‘ಲೋಕಃ’ ಸಿನಿಮಾ ಭರ್ಜರಿ ಕಲೆಕ್ಷನ್, ಲಾಭವನ್ನು ಹಂಚಲು ಮುಂದಾದ ನಿರ್ಮಾಪಕ

Lokah movie: ಮಲಯಾಳಂ ಸಿನಿಮಾ ‘ಲೋಕಃ’ ಭಾರಿ ದೊಡ್ಡ ಹಿಟ್ ಆಗಿದೆ. ಕಡಿಮೆ ಬಜೆಟ್​ನ ಈ ಸಿನಿಮಾ ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಮೊತ್ತವನ್ನು ಕೇವಲ ಏಳು ದಿನಗಳಲ್ಲಿ ಗಳಿಕೆ ಮಾಡಿದೆ. ಇದೀಗ ಸಿನಿಮಾದ ನಿರ್ಮಾಪಕ, ಖ್ಯಾತ ನಟರೂ ಆಗಿರುವ ದುಲ್ಕರ್ ಸಲ್ಮಾನ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾದ ಲಾಭವನ್ನು ಚಿತ್ರತಂಡದ ಜೊತೆಗೆ ಹಂಚಿಕೊಳ್ಳಲಿದ್ದಾರಂತೆ.

‘ಲೋಕಃ’ ಸಿನಿಮಾ ಭರ್ಜರಿ ಕಲೆಕ್ಷನ್, ಲಾಭವನ್ನು ಹಂಚಲು ಮುಂದಾದ ನಿರ್ಮಾಪಕ
Lokah Movie

Updated on: Sep 06, 2025 | 8:13 PM

ಕೆಲವು ಸಿನಿಮಾಗಳು ನಿರೀಕ್ಷೆ ಮೀರಿ ಭಾರಿ ಯಶಸ್ಸು ಗಳಿಸುತ್ತವೆ. ಇತ್ತೀಚೆಗೆ ಬಿಡುಗಡೆ ಆದ ಕನ್ನಡ ಸಿನಿಮಾ ‘ಸು ಫ್ರಂ ಸೋ’ ಕಡಿಮೆ ಬಜೆಟ್​​ನಲ್ಲಿ ನಿರ್ಮಾಣಗೊಂಡು ಬಾಕ್ಸ್ ಆಫೀಸ್​​ನಲ್ಲಿ ಭಾರಿ ಯಶಸ್ಸು ಗಳಿಸಿತು. ಅದೇ ರೀತಿ ಕಳೆದ ವಾರ ಬಿಡುಗಡೆ ಆದ ಮಲಯಾಳಂ ಸಿನಿಮಾ ‘ಲೋಕಃ’ ಸಹ ಸಣ್ಣ ಬಜೆಟ್​​ನಲ್ಲಿ ನಿರ್ಮಾಣವಾಗಿ ಭಾರಿ ದೊಡ್ಡ ಹಿಟ್ ಆಗಿದೆ. ಕೇವಲ ಒಂದು ವಾರದಲ್ಲಿಯೇ ವಿಶ್ವದಾದ್ಯಂತ ಸುಮಾರು 100 ಕೋಟಿ ಕಲೆಕ್ಷನ್ ದಾಟುತ್ತಿದೆ. ಹೀಗೆ ಸಿನಿಮಾ ದೊಡ್ಡ ಹಿಟ್ ಆದಾಗ ಲಾಭವನ್ನೆಲ್ಲ ನಿರ್ಮಾಪಕರು ಜೇಬಿಗೆ ತುಂಬಿಕೊಳ್ಳುವುದು ಸಾಮಾನ್ಯ. ಆದರೆ ‘ಲೋಕಃ’ ಸಿನಿಮಾದ ನಿರ್ಮಾಪಕರು ಲಾಭವನ್ನು ಚಿತ್ರತಂಡದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಕಲ್ಯಾಣಿ ಪ್ರಿಯದರ್ಶನ್ ನಟಿಸಿರುವ ಮಲಯಾಳಂ ಸಿನಿಮಾ ‘ಲೋಕಃ: ಚಾಪ್ಟರ್ 1 ಚಂದ್ರ’ ಕಳೆದ ವಾರ ಬಿಡುಗಡೆ ಆಗಿದ್ದು ಭಾರಿ ದೊಡ್ಡ ಯಶಸ್ಸನ್ನು ಬಾಕ್ಸ್ ಆಫೀಸ್​​ನಲ್ಲಿ ಗಳಿಸಿದೆ. ಸಿನಿಮಾ ಅನ್ನು ಡಾಮಿನಿಕ್ ಅರುಣ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ವೇಯ್​ಫೇರರ್ ಪ್ರೊಡಕ್ಷನ್ಸ್​. ಈ ನಿರ್ಮಾಣ ಸಂಸ್ಥೆಯ ಮಾಲೀಕ ಖ್ಯಾತ ಪ್ಯಾನ್ ಇಂಡಿಯಾ ಸ್ಟಾರ್ ನಟ ದುಲ್ಕರ್ ಸಲ್ಮಾನ್.

ದುಲ್ಕರ್ ಸಲ್ಮಾನ್ ಅವರು ‘ಲೋಕಃ’ ಸಿನಿಮಾ ನಿರ್ಮಾಣ ಮಾಡಿದ್ದು, ಈ ಸಿನಿಮಾದಿಂದ ಬಂದಿರುವ ಲಾಭವನ್ನು ಚಿತ್ರತಂಡದ ಭಾಗವಾಗಿರುವ ಎಲ್ಲರಿಗೂ ಹಂಚುವ ಘನ ನಿರ್ಧಾರ ತಳೆದಿದ್ದಾರೆ. ‘ಲೋಕಃ’ ಸಿನಿಮಾದಿಂದ ಬಂದಿರುವ ಲಾಭವನ್ನು ಸಿನಿಮಾಕ್ಕಾಗಿ ಕೆಲಸ ಮಾಡಿದ ಎಲ್ಲರೊಟ್ಟಿಗೂ ಹಂಚಿಕೊಳ್ಳಲಿದ್ದಾರೆ. ಹೀಗೊಂದು ಅತ್ಯುತ್ತಮ ನಿರ್ಧಾರವನ್ನು ದುಲ್ಕರ್ ತಳೆದಿದ್ದಾರೆ.

ಇದನ್ನೂ ಓದಿ:‘ಲೋಕಃ’ ನಾಯಕಿ ಕಲ್ಯಾಣಿ ಯಾರು? ಹಿನ್ನೆಲೆ ಏನು ಗೊತ್ತೆ?

‘ಲೋಕಃ’ ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡಿರುವ ದುಲ್ಕರ್ ಸಲ್ಮಾನ್, ‘ಯಾರೂ ಸಹ ಈ ರೀತಿಯ ಅದ್ಭುತ ಯಶಸ್ಸನ್ನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಸಿನಿಮಾಗಳಿಗೂ ಸಹ ಈ ರೀತಿಯ ಅದ್ಭುತ ಪ್ರತಿಕ್ರಿಯೆ ಸಿಕ್ಕು ವರ್ಷಗಳೇ ಆದವು. ಜನ ಸಿನಿಮಾ ಅನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ನಮ್ಮ ಶ್ರಮ ಜನರಿಗೆ ತಲುಪಿದೆ. ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ನೀಡಲು ಈ ಸಿನಿಮಾದ ಯಶಸ್ಸು ಸ್ಪೂರ್ತಿ ನೀಡಿದೆ’ ಎಂದಿದ್ದಾರೆ ದುಲ್ಕರ್.

‘ಲೋಕಃ’ ಸಿನಿಮಾ ಮಹಿಳಾ ಸೂಪರ್ ಹೀರೋ ಸಿನಿಮಾ ಆಗಿದೆ. ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಸೂಪರ್ ಹೀರೋ ಪಾತ್ರದಲ್ಲಿ ನಟಿಸಿದ್ದಾರೆ. ‘ಪ್ರೇಮುಲು’ ಸಿನಿಮಾದ ನಾಯಕ ನಸ್ಲೀನ್ ಗಫೂರ್ ಈ ಸಿನಿಮಾನಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಡಾಮಿನಿಕ್ ಅರುಣ್. ಕೇವಲ 30 ಕೋಟಿ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದ್ದು ಸಿನಿಮಾ ಈ ವರೆಗೆ ವಿಶ್ವದಾದ್ಯಂತ 100 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ