ನೀನು ಸೋತೆ, ಅಲ್ಲು ಅರ್ಜುನ್ ಗೆದ್ದ: ಸ್ಟಾರ್ ಹೀರೋಗೆ ನೇರವಾಗಿ ಹೇಳಿದ ದಿಲ್ ರಾಜು
Producer Dil Raju: ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ತಮ್ಮ ನೇರವಾದ ಮಾತುಗಳಿಗೆ ಖ್ಯಾತರು. ತೆಲುಗು ಚಿತ್ರರಂಗದಲ್ಲಿ 25 ವರ್ಷಗಳಿಂದಲೂ ನಾಯಕನಾಗಿ ನಟಿಸುತ್ತಿರುವ ಸ್ಟಾರ್ ನಟನೊಟ್ಟಿಗೆ ನಡೆದ ಸಂವಾದದಲ್ಲಿ ನೇರವಾಗಿಯೇ ನಟನ ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ. ಅಲ್ಲು ಅರ್ಜುನ್ ಗಿಂತಲೂ ಸೀನಿಯರ್ ನೀನು ಆದರೆ ಆತ ಈಗ ನಿಜಕ್ಕೂ ಸ್ಟಾರ್, ನಿನ್ನಲ್ಲಿ ಪ್ರತಿಭೆ ಇದ್ದರೂ ನೀನು ಸ್ಟಾರ್ ಆಗಲಿಲ್ಲ ಎಂದಿದ್ದಾರೆ. ಯಾರು ಆ ನಟ?

ತೆಲುಗು ನಿರ್ಮಾಪಕ ದಿಲ್ ರಾಜು (Dil Raju), ನೇರ ನುಡಿಯ ನಿರ್ಮಾಪಕ. ಇದೇ ಕಾರಣದಿಂದ ಕೆಲವು ಬಾರಿ ಇಕ್ಕಟ್ಟಿನಲ್ಲೂ ಸಿಲುಕಿಕೊಂಡಿದ್ದಾರೆ. ಇತ್ತೀಚೆಗಷ್ಟೆ ದಿಲ್ ರಾಜು ನಿರ್ಮಾಣದ ‘ಗೇಮ್ ಚೇಂಜರ್’ ಹೀನಾಯ ಸೋಲು ಕಂಡಿದೆ. ಆ ಸೋಲಿನ ಬಗ್ಗೆಯೂ ಸಹ ಯಾವುದೇ ಮುಚ್ಚು ಮರೆ ಇಲ್ಲದೆ ದಿಲ್ ರಾಜು ಮಾತನಾಡಿದ್ದರು. ಇದೀಗ ತೆಲುಗು ಚಿತ್ರರಂಗದಲ್ಲಿ ದಶಕಗಳಿಂದಲೂ ಹೀರೋ ಆಗಿ ನಟಿಸುತ್ತಿರುವ ಸ್ಟಾರ್ ಹೀರೋ ಒಬ್ಬರಿಗೆ, ಅಲ್ಲು ಅರ್ಜುನ್ ದೊಡ್ಡ ಸ್ಟಾರ್ ಆದ, ನೀನು ಹಾಗೆಯೇ ಇದ್ದೀಯ, ಅಲ್ಲು ಅರ್ಜುನ್ ಗೆದ್ದ, ನೀನು ಸೋತೆ ಎಂದು ನೇರವಾಗಿ ಹೇಳಿದ್ದಾರೆ.
ದಿಲ್ ರಾಜು, ‘ತಮ್ಮುಡು’ ಹೆಸರಿನ ಹೊಸ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾನಲ್ಲಿ ನಿತಿನ್ ನಾಯಕ. ‘ಜಯಂ’, ‘ದಿಲ್’, ‘ಸೈ’, ‘ಇಷ್ಕ್’, ‘ಗೆಂಡೆ ಜಾರಿ ಗಲ್ಲಂತೈಯಿಂದೆ’, ‘ಭೀಷ್ಮ’ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ನಿತಿನ್. ಅಸಲಿಗೆ ದಿಲ್ ರಾಜು ಮೊದಲ ನಿರ್ಮಾಣದ ಸಿನಿಮಾ ‘ದಿಲ್’ನಲ್ಲಿ ನಿತಿನ್ ನಾಯಕ. ಆ ಸಿನಿಮಾ ಹಿಟ್ ಆಗಿತ್ತು. ಇದೀಗ ‘ತಮ್ಮುಡು’ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ನಿತಿನ್ ಮತ್ತು ದಿಲ್ ರಾಜು ಒಟ್ಟಿಗೆ ಸಂವಾದವೊಂದನ್ನು ನಡೆಸಿದ್ದಾರೆ.
ನಟ ನಿತಿನ್, ದಿಲ್ ರಾಜು ಅವರನ್ನು ಸಂದರ್ಶನ ಮಾಡಿದ್ದು, ‘ದಿಲ್’ ಸಿನಿಮಾನಲ್ಲಿ ನನ್ನ ನೋಡಿದ್ದೀರಿ, ಈಗ ‘ತಮ್ಮುಡು’ ಸಿನಿಮಾನಲ್ಲಿ ನೋಡಿದ್ದೀರಿ. ಎರಡೂ ಸಿನಿಮಾ ನಡುವೆ 22 ವರ್ಷ ಅಂತರ ಇದೆ. ಆಗಿನ ನನಗೂ ಈಗಿನ ನನಗೂ ಏನು ವ್ಯತ್ಯಾಸ ಗಮನಿಸಿದ್ದೀರಿ? ಎಂದು ನಿತಿನ್ ಕೇಳಿದ್ದಾರೆ. ‘ದಿಲ್’ ನಿನ್ನ ಎರಡನೇ ಸಿನಿಮಾ, ನನಗೆ ಮೊದಲ ಸಿನಿಮಾ. ನನಗಿಂತಲೂ ಒಂದು ವರ್ಷ ಸೀನಿಯರ್ ನೀನು. ‘ದಿಲ್’ ಸಿನಿಮಾದ ಬಳಿಕ ನಾನು ಅಲ್ಲು ಅರ್ಜುನ್ ನಟನೆಯ ‘ಆರ್ಯ’ ಸಿನಿಮಾ ಸಹ ಮಾಡಿದೆ. ಆಗಲೇ ನೀನು ಸ್ಟಾರ್ ಹೀರೋ, ಅಲ್ಲು ಅರ್ಜುನ್ ಹೊಸ ಹೀರೋ. ನಿಮ್ಮಿಬ್ಬರನ್ನೂ ನೋಡಿ, ನಾನು ಇವರು ತೆಲುಗು ಚಿತ್ರರಂಗದ ಭವಿಷ್ಯದ ಸ್ಟಾರ್ ನಟರು ಎಂದು ಲೆಕ್ಕ ಹಾಕಿದ್ದೆ’ ಎಂದಿದ್ದಾರೆ.
ಇದನ್ನೂ ಓದಿ:ಅಲ್ಲು ಅರ್ಜುನ್ ಐಶಾರಾಮಿ ಹೋಟೆಲ್ನಲ್ಲಿವೆ 42 ಟಿವಿಗಳು, ಇನ್ನೂ ಹಲವು ವಿಶೇಷತೆ
ಆದರೆ ಅಲ್ಲು ಅರ್ಜುನ್ ನನ್ನ ಊಹೆ ನಿಜ ಮಾಡಿ ಸ್ಟಾರ್ ನಟ ಎನಿಸಿಕೊಂಡರು. ಆದರೆ ನೀನು ಸ್ಟಾರ್ ಪಟ್ಟ ಪಡೆಯಲಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ. ‘ನೀನು ಹೀರೋ, ಸ್ಟಾರ್ ನಟ ಹೌದು. ಆದರೆ ನಿಜವಾದ ಸ್ಟಾರ್ಡಂ ನೀನು ಸಂಪಾದಿಸಲಿಲ್ಲ’ ಎಂದಿದ್ದಾರೆ. ಆದರೆ ನಿತಿನ್, ದಿಲ್ ರಾಜು ಉತ್ತರವನ್ನು ಸ್ಪೂರ್ತಿಯಿಂದಲೇ ಸ್ವೀಕರಿಸಿದ್ದು, ಈಗ ‘ತಮ್ಮುಡು’ ಸಿನಿಮಾದಿಂದ ಸ್ಟಾರ್ ಆಗಬಹುದಾ? ಎಂದು ಕೇಳಿದ್ದಾರೆ. ಅದಕ್ಕೂ ಸಹ ಪ್ರಾಮಾಣಿಕ ಉತ್ತರವನ್ನೇ ನೀಡಿದ ದಿಲ್ ರಾಜು, ‘ತಮ್ಮುಡು’ ಸಿನಿಮಾ ಹಿಟ್ ಆಗುತ್ತದೆ. ಆದರೆ ನಿನಗೆ ಬ್ರೇಕ್ ಕೊಡುವುದಿಲ್ಲ’ ಎಂದಿದ್ದಾರೆ.
ಆಗ ನಿತಿನ್ ಹಾಗಿದ್ದರೆ ‘ಯಲ್ಲಮ್ಮ’ ಸಿನಿಮಾದಲ್ಲಿ ಬ್ರೇಕ್ ಸಿಗಬಹುದೇ? ಎಂದು ಕೇಳಿದ್ದಾರೆ. ಅದಕ್ಕೆ ದಿಲ್ ರಾಜು, ಹೌದು ಆ ಸಿನಿಮಾ ನಿನ್ನ ವೃತ್ತಿ ಜೀವನದಲ್ಲಿ ತಿರುವು ನೀಡುವ ಸಿನಿಮಾ ಆಗಲಿದೆ’ ಎಂದಿದ್ದಾರೆ. ಅಸಲಿಗೆ ‘ಯಲ್ಲಮ್ಮ’ ಸಿನಿಮಾವನ್ನು ಸಹ ದಿಲ್ ರಾಜು ಅವರೇ ನಿರ್ಮಾಣ ಮಾಡುತ್ತಿದ್ದಾರೆ. ದಿಲ್ ರಾಜು ಈ ಹಿಂದೆ ನಿರ್ಮಿಸಿದ್ದ ಸೂಪರ್ ಹಿಟ್ ಸಿನಿಮಾ ‘ಬಲಗಂ’ನ ನಿರ್ದೇಶಕ ವೇಣು ಯೆಲದಂಡಿ ನಿರ್ದೇಶಿಸುತ್ತಿದ್ದಾರೆ. ‘ಯಲ್ಲಮ್ಮ’ ಸಿನಿಮಾ ಗ್ರಾಮೀಣ ಭಾಗದ ಕತೆಯನ್ನು ಒಳಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ