2021ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ ‘ಪುಷ್ಪ’ ಚಿತ್ರದ ಸೀಕ್ವೆಲ್ ‘ಪುಷ್ಪ 2: ದಿ ರೂಲ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕೊಳ್ಳೆಹೊಡೆಯುತ್ತಿದೆ. ನಟ ಅಲ್ಲು ಅರ್ಜುನ್ ಅವರು ಅರೆಸ್ಟ್ ಆಗಿ ರಿಲೀಸ್ ಆದ ನಂತರ ಪುಷ್ಪ 2 ಕಲೆಕ್ಷನ್ನಲ್ಲಿ ಭಾರೀ ಏರಿಕೆಯಾಗಿದೆ. ವರದಿಗಳ ಪ್ರಕಾರ, ಪುಷ್ಪ 2 ಸಿನಿಮಾ ನಟನ ಅರೆಸ್ಟ್ ನಂತರ ದೇಶೀಯವಾಗಿ ಶೇ. 74 ರಷ್ಟು ಏರಿಕೆ ಕಂಡಿದೆ. ಅಲ್ಲು ಅರ್ಜುನ್ ಬಂಧನದ ನಂತರ ಕಳೆದ ವಾರಾಂತ್ಯದಲ್ಲಿ ವಿಶ್ವಾದ್ಯಂತ ಶೇ. 70 ಜಂಪ್ ಕಂಡು ಬಂದಿದೆ. ಪುಷ್ಪ 2 ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಸಿನಿಮಾಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲು ಅರ್ಜುನ್ ಪರ್ಫಾರ್ಮೆನ್ಸ್ನ ಜನರು ಕೊಂಡಾಡಿದ್ದಾರೆ.
ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಜೆಪಿ ನಡ್ಡಾ ಮತ್ತು ಇತರ ಹಲವು ಸಚಿವರು ಕಾಣಿಸಿಕೊಂಡಿದ್ದಾರೆ. ಕೆಲವು ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪ-2 ಚಿತ್ರ ವೀಕ್ಷಿಸಲು ಹೋಗಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ ಒಂದನ್ನು ಫೇಸ್‌ಬುಕ್ ಬಳಕೆದಾರರು ಹಂಚಿಕೊಳ್ಳಿದ್ದಾರೆ. ಈ ವಿಡಿಯೋಕ್ಕೆ ‘‘ಅಲ್ಲು ಅರ್ಜುನ್ ಅವರ ಮೆಗಾ ಫಿಲ್ಮ್ ಪುಷ್ಪ 2 ವೀಕ್ಷಿಸಲು ಮೋದಿ ಜಿ ಚಿತ್ರಮಂದಿರಕ್ಕೆ ಬಂದರು, ಮೋದಿ ಅವರು ಪುಷ್ಪ 2 ವೀಕ್ಷಿಸಿದರು. ಬಾಲಿವುಡ್ ಜನರೇ, ಅಲ್ಲು ಅರ್ಜುನ್ ಅವರಿಂದ ಏನಾದರೂ ಕಲಿಯಿರಿ’’ ಎಂದು ಶೀರ್ಷಿಕೆ ನೀಡಲಾಗಿದೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಎ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ವೈರಲ್ ಪೋಸ್ಟ್‌ನಲ್ಲಿ ಬಳಸಲಾದ ಫೋಟೋ ಪುಷ್ಪ-2 ಚಿತ್ರದದ್ದಲ್ಲ. ಇದು ‘ದಿ ಸಬರಮತಿ ರಿಪೋರ್ಟ್’ ಸಿನಿಮಾ ಪ್ರದರ್ಶನದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸಚಿವರೊಂದಿಗೆ ಚಿತ್ರ ವೀಕ್ಷಿಸಿದಾಗ ತೆಗೆದ ಫೋಟೋ ಆಗಿದೆ. ಅದೇ ಚಿತ್ರವನ್ನು ಈಗ ಪುಷ್ಪ-2 ಚಿತ್ರದ್ದು ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ನಿಜಾಂಶವನ್ನು ತಿಳಿಯಲು ನಾವು ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ, ಕ್ಲೈಮ್‌ಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ನಮಗೆ ಕಂಡುಬಂದಿಲ್ಲ. ಬಳಿಕ ನಾವು ಫೋಟೋವನ್ನು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದ್ದೇವೆ. ಆಗ ಸ್ವತಃ ಟಿವಿ 9 ಕನ್ನಡ ನರೇಂದ್ರ ಮೋದಿ ಹಾಗೂ ಇತರೆ ಸಚಿವರು ಕುಳಿತಿರುವ ಅದೇ ವೈರಲ್ ಫೋಟೋದೊಂದಿಗೆ 2 ಡಿಸೆಂಬರ್ 2024 ರಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ.
ವರದಿಯಲ್ಲಿ ನೀಡಿರುವ ಮಾಹಿತಿ, ಬಾಲಿವುಡ್ ನಟ ವಿಕ್ರಾಂತ್ ಮಾಸಿ ಪ್ರಮುಖ ಪಾತ್ರ ಮಾಡಿರುವ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವೀಕ್ಷಿಸಿದ್ದಾರೆ. ಇಂದು (ಡಿಸೆಂಬರ್ 2) ಸಂಸತ್ ಭವನದ ಬಾಲಯೋಗಿ ಸಭಾಂಗಣದಲ್ಲಿ ಅವರು ಸಿನಿಮಾ ನೋಡಿದರು. ಅವರ ಜೊತೆ ಅನೇಕ ಸಚಿವರು, ಸಂಸದರು ಹಾಗೂ ಚಿತ್ರತಂಡದವರು ಕೂಡ ಭಾಗಿ ಆಗಿದ್ದರು. ಸಿನಿಮಾ ವೀಕ್ಷಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿ ಅವರು ದಿ ಸಾಬರಮತಿ ರಿಪೋರ್ಟ್ ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ ಎಂಬ ಮಾಹಿತಿ ಇದರಲ್ಲಿದೆ. ಈ ಸುದ್ದಿಯನ್ನು ನೀವು ಇಲ್ಲಿ ಓದಬಹುದು.
‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ನೋಡಿ ಮನಸಾರೆ ಹೊಗಳಿದ ನರೇಂದ್ರ ಮೋದಿ
ಈ ಸ್ಕ್ರೀನಿಂಗ್‌ನ ಚಿತ್ರಗಳನ್ನು ಪ್ರಧಾನಿ ಮೋದಿ ಅವರು ಕೂಡ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 2, 2024 ರಂದು ಮಾಡಿದ ಪೋಸ್ಟ್‌ನಲ್ಲಿ, ಇದನ್ನು 'ದಿ ಸಬರಮತಿ ರಿಪೋರ್ಟ್' ಚಿತ್ರದ ಪ್ರದರ್ಶನ ಎಂದು ವಿವರಿಸಲಾಗಿದೆ.
Joined fellow NDA MPs at a screening of 'The Sabarmati Report.'
I commend the makers of the film for their effort. pic.twitter.com/uKGLpGFDMA
— Narendra Modi (@narendramodi) December 2, 2024
'ದಿ ಸಬರಮತಿ ರಿಪೋರ್ಟ್' ಸಿನಿಮಾದ ನಾಯಕ ನಟ ವಿಕ್ರಾಂತ್ ಮಾಸ್ಸೆ ಅವರು ಕೂಡ 2 ಡಿಸೆಂಬರ್ 2024 ರಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸ್ಕ್ರೀನಿಂಗ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪ್ರಧಾನಿ ಮೋದಿ ಅವರು ಪುಷ್ಪ-2 ಚಿತ್ರ ವೀಕ್ಷಿಸಲು ಹೋಗಿದ್ದಾರೆ ಎಂಬ ಪೋಸ್ಟ್ ನಕಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ. ದಿ ಸಬರಮತಿ ರಿಪೋರ್ಟ್ ಚಿತ್ರ ಪ್ರದರ್ಶನದ ವೇಳೆ ಮೋದಿ ಅವರು ಇತರ ನಾಯಕರು ಮತ್ತು ಸಂಸದರೊಂದಿಗೆ ಸಿನಿಮಾ ವೀಕ್ಷಿಸುತ್ತಿರುವ ಫೋಟೋ ಇದಾಗಿದೆ.