಾ ಕುಂದಾಪುರ ವಿಷಾದ
ಹೊರ ಜಗತ್ತಿನಲ್ಲಿ ಬಣ್ಣ ಬಣ್ಣದ ಭಾಷಣಗಳ ಮೂಲಕ ಇಮೇಜ್ ಕಟ್ಟಿಕೊಂಡಿದ್ದ ಚೈತ್ರಾ ಕುಂದಾಪುರ ಅವರ ಬಣ್ಣ ಈಗ ಬಿಗ್ ಬಾಸ್ ಮನೆಯಲ್ಲಿ ಬಯಲಾಗಿದೆ. ಮಾತಿನ ಬಲದಿಂದಲೇ ಗೆಲ್ಲಬಲ್ಲೆ ಎಂಬ ಭ್ರಮೆಯಲ್ಲಿ ಇದ್ದ ಚೈತ್ರಾ ಅವರಿಗೆ ಬಿಗ್ ಬಾಸ್ ಶೋನಲ್ಲಿ ಮಾತೇ ಮುಳುವಾಗಿದೆ. ಅದು ಅವರಿಗೂ ಅರ್ಥ ಆಗಿದೆ. ಬಿಗ್ ಬಾಸ್ಗೆ ಬಂದಿದ್ದು ತಮ್ಮ ತಪ್ಪು ಎಂದು ಅವರು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಅವರು ಹೆಜ್ಜೆ ಹೆಜ್ಜೆಗೂ ಸುಳ್ಳು ಹೇಳುತ್ತಾರೆ ಎಂದು ಬಿಗ್ ಬಾಸ್ ಮನೆಯ ಬಹುತೇಕರು ಆರೋಪಿಸಿದ್ದಾರೆ. ವೀಕೆಂಡ್ ಬಂದ ಕೂಡಲೇ ಅನಾರೋಗ್ಯ ಎನ್ನುವ ಅವರ ವರ್ತನೆ ಬಗ್ಗೆ ಸ್ವತಃ ಸುದೀಪ್ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ಬಿಗ್ ಬಾಸ್ ಮನೆಯ ಮೂಲ ನಿಯಮವನ್ನು ಮುರಿದಾಗಲೂ ಚೈತ್ರಾಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಚೈತ್ರಾ ಅವರ ಒಂದೊಂದು ಮಾತು ಕೂಡ ಬಿಗ್ ಬಾಸ್ ಮಂದಿಗೆ ಕಿರಿಕಿರಿ ಆಗುತ್ತಿದೆ. ಇದೇ ವಿಚಾರದಿಂದ ಚೈತ್ರಾಗೆ ನೋವಾಗಿದೆ. ಅದನ್ನು ಹೇಳಿಕೊಂಡು ಅವರು ಕಣ್ಣೀರು ಹಾಕಿದ್ದಾರೆ.
ಕಳೆದ ವೀಕೆಂಡ್ನಲ್ಲಿ ಚೈತ್ರಾ ಕುಂದಾಪುರ ಅವರನ್ನು ಅನೇಕರು ಕಸಕ್ಕೆ ಹೋಲಿಸಿದರು. ಅದಕ್ಕೆ ಎಲ್ಲರೂ ನೀಡಿದ ಪ್ರಮುಖ ಕಾರಣವೇ ಮಾತು. ಈ ಎಲ್ಲ ಘಟನೆಗಳಿಂದ ಚೈತ್ರಾಗೆ ಬೇಸರ ಆಗಿದೆ. ‘ಬಿಗ್ ಬಾಸ್ ನನಗೆ ಅಲ್ಲ. ತಪ್ಪು ನಿರ್ಧಾರ ತೆಗೆದುಕೊಂಡೆ. ಶಾಲೆಗೆ ಹೋಗುವವರು ಶಾಲೆಗೆ ಹೋಗಬೇಕು. ದೇವಸ್ಥಾನಕ್ಕೆ ಹೋಗುವವರು ಶಾಲೆಗೆ ಹೋಗಬೇಕು. ಪಬ್ಗೆ ಹೋಗುವವರು ಪಬ್ಗೆ ಹೋಗಬೇಕು. ನನ್ನಂಥವಳು ಇಲ್ಲಿಗೆ ಬರಬಾರದಾಗಿತ್ತು’ ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದಾರೆ.
‘ಇಲ್ಲಿನ ಪರಿಸ್ಥಿತಿಯನ್ನು ಎದುರಿಸಬೇಕು ಅಂತ ತುಂಬಾ ಸಲ ಅಂದುಕೊಳ್ಳುತ್ತೇನೆ. ಆದರೆ ಆಗಲ್ಲ. ನನ್ನ ಮಾತು ಕಿರಿಕಿರಿ ಅಂತ ಯಾರೂ ಹೇಳಿರಲಿಲ್ಲ. ಮಾತು ನನಗೆ ಅನ್ನ ಕೊಟ್ಟಿದೆ, ಬದುಕನ್ನು ಕೊಟ್ಟಿದೆ. ಆದರೆ ಕಿರಿಕಿರಿ ಅಂತ ಯಾರೂ ಹೇಳಿರಲಿಲ್ಲ’ ಎಂದು ಹೇಳಿಕೊಂಡು ಚೈತ್ರಾ ಕುಂದಾಪುರ ಅವರು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ತ್ರಿವಿಕ್ರಮ್ನ ಹೊರಗೆ ಕಳಿಸಿ ಮತ್ತೆ ವಾಪಸ್ ಕರೆಸಿದ್ದು ಯಾಕೆ? ಕಾರಣ ತಿಳಿಸಿದ ಸುದೀಪ್
ಏನೇ ಆದರೂ ಕೂಡ ಚೈತ್ರಾ ಅವರು ತಮ್ಮ ಮಾತಿನ ಧಾಟಿಯನ್ನು ಬದಲಾಯಿಸಿಕೊಂಡಿಲ್ಲ. ನಿಖರವಾಗಿ ವಾದ ಮಾಡುವ ಬದಲು ಕೇವಲ ಏರುಧ್ವನಿಯಲ್ಲಿ ಜಗಳ ಮಾಡುತ್ತಿದ್ದಾರೆ. ಅದನ್ನೇ ಮಾತುಗಾರಿಕೆ ಎಂಬ ಭ್ರಮೆಯಲ್ಲಿ ಅವರು ಇದ್ದಾರೆ. ಟಾಸ್ಕ್ ಆಡುವುದರಲ್ಲೂ ಅವರು ಹಿಂದೆ ಉಳಿದಿದ್ದಾರೆ. ಉಸ್ತುವಾರಿ ಮಾಡುವಾಗ ಪಕ್ಷಪಾತ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ಅವರಿಗೆ ಹಿನ್ನೆಡೆ ಆಗಿದೆ. ಚೈತ್ರಾಗೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಐಶ್ವರ್ಯಾ ಅವರು ಚೈತ್ರಾಗೆ ಖಡಕ್ ಮಾತುಗಳಿಂದ ಎಚ್ಚರಿಕೆ ನೀಡಿದ್ದಾರೆ. ಸೋಮವಾರದ (ಡಿ.23) ಸಂಚಿಕೆಯಲ್ಲಿ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.