
ರಾಮ್ ಚರಣ್ (Ram Charan) ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಫ್ಲಾಪ್ ಆಗಿದ್ದು ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ದಿಲ್ ರಾಜು ಮತ್ತು ಅವರ ಸಹೋದರ ಸಿರೀಶ್ ರೆಡ್ಡಿ ಅವರುಗಳು ಸಿನಿಮಾ ನಿರ್ಮಾಣ ಮಾಡಿದ್ದರು, ಶಂಕರ್ ನಿರ್ದೇಶಿಸಿದ್ದ ಈ ಸಿನಿಮಾ ದೊಡ್ಡ ಫ್ಲಾಪ್ ಆಯ್ತು. ಅದೇ ಸಮಯದಲ್ಲಿ ವೆಂಕಟೇಶ್ ನಟನೆಯ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ಬಿಡುಗಡೆ ಮಾಡಿ ನಷ್ಟವನ್ನು ಸರಿದೂಗಿಸಿಕೊಂಡರು ದಿಲ್ ರಾಜು ಮತ್ತು ಸಿರೀಶ್. ಆದರೆ ‘ಗೇಮ್ ಚೇಂಜರ್’ ಸೋಲಿನ ಬಗ್ಗೆ ದಿಲ್ ರಾಜು ಮತ್ತು ಸಿರೀಶ್ ಪದೆ ಪದೇ ಮಾತನಾಡುತ್ತಲೇ ಇದ್ದಾರೆ.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿರ್ಮಾಪಕ ಸಿರೀಶ್, ‘ಗೇಮ್ ಚೇಂಜರ್ ಸೋತ ಬಳಿಕ ರಾಮ್ ಚರಣ್ ನನಗಾಗಲಿ, ದಿಲ್ ರಾಜುಗಾಗಲಿ ಕರೆ ಮಾಡಿ ಮಾತನಾಡಿಸುವ ಗೋಜಿಗೆ ಸಹ ಹೋಗಿಲ್ಲ’ ಎಂದು ಋಣಾತ್ಮಕವಾಗಿ ಮಾತನಾಡಿದ್ದರು. ಆದರೆ ಇದು ರಾಮ್ ಚರಣ್ ಅಭಿಮಾನಿಗಳನ್ನು ಕೆರಳಿಸಿದ್ದು, ಅಭಿಮಾನಿಗಳು ಬಹಿರಂಗ ಪತ್ರದ ಮೂಲಕ ಸಿನಿಮಾದ ನಿರ್ಮಾಪಕರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಮ್ ಚರಣ್ ಅಭಿಮಾನಿಗಳ ಎಚ್ಚರಿಕೆ ಬೆನ್ನಲ್ಲೆ ನಿರ್ಮಾಪಕ ಸಿರೀಶ್ ರೆಡ್ಡಿ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೇಳಿದ್ದಾರೆ. ‘ನಾನು ಸಂದರ್ಶನದಲ್ಲಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣದ ಮೂಲಕ ಅಪಾರ್ಥವನ್ನು ಪಡೆದುಕೊಂಡಿವೆ. ಅದರಿಂದ ಕೆಲ ಮೆಗಾ ಅಭಿಮಾನಿಗಳು ಬೇಸರಗೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ‘ಗೇಮ್ ಚೇಂಜರ್’ ಸಿನಿಮಾಕ್ಕಾಗಿ ರಾಮ್ ಚರಣ್ ತಮ್ಮ ಪೂರ್ತಿ ಸಮಯ ಮತ್ತು ಸಹಕಾರವನ್ನು ನೀಡಿದ್ದಾರೆ. ನಮಗೆ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಜೊತೆಗೆ ವರ್ಷಗಳ ನಂಟಿದೆ. ನಾವು ಚಿರಂಜೀವಿ, ರಾಮ್ ಚರಣ್ ಅಥವಾ ಯಾವುದೇ ಮೆಗಾ ಹೀರೋಗಳ ಬಗ್ಗೆ ಅಗೌರವವಾಗಿ ಮಾತನಾಡುವುದಿಲ್ಲ. ಒಂದೊಮ್ಮೆ ನನ್ನ ಮಾತಿನಿಂದ ಯಾರಿಗಾದರು ನೋವಾಗಿದ್ದರೆ ಕ್ಷಮೆ ಇರಲಿ’ ಎಂದಿದ್ದಾರೆ.
ಇದನ್ನೂ ಓದಿ:ನೀನು ಸೋತೆ, ಅಲ್ಲು ಅರ್ಜುನ್ ಗೆದ್ದ: ಸ್ಟಾರ್ ಹೀರೋಗೆ ನೇರವಾಗಿ ಹೇಳಿದ ದಿಲ್ ರಾಜು
ಇನ್ನು ನಿರ್ಮಾಪಕ ದಿಲ್ ರಾಜು, ತಮ್ಮ ನಿರ್ಮಾಣದ ‘ತಮ್ಮುಡು’ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಮ್ ಚರಣ್ ಅವರಿಗೆ ಒಂದು ಹಿಟ್ ಸಿನಿಮಾ ಕೊಡಲಿಲ್ಲ ಎಂಬ ಬೇಸರ ನನಗೆ ಇದೆ. ನಾವು ಖಂಡಿತ ರಾಮ್ ಚರಣ್ ಜೊತೆಗೆ ಒಂದು ಸೂಪರ್ ಹಿಟ್ ಸಿನಿಮಾ ಕೊಡುತ್ತೇವೆ. ಆ ಬಗ್ಗೆ ಚರ್ಚೆಗಳು ಈಗಾಗಲೇ ಜಾರಿಯಲ್ಲಿದೆ. ಖಂಡಿತ ನಾವು ರಾಮ್ ಚರಣ್ ಅವರಿಗೆ ಹಿಟ್ ಸಿನಿಮಾ ಕೊಡುತ್ತೇವೆ’ ಎಂದಿದ್ದಾರೆ.
‘ಗೇಮ್ ಚೇಂಜರ್’ ಸಿನಿಮಾವನ್ನು ದಿಲ್ ರಾಜು ಮತ್ತು ಸಿರೀಶ್ ನಿರ್ಮಾಣ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಆ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇತ್ತು, ಪವನ್ ಕಲ್ಯಾಣ್, ಸಿನಿಮಾದ ಪ್ರಚಾರಕ್ಕೆ ಆಗಮಿಸಿದ್ದರು. ಆದರೆ ಸಿನಿಮಾ ಫ್ಲಾಪ್ ಆಯ್ತು. ನಿರ್ಮಾಪಕರು ಪರೋಕ್ಷವಾಗಿ ರಾಮ್ ಚರಣ್ ವಿರುದ್ಧ ಮಾತನಾಡಲು ಆರಂಭಿಸಿದರು. ಈಗ ಅಭಿಮಾನಿಗಳು ತಿರುಗಿ ಬಿದ್ದಿದ್ದರಿಂದ ಕ್ಷಮೆ ಕೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Wed, 2 July 25