ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ‘ಪುಷ್ಪ’ ಸಿನಿಮಾದಿಂದ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ. ನಿರೀಕ್ಷೆಯಂತೆಯೇ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 300 ಕೋಟಿಗಿಂತಲೂ ಹೆಚ್ಚು ಹಣವನ್ನು ಬಾಚಿಕೊಂಡಿತು. ಅಲ್ಲು ಅರ್ಜುನ್ (Allu Arjun) ವೃತ್ತಿಜೀವನಕ್ಕೆ ಇದರಿಂದ ದೊಡ್ಡ ಮೈಲೇಜ್ ಸಿಕ್ಕಿತು. ಖ್ಯಾತ ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದ ‘ಪುಷ್ಪ’ (Pushpa Movie) ಸಿನಿಮಾದ ಗೆಲುವಿನ ಹಿಂದೆ ಹಾಡಗಳ ಕೊಡುಗೆ ದೊಡ್ಡದಿದೆ ಎಂಬುದನ್ನು ಮರೆಯುವಂತಿಲ್ಲ. ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರ ಬತ್ತಳಿಕೆಯಿಂದ ಬಂದ ಎಲ್ಲ ಹಾಡುಗಳು ಕೂಡ ಕೇಳುಗರಿಗೆ ಇಷ್ಟ ಆಗಿವೆ. ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡು ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅದೇ ರೀತಿ ‘ಶ್ರೀವಲ್ಲಿ..’ ಗೀತೆ ಕೂಡ ವಿಶ್ವಾದ್ಯಂತ ಫೇಮಸ್ ಆಯಿತು. ಈಗ ಅದೇ ಹಾಡಿನ ಇಂಗ್ಲಿಷ್ ಅವತರಣಿಕೆ ಕೂಡ ವೈರಲ್ ಆಗುತ್ತಿದೆ. ಹಾಗಂತ ಇದು ಚಿತ್ರತಂಡದಿಂದ ರಿಲೀಸ್ ಆದ ಸಾಂಗ್ ಅಲ್ಲ. ಆದರೂ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೇಳುಗರೆಲ್ಲ ಈ ಇಂಗ್ಲಿಷ್ ಶ್ರೀವಲ್ಲಿಯ ಧ್ವನಿಗೆ ತಲೆದೂಗುತ್ತಿದ್ದಾರೆ.
ನೆದರ್ಲೆಂಡ್ ಮೂಲದ ಗಾಯಕಿ ಎಮ್ಮಾ ಹೀಸ್ಟರ್ಸ್ ಅವರು ‘ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿಗೆ ಕವರ್ ವರ್ಷನ್ ಮಾಡಿದ್ದಾರೆ. ಅದನ್ನು ಕೇಳಿ ಜನಸಾಮಾನ್ಯರು ಮಾತ್ರವಲ್ಲದೇ ಸ್ವತಃ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಕೂಡ ಫಿದಾ ಆಗಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ‘ಈ ಹಾಡು ನನಗೆ ತುಂಬ ಇಷ್ಟವಾಯಿತು. ಸಿದ್ ಶ್ರೀರಾಮ್ ಅವರೇ, ತಮಾಷೆಯಾಗಿ ಒಂದು ಇಂಗ್ಲಿಷ್ ವರ್ಷನ್ ಮಾಡೋಣ ಅಂತ ರೆಕಾರ್ಡಿಂಗ್ ಶುರುಮಾಡಿದ್ದಾಗಲೇ ನಾನು ಹೇಳಿದ್ದೆ. ಆದರೆ ಈಗ ಎಮ್ಮಾ ಹೀಸ್ಟರ್ಸ್ ಅವರು ತುಂಬ ಚೆನ್ನಾಗಿ ಕವರ್ ಸಾಂಗ್ ಮಾಡಿದ್ದಾರೆ. ನಾವು ಕೂಡ ನಮ್ಮ ವರ್ಷನ್ ಮಾಡಬೇಕು ಎನಿಸುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಜನಪ್ರಿಯ ಗೀತೆಗಳ ಕವರ್ ವರ್ಷನ್ ಮಾಡುವ ಮೂಲಕ ಎಮ್ಮಾ ಹೀಸ್ಟರ್ಸ್ ಅವರು ಫೇಮಸ್ ಆಗಿದ್ದಾರೆ. ‘ಪುಷ್ಪ’ ಚಿತ್ರದ ‘ಶ್ರೀವಲ್ಲಿ..’ ಹಾಡಿಗೆ ಇಂಗ್ಲಿಷ್ ಸಾಹಿತ್ಯವನ್ನು ಜೋಡಿಸಿ ಅವರು ಈ ಗೀತೆಯನ್ನು ಸಿದ್ಧಪಡಿಸಿದ್ದಾರೆ. ಯೂಟ್ಯೂಬ್ನಲ್ಲಿ ಈ ಹಾಡು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಈ ಸಿನಿಮಾ ಗೆಲುವಿನಿಂದ ನಿರ್ದೇಶಕ ಸುಕುಮಾರ್ಗೆ ಹೊಸ ಹುರುಪು ಬಂದಿದೆ. ಅವರು ಪಾರ್ಟ್ 2 ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಬಾರಿ ಅವರು ಐಟಂ ಸಾಂಗ್ ಬಗ್ಗೆ ವಿಶೇಷ ಆಸಕ್ತಿ ತೋರಿದ್ದಾರೆ. ಆರಂಭದಿಂದಲೇ ಈ ಬಗ್ಗೆ ಟಾಕ್ ಶುರುವಾಗುವಂತೆ ನೋಡಿಕೊಳ್ಳುವ ಆಲೋಚನೆಯಲ್ಲಿ ಅವರಿದ್ದಾರೆ. ಈ ಬಾರಿ ಮತ್ತೆ ಸಮಂತಾ ಅವರಿಗೆ ಅವಕಾಶ ನೀಡೋದು ಅನುಮಾನ ಎನ್ನಲಾಗುತ್ತಿದೆ. ಎರಡನೇ ಪಾರ್ಟ್ನಲ್ಲೂ ಅವರು ಬಂದರೆ ಮೊದಲಿನಷ್ಟೇ ಕ್ರೇಜ್ ತೋರಿಸುತ್ತಾರೆ ಎಂಬುದು ಅನುಮಾನ. ಹೀಗಾಗಿ, ಹೊಸ ನಟಿಯರಿಗೆ ಚಾನ್ಸ್ ನೀಡೋಕೆ ಸುಕುಮಾರ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:
ಕಂಠೀರವ ಸ್ಟುಡಿಯೋ ಹೊರಗೆ ‘ಪುಷ್ಪ’ ಘೋಷಣೆ; ಅಲ್ಲು ಅರ್ಜುನ್ ನೋಡೋಕೆ ಅಭಿಮಾನಿಗಳ ದಂಡು
ಹಿಂದಿ ಡಬ್ಬಿಂಗ್ ಮೂಲಕ 100 ಕೋಟಿ ರೂ. ಬಾಚಿದ ‘ಪುಷ್ಪ’ ಚಿತ್ರ; ಹಾಗಾದ್ರೆ ‘ಕೆಜಿಎಫ್’ ಗಳಿಸಿದ್ದೆಷ್ಟು?
Published On - 3:57 pm, Sat, 5 February 22