ಬಾಕ್ಸ್ ಆಫೀಸ್ನಲ್ಲಿ ‘ಪುಷ್ಪ’ ಸಿನಿಮಾ ಬಂಗಾರದ ಬೆಳೆ ತೆಗೆದಿದೆ. ಅಲ್ಲು ಅರ್ಜುನ್ (Allu Arjun) ಅವರಿಗೆ ಈ ಚಿತ್ರದ ಮೂಲಕ ಭರ್ಜರಿ ಗೆಲುವು ಸಿಕ್ಕಿದೆ. ಸುಕುಮಾರ್ ಅವರು ಓರ್ವ ಯಶಸ್ವಿ ನಿರ್ದೇಶಕ ಎಂಬುದು ‘ಪುಷ್ಪ’ (Pushpa Movie) ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೀರ್ತಿ ಹೆಚ್ಚಿದೆ. ವಿಶ್ವಾದ್ಯಂತ ಈ ಸಿನಿಮಾ 350 ಕೋಟಿ ರೂಪಾಯಿ (Pushpa Box Office Collection) ಗಳಿಸಿದೆ. ತೆಲುಗಿನಲ್ಲಿ ತಯಾರಾದ ‘ಪುಷ್ಪ’ ಚಿತ್ರ ಹಿಂದಿ, ಕನ್ನಡ, ಮಲಯಾಳಂ ಮತ್ತು ತಮಿಳಿಗೂ ಡಬ್ ಆಗಿ ತೆರೆ ಕಂಡಿದೆ. ವಿಶೇಷ ಏನೆಂದರೆ ಕೇವಲ ಹಿಂದಿ ಅವತರಣಿಕೆಯಿಂದಲೇ ಈ ಸಿನಿಮಾ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಸಿದೆ. ಆ ಮೂಲಕ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ತೆಲುಗಿನ ಚಿತ್ರ ಅಬ್ಬರಿಸಿದೆ. ಮೂಲ ಹಿಂದಿ ಸಿನಿಮಾಗಳೇ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಕಷ್ಟಪಡುತ್ತಿರುವ ಕಾಲದಲ್ಲಿ ಒಂದು ಡಬ್ಬಿಂಗ್ ಸಿನಿಮಾ ಈ ಪರಿ ಯಶಸ್ಸು ಕಂಡಿರುವುದಕ್ಕೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರಗಳಿಗೆ ‘ಪುಷ್ಪ’ ಸಿನಿಮಾದ ಈ ಗೆಲುವು ಸಹಕಾರಿ ಆಗಲಿದೆ.
ಕಳೆದ ವರ್ಷ ಡಿ.17ರಂದು ‘ಪುಷ್ಪ’ ಸಿನಿಮಾ ವಿಶ್ವಾದ್ಯಂತ ತೆರೆಕಂಡಿತು. ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿತು. ಬಳಿಕ ಕೊರೊನಾ ವೈರಸ್ ಮೂರನೇ ಅಲೆ ಹೆಚ್ಚಿತು. ಆಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಸ್ವಲ್ಪ ಕುಸಿಯಿತು. ಅನೇಕ ರಾಜ್ಯಗಳಲ್ಲಿ ಶೇ.50ರಷ್ಟು ಆಸನ ಮಿತಿ ನಿರ್ಬಂಧ ಹೇರಲಾಯಿತು. ಇದೆಲ್ಲದರ ಪರಿಣಾಮದಿಂದ ‘ಪುಷ್ಪ’ ಸಿನಿಮಾವನ್ನು ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಒಟಿಟಿಯಲ್ಲಿ ಪ್ರಸಾರ ಮಾಡಲಾಯಿತು. ಒಟಿಟಿಯಲ್ಲೂ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡಿದ್ದಾರೆ. ಒಟಿಟಿಯಲ್ಲಿ ‘ಪುಷ್ಪ’ ಬಿಡುಗಡೆ ಆದ ಬಳಿಕವೂ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮುಂಬೈನ ಅನೇಕ ಕಡೆಗಳಲ್ಲಿ ಜನರು ‘ಪುಷ್ಪ’ ವೀಕ್ಷಿಸಲು ಥಿಯೇಟರ್ಗೆ ಬರುತ್ತಿದ್ದಾರೆ.
ಕನ್ನಡದ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ ಕೂಡ ಹಿಂದಿಗೆ ಡಬ್ ಆಗಿ ತೆರೆಕಂಡಿತ್ತು. ಶಾರುಖ್ ಖಾನ್ ನಟನೆಯ ‘ಜೀರೋ’ ಚಿತ್ರದ ಎದುರಿನಲ್ಲಿ ಯಶ್ ಸಿನಿಮಾ ಪೈಪೋಟಿ ನೀಡಿತ್ತು. ಹಿಂದಿ ವರ್ಷನ್ನಿಂದ ‘ಕೆಜಿಎಫ್’ ಚಿತ್ರ ಬರೋಬ್ಬರಿ 44 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸದ್ಯ ‘ಕೆಜಿಎಫ್: ಚಾಪ್ಟರ್ 2’ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್, ರವೀನಾ ಟಂಡನ್ ಅಭಿನಯಿಸಿದ್ದಾರೆ. ಹಾಗಾಗಿ ಹಿಂದಿ ಪ್ರೇಕ್ಷಕರ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ‘ಪುಷ್ಪ’ ಚಿತ್ರದ ದಾಖಲೆಯನ್ನು ‘ಕೆಜಿಎಫ್: ಚಾಪ್ಟರ್ 2’ ಮುರಿಯಬಹುದೇ ಎಂಬ ಕೌತುಕ ನಿರ್ಮಾಣ ಆಗಿದೆ.
ಇದನ್ನೂ ಓದಿ:
ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್ ಸೀಕ್ರೆಟ್ ಇಲ್ಲಿದೆ..
ಅಲ್ಲು ಅರ್ಜುನ್ ಹೊಸ ಚಿತ್ರಕ್ಕೆ ಅಟ್ಲಿ ನಿರ್ದೇಶನ; ಸಂಭಾವನೆ ಎಷ್ಟು ಅಂತ ಕೇಳಿದ್ರೆ ಅಚ್ಚರಿ ಆಗತ್ತೆ