ಬಿಗ್ಬಾಸ್ ಮನೆಗೆ ಹೋಗಲು ಇಲ್ಲಿದೆ ಅವಕಾಶ, ಮಾಡಬೇಕಾಗಿದ್ದು ಇಷ್ಟೆ
Bigg Boss Kannada season 12: ಕನ್ನಡ ಬಿಗ್ಬಾಸ್ ಸೀಸನ್ 12 ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸುದೀಪ್ ಅವರು ಬಿಗ್ಬಾಸ್ ಪ್ರಾರಂಭದ ದಿನಾಂಕ ಘೋಷಿಸಿರುವ ಪ್ರೋಮೋ ಬಿಡುಗಡೆ ಆಗಿದೆ. ಸ್ಪರ್ಧಿಗಳ ಆಯ್ಕೆ ಸಹ ಅಂತಿಮವಾಗಿದೆ. ಆದರೆ ಇದೀಗ ಸಾಮಾನ್ಯ ಜನರು ಬಿಗ್ಬಾಸ್ ಮನೆಗೆ ಅತಿಥಿಗಳಾಗಿ ಹೋಗುವ ಅವಕಾಶ ನೀಡಲಾಗಿದೆ. ಅತಿಥಿಗಳಾಗಿ ಬಿಗ್ಬಾಸ್ ಮನೆಗೆ ಹೋಗಲು ಏನು ಮಾಡಬೇಕು?

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ನಟ ಸುದೀಪ್ ಅವರು ಈಗಾಗಲೇ ಬಿಗ್ಬಾಸ್ ಆರಂಭದ ದಿನಾಂಕ ಘೋಷಣೆ ಮಾಡಿದ್ದಾರೆ. ಸೆಪ್ಟೆಂಬರ್ 28 ರಂದು ಬಿಗ್ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಬಾರಿಯ ಬಿಗ್ಬಾಸ್ ಸೀಸನ್ 12 ರಲ್ಲಿ ಭಾಗಿ ಆಗುವ ಸ್ಪರ್ಧಿಗಳು ಸಹ ಅಂತಿಮಗೊಂಡಿದ್ದಾರೆ. ಆದರೆ ಇದೀಗ ಬಿಗ್ಬಾಸ್ ಮನೆಗೆ ಹೋಗಲು ಸಾಮಾನ್ಯರಿಗೆ ಸಹ ಅವಕಾಶ ಕಲ್ಪಿಸಲಾಗಿದೆ.
ಬಿಗ್ಬಾಸ್ ಮನೆಗೆ ಜನ ಸಾಮಾನ್ಯರು ಈ ಹಿಂದೆ ಸ್ಪರ್ಧಿಗಳಾಗಿ ಹೋಗಿದ್ದರು. ಆದರೆ ಈ ಬಾರಿ ಸ್ಪರ್ಧಿಯಾಗಿ ಮಾತ್ರವಲ್ಲದೆ ಅತಿಥಿಯಾಗಿ ಸಹ ಹೋಗುವ ಅವಕಾಶ ನೀಡಲಾಗಿದೆ. ಆದರೆ ಅತಿಥಿಯಾಗಿ ಹೋಗಬೇಕೆಂದರೆ ವೀಕ್ಷಕರು ಸಣ್ಣ ಪರೀಕ್ಷೆಯೊಂದನ್ನು ಪಾಸು ಮಾಡಬೇಕಿದೆ. ಈ ಬಗ್ಗೆ ಬಿಗ್ಬಾಸ್ ಪ್ರೊಮೋ ಹೊರಡಿಸಿದ್ದು, ಸ್ವತಃ ಸುದೀಪ್ ಅವರು ಪ್ರೇಕ್ಷಕರನ್ನು ಬಿಗ್ಬಾಸ್ ಮನೆಗೆ ಸ್ವಾಗತಿಸಿದ್ದಾರೆ.
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ‘ದೃಷ್ಟಿಬೊಟ್ಟು’, ‘ಪ್ರೇಮಕಾವ್ಯ’, ‘ಭಾಗ್ಯಲಕ್ಷ್ಮಿ’, ‘ಮುದ್ದುಸೊಸೆ’, ‘ನಿನಗಾಗಿ’, ‘ಭಾರ್ಗವಿ’, ‘ನಂದಗೋಕುಲ’, ‘ಯಜಮಾನ, ‘ರಾಮಚಾರಿ’ ಧಾರಾವಾಹಿಗಳನ್ನು ಪ್ರತಿದಿನವೂ ನೋಡಿ, ಆ ಧಾರಾವಾಹಿಗಳ ಎಪಿಸೋಡ್ಗಳು ಮುಗಿದ ಬಳಿಕ ಅವುಗಳ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಜಿಯೋ ಹಾಟ್ಸ್ಟಾರ್ ಬಳಕೆ ಮಾಡಿ ಉತ್ತರ ನೀಡಬೇಕಿದೆ. ಹೀಗೆ ಪ್ರತಿಬಾರಿ ಸರಿ ಉತ್ತರ ಕೊಟ್ಟು ಆಯ್ಕೆ ಆಗುವ ಅದೃಷ್ಟಶಾಲಿಗಳನ್ನು ಬಿಗ್ಬಾಸ್ ಇನ್ಯಾಗುರೇಷನ್ಗೆ ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ.
ಇದನ್ನೂ ಓದಿ:ಬಿಗ್ಬಾಸ್ ಗೌತಮಿ, ರಿಷಿ ನಟನೆಯ ಹೊಸ ಸಿನಿಮಾ ಮುಹೂರ್ತ: ವಿಡಿಯೋ
ಅತಿಥಿಗಳಾಗಿ ಕೇವಲ ಒಬ್ಬರನ್ನು ಮಾತ್ರವಲ್ಲ, ಹಲವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಬಿಗ್ಬಾಸ್ ಸೆಪ್ಟೆಂಬರ್ 28ಕ್ಕೆ ಆರಂಭ ಆಗಲಿದೆ. ಅದೇ ದಿನದಂದು ಆಯ್ಕೆ ಆದವರು ಬಿಗ್ಬಾಸ್ ಮನೆಗೆ ಅತಿಥಿಗಳಾಗಿ ಎಂಟ್ರಿ ನೀಡಲಿದ್ದಾರೆ. ಜೊತೆಗೆ ನೇರವಾಗಿ ಬಿಗ್ಬಾಸ್ ಇನ್ಯಾಗುರೇಷನ್ ಕಾರ್ಯಕ್ರಮ ನೋಡುವ ಅವಕಾಶವನ್ನೂ ಸಹ ಪಡೆಯಲಿದ್ದಾರೆ.
View this post on Instagram
ಬಿಗ್ಬಾಸ್ 12 ಹಲವು ಕಾರಣಗಳಿಗೆ ವಿಶೇಷ ಮತ್ತು ಭಿನ್ನವಾಗಿರಲಿದೆ ಎಂದು ಈ ಹಿಂದೆಯೇ ಆಯೋಜಕರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಕಳೆದ ಬಾರಿ ಬೆಂಗಳೂರಿನ ಹೊರವಲಯದಲ್ಲಿ ಜಾಗ ಪಡೆದು ಬಿಗ್ಬಾಸ್ ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ ಆ ಜಾಗದ ಬಗ್ಗೆ ಸಾಕಷ್ಟು ವಿವಾದಗಳು ಕೇಳಿ ಬಂದವು. ಹಾಗಾಗಿ ಈ ಬಾರಿ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಬಿಗ್ಬಾಸ್ ಮನೆಯನ್ನು ನಿರ್ಮಾಣ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Sat, 6 September 25




