ಧುರಂಧರ್: ಇವರೆಲ್ಲ ಪಾಕಿಸ್ತಾನಕ್ಕೆ ಸ್ಪೈ ಆಗಿ ಹೋದರೆ ಮಾಡುವ ಎಡವಟ್ಟು ಒಂದೆರಡಲ್ಲ

ಸಿನಿಮಾಗಳು ಸೂಪರ್ ಹಿಟ್ ಆದಾಗ ಅದಕ್ಕೆ ತಕ್ಕಂತೆ ಜನರು ರೀಲ್ಸ್ ಮಾಡುವುದು ಸಹಜ. ‘ಧುರಂಧರ್’ ವಿಚಾರದಲ್ಲೂ ಹಾಗೆಯೇ ಆಗುತ್ತಿದೆ. ಈ ಸಿನಿಮಾದ ಕಥೆಗೆ ಅನುಗುಣವಾಗಿ ಸೋಶಿಯಲ್ ಮೀಡಿಯಾದಲ್ಲಿ ನಾನಾ ಬಗೆಯ ರೀಲ್ಸ್ ಮಾಡಲಾಗುತ್ತಿದೆ. ‘First day as a spy in Pakistan’ ಎಂಬುದು ಇನ್​ಸ್ಟಾಗ್ರಾಮ್​ ತುಂಬೆಲ್ಲ ಹಾವಳಿ ಎಬ್ಬಿಸಿದೆ.

ಧುರಂಧರ್: ಇವರೆಲ್ಲ ಪಾಕಿಸ್ತಾನಕ್ಕೆ ಸ್ಪೈ ಆಗಿ ಹೋದರೆ ಮಾಡುವ ಎಡವಟ್ಟು ಒಂದೆರಡಲ್ಲ
First Day As A Spy In Pakistan

Updated on: Dec 16, 2025 | 8:48 PM

ಇತ್ತೀಚೆಗೆ ಬಿಡುಗಡೆ ಆದ ‘ಧುರಂಧರ್’ (Dhurandhar) ಸಿನಿಮಾ ಹೊಸ ಕ್ರೇಜ್ ಸೃಷ್ಟಿ ಮಾಡಿದೆ. ರಿಯಲ್ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಭಾರತದ ಗೂಢಚಾರಿಗಳು ಪಾಕಿಸ್ತಾನದಲ್ಲಿ ಹೇಗೆ ಕೆಲಸ ಮಾಡಿದ್ದರು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಆ ಪಾತ್ರವನ್ನು ನಟ ರಣವೀರ್ ಸಿಂಗ್ (Ranveer Singh) ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾ ನೋಡಿ ಬಂದಿರುವ ಹಲವರು ಇನ್​ಸ್ಟಾಗ್ರಾಮ್​​ನಲ್ಲಿ ರೀಲ್ಸ್ ಮಾಡುತ್ತಿದ್ದಾರೆ. ‘ಪಾಕಿಸ್ತಾನದಲ್ಲಿ ಸ್ಪೈ ಆಗಿ ಮೊದಲ ದಿನ’ (First day as a spy in Pakistan) ಹೇಗಿರಬಹುದು ಎಂಬುದನ್ನು ಕಾಮಿಡಿ ರೂಪದಲ್ಲಿ ತೋರಿಸಲಾಗುತ್ತಿದೆ.

ಪಾಕಿಸ್ತಾನದಲ್ಲಿ ಭಾರತದ ಸ್ಪೈ (ಗೂಢಚಾರಿ) ಆಗಿರುವುದು ಎಂದರೆ ತಮಾಷೆಯ ಮಾತಲ್ಲ. ಪಾಕ್ ಪ್ರಜೆಗಳ ನಡುವೆಯೇ ಇದ್ದುಕೊಂಡು ಯಾರಿಗೂ ಗೊತ್ತಾಗದ ರೀತಿಯಲ್ಲಿ ಕೆಲಸ ಮಾಡಬೇಕು. ಅಲ್ಲಿನ ರೀತಿ-ನೀತಿ, ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯಗಳನ್ನು ಚೆನ್ನಾಗಿ ತಿಳಿದುಕೊಂಡು ಅವರಂತೆಯೇ ನಟಿಸಬೇಕು. ಸ್ವಲ್ಪ ಅನುಮಾನ ಬಂದರೂ ಗುಂಡಿಕ್ಕಿ ಕೊಲ್ಲಲಾಗುತ್ತದೆ. ಇದೇ ಥೀಮ್ ಇಟ್ಟುಕೊಂಡು ಹಲವು ರೀಲ್ಸ್ ಮಾಡಿದ್ದಾರೆ.

ಭಾರತದಿಂದ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋದರೆ ಅಲ್ಲಿನವರ ರೀತಿಯೇ ಬದುಕಬೇಕು. ಬಿರಿಯಾನಿ ತಿನ್ನು ಎಂದು ಯಾರಾದರೂ ಹೇಳಿದಾಗ ಅಭ್ಯಾಸಬಲದಿಂದ ‘ಇವತ್ತು ಸೋಮವಾರ, ನಾನು ತಿನ್ನಲ್ಲ’ ಎಂದರೆ ಕಥೆ ಮುಗಿಯಿತು. ನೀವು ಭಾರತದ ಸ್ಪೈ ಎಂಬುದು ಕೂಡಲೇ ಗೊತ್ತಾಗುತ್ತದೆ. ‘ಸಲಾಮ್ ವಾಲೆಕುಮ್’ ಎನ್ನುವ ಬದಲು ಅಪ್ಪಿತಪ್ಪಿ ‘ನಮಸ್ಕಾರ’ ಎಂದರೆ ಸತ್ತಿರಿ ಎಂದೇ ಅರ್ಥ.

ಭಾರತದಲ್ಲಿ ಹಿರಿಯರ ಕಾಲಿಗೆ ನಮಸ್ಕರಿಸುವುದು ರೂಢಿ. ಪಾಕಿಸ್ತಾನಕ್ಕೆ ಗೂಢಚಾರಿಕೆ ಮಾಡಲು ಹೋದವರು ಅದೇ ಅಭ್ಯಾಸವನ್ನು ಮುಂದುವರಿಸಿದರೆ ಶೂಟ್ ಮಾಡಿಸಿಕೊಳ್ಳುವುದು ಗ್ಯಾರಂಟಿ. ಮಸೀದಿಗೆ ಹೋಗಿ ದೇವಸ್ಥಾನದ ಗಂಟೆ ಹೊಡೆಯವ ರೀತಿ ಹಾವ ಭಾವ ತೋರಿದರೆ ಅಷ್ಟೇ ಕಥೆ. ಇಂಥ ನೂರಾರು ಥೀಮ್ ಇಟ್ಟುಕೊಂಡು ಜನರು ರೀಲ್ಸ್ ಮಾಡುತ್ತಿದ್ದಾರೆ.

ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ಅಕ್ಷಯ್ ಖನ್ನಾ ಮುಂತಾದವರು ‘ಧುರಂಧರ್’ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಸಿನಿಮಾದಲ್ಲಿನ ಪ್ರತಿ ಪಾತ್ರ ಕೂಡ ಹೈಲೈಟ್ ಆಗುತ್ತಿದೆ. ವಿಶೇಷವಾಗಿ ಅಕ್ಷಯ್ ಖನ್ನಾ ಅವರು ಮೆಚ್ಚುಗೆ ಗಳಿಸುತ್ತಿದ್ದಾರೆ. ರೀಲ್ಸ್ ಕಾರಣದಿಂದ ‘ಧುರಂಧರ್’ ಸಿನಿಮಾದ ಹಾಡುಗಳು ಸಖತ್ ಟ್ರೆಂಡ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.