ಕೆಸಿಆರ್ ಸಿನಿಮಾಕ್ಕೆ ಚುನಾವಣಾ ಆಯೋಗ ತಡೆ: ಜಗನ್, ವರ್ಮಾ, ಪವನ್ ಕಲ್ಯಾಣ್​ಗೆ ಆತಂಕ

Movie-Politics: ತೆಲುಗು ರಾಜ್ಯಗಳಲ್ಲಿ ಸಿನಿಮಾಗಳನ್ನು ರಾಜಕೀಯಕ್ಕೆ ಲಾಭಕ್ಕೆ ಬಳಸುವ ಪದ್ಧತಿ ಮೊದಲಿನಿಂದಲೂ ಇದೆ. ಆದರೆ ತೆಲಂಗಾಣದಲ್ಲಿ ಚುನಾವಣಾ ಆಯೋಗ ತಳೆದಿರುವ ನಿರ್ಧಾರ, ಚುನಾವಣಾ ಸಮಯದಲ್ಲಿ ಸಿನಿಮಾಗಳನ್ನು ರಾಜಕೀಯ ಲಾಭಕ್ಕೆ ಬಳಲು ಹೊಂಚು ಹಾಕಿದ್ದವರಿಗೆ ಆತಂಕ ತಂದಿದೆ.

ಕೆಸಿಆರ್ ಸಿನಿಮಾಕ್ಕೆ ಚುನಾವಣಾ ಆಯೋಗ ತಡೆ: ಜಗನ್, ವರ್ಮಾ, ಪವನ್ ಕಲ್ಯಾಣ್​ಗೆ ಆತಂಕ
ಕೆಸಿಆರ್ ಸಿನಿಮಾ
Follow us
|

Updated on: Nov 15, 2023 | 3:39 PM

ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ (Andhra Pradesh) ಹಾಗೂ ತೆಲಂಗಾಣಗಳಲ್ಲಿ ಈಗ ಚುನಾವಣಾ ಸಮಯ. ತೆಲುಗು ರಾಜ್ಯಗಳ ರಾಜಕೀಯ ಸದಾ ರಂಜನೀಯ. ಅದರಲ್ಲಿಯೂ ತೆಲುಗು ರಾಜ್ಯಗಳ ರಾಜಕೀಯ ಹಾಗೂ ಸಿನಿಮಾ ರಂಗಕ್ಕೂ ಬಹಳ ಹತ್ತಿರದ ನಂಟು. ಸಿನಿಮಾ ರಂಗದಲ್ಲಿ ರಾಜಕೀಯ, ರಾಜಕೀಯದಲ್ಲಿ ಸಿನಿಮಾ ಇಣುಕುತ್ತಲೇ ಇರುತ್ತವೆ. ಚುನಾವಣಾ ಸಮಯ ಹತ್ತಿರ ಬಂದಂತೆ ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ ಸಿನಿಮಾಗಳನ್ನು ನಿರ್ಮಿಸುವುದು, ಎದುರಾಳಿ ನಾಯಕರನ್ನು ಹೀಗಳೆಯುವ ರೀತಿ ಸಿನಿಮಾಗಳನ್ನು ಮಾಡುವುದು ಸೀನಿಯರ್ ಎನ್​ಟಿಆರ್ ಕಾಲದಿಂದಲೂ ನಡೆದು ಬಂದಿದೆ.

ಈಗಲೂ ಸಹ ಚುನಾವಣೆಗೆಂದೇ ಕೆಲವು ರಾಜಕೀಯ ನಾಯಕರುಗಳ ಸಿನಿಮಾಗಳನ್ನು ಮಾಡಿ ಬಿಡುಗಡೆ ಮಾಡಲು ತಯಾರಾಗಿ ಕೂತಿವೆ ಕೆಲವು ನಿರ್ಮಾಣ ಸಂಸ್ಥೆಗಳು. ಆದರೆ ನಿರ್ಮಾಣ ಸಂಸ್ಥೆಗಳಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ತೆಲಂಗಾಣದ ಸಿಎಂ ಕೆಸಿಆರ್ ಕುರಿತು ನಿರ್ಮಾಣಗೊಂಡಿರುವ ‘ಕೆಸಿಆರ್’ ಹೆಸರಿನ ಸಿನಿಮಾದ ಬಿಡುಗಡೆಗೆ ಚುನಾವಣಾ ಆಯೋಗ ತಡೆ ಹೇರಿದೆ.

ತೆಲುಗು ಟಿವಿ ಲೋಕದ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಜಬರ್ಧಸ್ಥ್’ನಲ್ಲಿ ಭಾಗವಹಿಸಿ ಹೆಸರು ಗಳಿಸಿರುವ ರಾಕಿಂಗ್ ರಾಕೇಶ್, ‘ಕೆಸಿಆರ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಸಿನಿಮಾವನ್ನು ನವೆಂಬರ್​ನಲ್ಲಿಯೇ ಬಿಡುಗಡೆ ಮಾಡಲು ಮೊದಲೇ ಯೋಜಿಸಿದ್ದರು ರಾಕೇಶ್, ಆದರೆ ಈಗ ಚುನಾವಣಾ ಆಯೋಗವು ಸಿನಿಮಾವನ್ನು ಬಿಡುಗಡೆ ಮಾಡದಂತೆ ಆದೇಶ ನೀಡಿದೆ. ತೆಲಂಗಾಣ ವಿಧಾನಸಭೆ ಚುನಾವಣೆ ನವೆಂಬರ್ 30ಕ್ಕೆ ನಡೆಯಲಿದೆ.

ಇದನ್ನೂ ಓದಿ:‘ಥ್ಯಾಂಕ್ಸ್ ಅಣ್ಣ’; ಕಿಚ್ಚ ಸುದೀಪ್ ಬೆಂಬಲಕ್ಕೆ ಧನ್ಯವಾದ ಹೇಳಿದ ಟಾಲಿವುಡ್ ನಟ ನಾನಿ

ಆದೇಶ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ರಾಕೇಶ್, ಕಣ್ಣೀರು ಹಾಕುತ್ತಾ, ನಾನು ಕಷ್ಟಪಟ್ಟು ಸಿನಿಮಾ ಮಾಡಿದ್ದೀನಿ. ಮನೆ ಅಡವಿಟ್ಟು ಹಣ ತಂದು ಸಿನಿಮಾದ ಮೇಲೆ ಬಂಡವಾಳ ಹೂಡಿದ್ದೀನಿ ಎಂದಿದ್ದಾರೆ. ನಾನು ಯಾರಿಗೂ ಬೇನಾಮಿ ಅಲ್ಲ, ನಾನು ನನ್ನ ಸ್ವಂತ ಆಸಕ್ತಿಯಿಂದ ಈ ಸಿನಿಮಾ ಮಾಡಿದ್ದೀನಿ, ಸೆನ್ಸಾರ್ ಮಾಡಿಸುವಾಗಲೂ ನಾನು ಈ ಬಗ್ಗೆ ವಿವರಿಸಿದ್ದೆ. ಆದರೆ ಈಗ ಚುನಾವಣಾ ಆಯೋಗ ನನ್ನ ಸಿನಿಮಾಕ್ಕೆ ತಡೆ ನೀಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆಂಧ್ರ ಪ್ರದೇಶದಲ್ಲಿಯೂ ಸಿನಿಮಾ ರಾಜಕೀಯ ಚಾಲ್ತಿಯಲ್ಲಿದ್ದು, ಅಲ್ಲಿಯೂ ಸಹ ಹಾಲಿ ಸಿಎಂ ಜಗನ್ ಬಗೆಗೆ ಎರಡು ಸಿನಿಮಾಗಳು ತಯಾರಾಗಿವೆ. ಪವನ್ ಕಲ್ಯಾಣ್ ಬಗ್ಗೆಯೂ ಒಂದು ಸಿನಿಮಾ ರೆಡಿಯಾಗಿದೆ. ಇವರ ನಡುವೆ ಪವನ್ ಕಲ್ಯಾಣ್ ನಟನೆಯ ಇತರೆ ಸಿನಿಮಾಗಳು ಸಹ ಬಿಡುಗಡೆಗೆ ರೆಡಿಯಾಗಿವೆ. ಚುನಾವಣೆ ಸಮೀಪ ಬಂದಾಗ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಸಜ್ಜಾಗಿದ್ದಾರೆ. ಆದರೆ ಈಗ ತೆಲಂಗಾಣದಲ್ಲಿ ಚುನಾವಣಾ ಆಯೋಗ ತಳೆದಿರುವ ನಿರ್ಧಾರ, ಆಂಧ್ರ ರಾಜಕೀಯ ನಾಯಕರ ಬಗ್ಗೆ ಸಿನಿಮಾ ನಿರ್ಮಿಸಿ ಬಿಡುಗಡೆ ಕಾಯುತ್ತಿರುವ ನಿರ್ಮಾಪಕರಿಗೆ ಆತಂಕ ಮೂಡಿಸಿದೆ.

ಸಿನಿಮಾವನ್ನು ರಾಜಕೀಯ ಪ್ರಚಾರಕ್ಕೆ ಬಳಸುವ ಹುನ್ನಾರದಲ್ಲಿದ್ದ ಸಿಎಂ ಜಗನ್, ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು ಅವರುಗಳಿಗೂ ತೆಲಂಗಾಣದಲ್ಲಿ ಚುನಾವಣಾ ಆಯೋಗ ತೆಗೆದುಕೊಂಡಿರುವ ನಿರ್ಧಾರ ಸಣ್ಣ ಮಟ್ಟಿಗಿನ ಆತಂಕ ತಂದಿರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ