
ಮಹೇಶ್ ಬಾಬು (Mahesh Babu) ಪುತ್ರಿ ಸಿತಾರಾ ಗಟ್ಟಿಮನೇನಿ (Sitara Gattimaneni) ಸೋಷಿಯಲ್ ಮೀಡಿಯಾ ಸ್ಟಾರ್. ಸಿನಿಮಾಗಳಲ್ಲಿ ನಟಿಸುವ ಮುನ್ನವೇ ಭಾರಿ ದೊಡ್ಡ ಅಭಿಮಾನಿ ವರ್ಗವನ್ನು ಸಿತಾರಾ ಗಟ್ಟಿಮನೇನಿ ಸಂಪಾದಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 18 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋವರ್ಗಳನ್ನು ಹೊಂದಿದ್ದಾರೆ ಸಿತಾರಾ. ಹಲವು ಬ್ರ್ಯಾಂಡ್ಗಳಿಗೆ ಮಾಡೆಲ್ ಆಗಿದ್ದಾರೆ. ಪುಟ್ಟ ವಯಸ್ಸಿನಲ್ಲಿಯೇ ಇನ್ಸ್ಟಾಗ್ರಾಂ, ಮಾಡೆಲಿಂಗ್ಗಳಿಂದ ಕೋಟ್ಯಂತರ ರೂಪಾಯಿ ಹಣ ಸಂಪಾದಿಸುತ್ತಿದ್ದಾರೆ. ಭಾರಿ ಜನಪ್ರಿಯವಾಗಿರುವ ಸಿತಾರಾ ಹೆಸರಿನಲ್ಲಿ ಕೆಲವರು ವಂಚನೆ ಮಾಡುತ್ತಿದ್ದಾರೆ.
ಸಿತಾರಾ ಗಟ್ಟಿಮನೇನಿ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲವು ವಂಚಕರು ಅಮಾಯಕರ ವಂಚನೆಗೆ ಇಳಿದಿದ್ದಾರೆ. ಮಹೇಶ್ ಬಾಬು ಅವರ ತಂಡ ಈಗಾಗಲೇ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಸಿತಾರಾ ಅವರ ತಾಯಿ, ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಈ ವಂಚನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಎಚ್ಚರಿಕೆ ಸಂದೇಶವನ್ನು ಸಹ ಹಂಚಿಕೊಂಡಿದ್ದಾರೆ.
ಮಾಧಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಮಹೇಶ್ ಬಾಬು ಅವರ ತಂಡದೊಡನೆ ನಿರಂತರ ಸಂಪರ್ಕದಲ್ಲಿದೆ. ಸಿತಾರಾ ಗಟ್ಟಿಮನೇನಿ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣವನ್ನು ಅವರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ಇಂದ ಇರುವಂತೆ ಸಂದೇಶ ನೀಡಿದ್ದಾರೆ. ಒಬ್ಬ ಅಗಂತುಕ, ಸಿತಾರಾ ಗಟ್ಟಿಮನೇನಿಯ ಚಿತ್ರ, ವಿಡಿಯೋ ಹಾಗೂ ಹೆಸರು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲವು ಲಿಂಕ್ಗಳನ್ನು ಹಂಚಿಕೊಳ್ಳುತ್ತಿದ್ದಾನೆ. ಅಲ್ಲದೆ ಬಂಡವಾಳ ಹೂಡಿಕೆ ಯೋಜನೆಗಳ ಮಾರಾಟ, ಲೋನ್ ಕೊಡಿಸುವುದಾಗಿ ಹೇಳಿ ಲಿಂಕ್ ಕಳಿಸುವುದು, ಷೇರು ಮಾರುಕಟ್ಟೆಗೆ ಸಂಬಂಧಿಸಿದ ಹೂಡಿಕೆ ಐಡಿಯಾಗಳನ್ನು ಕೊಡುವುದಾಗಿ ಹೇಳಿಕೊಂಡು ಹಲವರನ್ನು ಸಂಪರ್ಕ ಮಾಡಿದ್ದಾನೆ.
ಇದನ್ನೂ ಓದಿ:‘ಗುಂಟೂರು ಖಾರಂ’ ಸ್ಟೈಲ್ನಲ್ಲಿ ಅಪ್ಪನ ಥಿಯೇಟರ್ಗೆ ಬಂದ ಸಿತಾರಾ; ಟ್ರೋಲ್ ಆದ ಮಹೇಶ್ ಬಾಬು ಮಗಳು
ಸಿತಾರಾ ಅಥವಾ ಇನ್ಯಾವುದೆ ಜನಪ್ರಿಯರ ಹೆಸರಿನಲ್ಲಿ ನಡೆಯುವ ಮೋಸದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದರಬೇಕು, ಒಂದೊಮ್ಮೆ ಯಾವುದೇ ಅನುಮಾನಾಸ್ಪದ ಸಂದೇಶಗಳು ಕಂಡು ಬಂದರೆ ಮಾಹಿತಿ ನೀಡಬೇಕು ಎಂದು ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದು, ಇದೀಗ ಸಿತಾರಾ ಗಟ್ಟಿಮನೇನಿ ಹೆಸರಿನಲ್ಲಿ ವಂಚನೆ ಎಸಗುತ್ತಿರುವವರ ಮೂಲ ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ಜಾರಿಯಲ್ಲಿದೆ. ಜನರು ಸಾಮಾಜಿಕ ಜಾಲತಾಣದಲ್ಲಿ ತಮಗೆ ಬಂದ ಹೂಡಿಕೆ ಮಾಹಿತಿಯನ್ನು ನಿಜವೆಂದು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಿಕೊಳ್ಳಿ ಎಂದು ಮಹೇಶ್ ಬಾಬು ತಂಡ ಹೇಳಿದೆ.
ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಪುತ್ರಿ ಸಿತಾರಾ ಗಟ್ಟಿಮನೇನಿ ಬಹಳ ಒಳ್ಳೆಯ ಡ್ಯಾನ್ಸರ್ ಆಗಿದ್ದು, ನಟನೆ ಬಗ್ಗ ಅತೀವ ಆಸಕ್ತಿ ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಆದಷ್ಟು ಬೇಗ ನಮ್ರತಾ ಸಿನಿಮಾ ನಟನೆಗೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಮಹೇಶ್ ಬಾಬು ಅವರ ಪುತ್ರ ಈ ಹಿಂದೆ ಸಿನಿಮಾದಲ್ಲಿ ನಟಿಸಿದ್ದಾರೆ. ‘ನೇನೊಕ್ಕಡಿನೆ’ ಸಿನಿಮಾದಲ್ಲಿ ಮಹೇಶ್ ಬಾಬು ಪುತ್ರ ನಟಿಸಿದ್ದರು. ಮಹೇಶ್ ಬಾಬು ಪ್ರಸ್ತುತ ರಾಜಮೌಳಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ