ಎಂಟು ಗಂಟೆ ಕೆಲಸದ ಅವಧಿ: ದುಲ್ಕರ್ ಸಲ್ಮಾನ್, ರಾಣಾ ಅಭಿಪ್ರಾಯವೇ ಬೇರೆ

Dulquer Salmaan-Rana Daggubati: ದೀಪಿಕಾ ಪಡುಕೋಣೆಯ ಎಂಟು ಗಂಟೆ ಮಾತ್ರವೇ ಕೆಲಸ ನಿಯಮ ಚಿತ್ರರಂಗದಲ್ಲಿ ಚರ್ಚೆ ಹುಟ್ಟುಹಾಕಿದೆ. ದೀಪಿಕಾರ ನಿರ್ಣಯದ ಬಗ್ಗೆ ಭಿನ್ನ-ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದೀಗ ನಟ ಮತ್ತು ನಿರ್ಮಾಪಕರೂ ಆಗಿರುವ ದುಲ್ಕರ್ ಸಲ್ಮಾನ್ ಮತ್ತು ರಾಣಾ ದಗ್ಗುಬಾಟಿ ಅವರುಗಳು ದೀಪಿಕಾ ಅಭಿಪ್ರಾಯಕ್ಕೆ ಸಂಪೂರ್ಣ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಂಟು ಗಂಟೆ ಕೆಲಸದ ಅವಧಿ: ದುಲ್ಕರ್ ಸಲ್ಮಾನ್, ರಾಣಾ ಅಭಿಪ್ರಾಯವೇ ಬೇರೆ
Dulquer Deepika Rana

Updated on: Dec 03, 2025 | 3:26 PM

ಸಿನಿಮಾ ರಂಗದಲ್ಲಿ (Movie Industry) ಕೆಲಸಕ್ಕೆ ಅವಧಿ ನಿಗದಿ ಇಲ್ಲ. ಹಲವಾರು ವಿಭಾಗಗಳು ಒಟ್ಟಿಗೆ ಸೇರಿ ಮಾಡುವ ಕೆಲಸವಾದ್ದರಿಂದ ಇಲ್ಲಿ ಇಂತಿಷ್ಟೇ ಗಂಟೆಗೆ ಪ್ರಾರಂಭ, ಇಂತಿಷ್ಟೇ ಗಂಟೆಗೆ ಮುಕ್ತಾಯ ಎಂಬ ನಿಯಮವಿಲ್ಲ. ಆದರೆ ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ, ತಾವು ಎಂಟು ಗಂಟೆ ಮಾತ್ರವೇ ಕೆಲಸ ಮಾಡುವುದಾಗಿ ಹೇಳಿರುವ ವಿಚಾರ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ದೀಪಿಕಾ ಪಡುಕೋಣೆ ತೆಲುಗಿನ ಎರಡು ಸಿನಿಮಾಗಳನ್ನು ಕಳೆದುಕೊಂಡಿದ್ದಾರೆ ಸಹ. ಆದರೆ ದೀಪಿಕಾ, ತಮ್ಮ ನಿರ್ಣಯಕ್ಕೆ ಬದ್ಧರಾಗಿದ್ದಾರೆ. ದೀಪಿಕಾ ನಿರ್ಣಯದ ಬಗ್ಗೆ ಸಿನಿಮಾ ರಂಗದ ಹಲವರು ಬೇರೆ ಬೇರೆ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ನಟ ಮತ್ತು ನಿರ್ಮಾಪಕ ಜೋಡಿಯಾದ ದುಲ್ಕರ್ ಸಲ್ಮಾನ್ ಮತ್ತು ರಾಣಾ ದಗ್ಗುಬಾಟಿ ಅವರುಗಳು ಈ ಬಗ್ಗೆ ಮಾತನಾಡಿದ್ದು, ಸಂಪೂರ್ಣ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯೂಟ್ಯೂಬ್ ಚಾನೆಲ್​​ನ ರೌಂಡ್ ಟೇಬಲ್ ಸಂವಾದದಲ್ಲಿ ಭಾಗಿ ಆಗಿದ್ದ ದುಲ್ಕರ್ ಸಲ್ಮಾನ್, ‘ಮಲಯಾಳಂ ಚಿತ್ರರಂಗದಲ್ಲಿ ಕೆಲಸದ ಅವಧಿ ನಿಗದಿ ಆಗಿಲ್ಲ. ನಾವು ಕೆಲಸ ಮಾಡುತ್ತಲೇ ಇರುತ್ತೇವೆ. ಎರಡು ಅಥವಾ ಮೂರು ದಿನಗಳಲ್ಲಿ ಆಗುವ ಕೆಲಸವನ್ನು ಒಂದು ದಿನದಲ್ಲಿ ಮುಗಿಸುವುದು ನಮ್ಮ ಗುರಿ ಆಗಿರುತ್ತದೆ. ಒಂದು ದಿನ ಶೂಟಿಂಗ್ ಹೆಚ್ಚಾದರೆ ಹೆಚ್ಚುವರಿ ಖರ್ಚಾಗುತ್ತದೆ, ಹಾಗೆ ಆಗುವುದು ಬೇಡ ಎಂಬುದು ಎಲ್ಲರ ಆದ್ಯತೆ ವಿಷಯ ಆಗಿರುತ್ತದೆ. ಪ್ಯಾಕಪ್ ಎಷ್ಟು ಹೊತ್ತಿಗೆ ಆಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಶೂಟಿಂಗ್ ಪ್ಯಾಕಪ್ ಎಂದು ಘೋಷಿಸುತ್ತಿದ್ದಂತೆ ಎಲ್ಲರೂ ಒಟ್ಟಿಗೆ ಚಪ್ಪಾಳೆ ಹೊಡೆಯುತ್ತಾರೆ’ ಎಂದಿದ್ದಾರೆ.

‘ನಾನು ನಿರ್ಮಾಪಕನಾಗಿ ಯಾರಿಗಾದರೂ ರಜೆ ಕೊಡಲು ಮುಂದಾದರೆ ಅವರು ತೆಗೆದುಕೊಳ್ಳುವುದಿಲ್ಲ. ಕೆಲಸ ಉಗಿಸಿ ಮನೆಗೆ ಹೋಗುವುದೇ ಅವರ ಆದ್ಯತೆ ಆಗಿರುತ್ತದೆ. ಎಲ್ಲರಿಗೂ ಸಹ ಕೆಲಸ ಮುಗಿಸುವುದೇ ಮುಖ್ಯ ಆಗಿರುತ್ತದೆ’ ಎಂದಿದ್ದಾರೆ ದುಲ್ಕರ್ ಸಲ್ಮಾನ್.

ಇದನ್ನೂ ಓದಿ:ಬಾಲಿವುಡ್ ಮಾಡಿದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಇನ್ನು ರಾಣಾ ದಗ್ಗುಬಾಟಿ ಸಹ ಇದೇ ವಿಷಯವಾಗಿ ಮಾತನಾಡಿದ್ದು, ‘ಸಿನಿಮಾ ಎಂಬುದು ಕೇವಲ ಉದ್ಯೋಗ ಅಲ್ಲ, ಅದು ಜೀವನಶೈಲಿ. ನಿಮಗೆ ಅದರ ಒಳಗೆ ಇರಬೇಕೋ ಬೇಡವೊ ನೀವು ನಿರ್ಧರಿಸಬೇಕು. ಎಂಟು ಗಂಟೆಯಲ್ಲಿ ಶೂಟಿಂಗ್ ಮುಗಿಸಿ ಮನೆಗೆ ಹೋಗುತ್ತೀನಿ ಎನ್ನುವುದಕ್ಕೆ ಇದು ಕಾರ್ಖಾನೆ ಕೆಲಸ ಅಲ್ಲ. ಎಂಟು ಗಂಟೆ ಕೂತು ಒಳ್ಳೆಯ ಕೆಲವು ದೃಶ್ಯಗಳನ್ನು ತೆಗೆಯಬಹುದು, ಒಮ್ಮೊಮ್ಮೆ 50 ಗಂಟೆ ಕೆಲಸ ಮಾಡಿದರೂ ಆಗುವುದಿಲ್ಲ’ ಎಂದಿದ್ದಾರೆ ಅವರು.

ಇತ್ತೀಚೆಗಷ್ಟೆ ತಾಯಿ ಆಗಿರುವ ನಟಿ ದೀಪಿಕಾ ಪಡುಕೋಣೆ, ತಾವು ಇನ್ನು ಮುಂದೆ ಕೇವಲ ಎಂಟು ಗಂಟೆ ಮಾತ್ರವೇ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಎಂಟು ಗಂಟೆ ಮಾತ್ರವೇ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರಂತೆ ನಟಿ ದೀಪಿಕಾ. ನಟಿಯ ಈ ನಿರ್ಧಾರಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ದಿನಕ್ಕೆ ಕೇವಲ ಎಂಟು ಗಂಟೆ ಮಾತ್ರವೇ ಕೆಲಸ ಮಾಡುತ್ತಾರೆ. ಅಜಯ್ ದೇವಗನ್ ಸಹ ಎಂಟು ಗಂಟೆ ನಿಯಮ ಪಾಲನೆ ಮಾಡುತ್ತಾರೆ. ಆದರೆ ದಕ್ಷಿಣ ಚಿತ್ರರಂಗದಲ್ಲಿ ಈ ರೀತಿಯ ನಿಯಮ ಯಾವ ನಟರೂ ಅನುಸರಿಸುವುದಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Wed, 3 December 25

Follow Us