ಅಪ್ಪು, ಅಣ್ಣಾವ್ರ ಸಮಾಧಿಗೆ ನಮಿಸಿದ ಯಶ್ ತಾಯಿ ಪುಷ್ಪ; ಸಿನಿಮಾ ಬಗ್ಗೆ ನೇರ ಮಾತು
ಡಾ. ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಪುಷ್ಪ ಅವರು ಮಾತನಾಡಿದರು. ‘ಕೊತ್ತಲವಾಡಿ’ ಸಿನಿಮಾಗೆ ಬಂಡವಾಳ ಹೂಡಿರುವ ಅವರು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಸಮಾಧಿಯೇ ದೇವಸ್ಥಾನ ಇದ್ದಂತೆ ಎಂದು ಅವರು ಹೇಳಿದ್ದಾರೆ.

ನಟ ಯಶ್ ಅವರ ತಾಯಿ ಪುಷ್ಪ (Yash mother Pushpa) ಅವರು ನಿರ್ಮಾಪಕಿ ಆಗಿದ್ದಾರೆ. ಅವರು ನಿರ್ಮಿಸಿರುವ ಮೊದಲ ಸಿನಿಮಾ ‘ಕೊತ್ತಲವಾಡಿ’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಅವರು ಹೀರೋ. ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇಂದು (ಜುಲೈ 2) ಪುನೀತ್ ರಾಜ್ಕುಮಾರ್ (Puneeth Rajkumar) ಸಮಾಧಿಗೆ ಪುಷ್ಪ ಅವರು ಭೇಟಿ ನೀಡಿದ್ದಾರೆ. ಅಪ್ಪು ಸಮಾಧಿಗೆ ನಮಿಸಿದ ಬಳಿಕ ಅವರು ಸಿನಿಮಾ ಬಗ್ಗೆ ಮಾತನಾಡಿದರು.
‘ಇದೇ ನಮ್ಮ ದೇವಸ್ಥಾನ. ಕನ್ನಡ ಚಿತ್ರರಂಗಕ್ಕೆ ಬುನಾದಿ ಹಾಕಿಕೊಟ್ಟು, ನಮ್ಮನ್ನೆಲ್ಲ ಬೆಳೆಸಿ ಹೋದವರು ಅಣ್ಣಾವ್ರು. ಇವತ್ತಿನಿಂದ ನಮ್ಮ ಸಿನಿಮಾದ ಪ್ರಚಾರ ಶುರು. ಮೊದಲು ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿ ಕೆಲಸ ಆರಂಭಿಸೋಣ ಅಂತ ನಮ್ಮ ತಂಡದ ಜೊತೆ ಚರ್ಚೆ ಮಾಡಿದೆ. ಅವರು ಸರಿ ಎಂದರು’ ಎಂದಿದ್ದಾರೆ ಪುಷ್ಪ.
‘ಅಪ್ಪು ಅವರು ಕೂಡ ನಮ್ಮ ಮನೆ ಮಗ ಇದ್ದಂತೆ. ಆದರೆ ದೇವರ ಆಟ, ವಿಧಿ ಏನೂ ಮಾಡೋಕೆ ಆಗಲ್ಲ. ಪಾರ್ವತಮ್ಮನವರ ಆಶೀರ್ವಾದ ಇದೆ. ಯಶ್ 5 ತಿಂಗಳು ಮಗು ಆಗಿದ್ದಾಗ ಅನುರಾಗ ಅರಳಿತು ಸಿನಿಮಾ ತೋರಿಸಿದ್ದೆ. ನಮ್ಮ ಮೊಮ್ಮಗನಿಗೆ ಕಸ್ತೂರಿ ನಿವಾಸ ಹೊಸ ಪ್ರಿಂಟ್ ತೋರಿಸಿದ್ದೇನೆ. ನಮಗೆ ರಾಜ್ಕುಮಾರ್ ಮೇಲೆ ಅಷ್ಟು ಅಭಿಮಾನ’ ಎಂದು ಪುಷ್ಪ ಅವರು ಹೇಳಿದ್ದಾರೆ.
‘ಕೊತ್ತಲವಾಡಿ ಸಿನಿಮಾಗೆ ನಮ್ಮ ಪ್ರಚಾರದ ಪ್ಲ್ಯಾನ್ ಏನೂ ಇಲ್ಲ. ಜನರೇ ಪ್ರಚಾರ ಮಾಡುತ್ತಾರೆ. ನೀವು ಅಂದುಕೊಂಡ ತಕ್ಷಣ ಪ್ರಚಾರ ಆಗಲ್ಲ. ಇಲ್ಲಿ ನಮ್ಮದು ಏನೂ ನಡೆಯಲ್ಲ. ಇಷ್ಟ ಆಗಲಿಲ್ಲ ಎಂದರೆ ಇಂಥ ನೂರಾರು ಸಿನಿಮಾಗಳನ್ನು ಜನರು ಮೂಲೆಗೆ ಎಸೆಯುತ್ತಾರೆ. ಜನರಿಗೆ ಬುದ್ಧಿ ಇದೆ. ಪ್ರಚಾರ ಮಾಡಿದ ಮಾತ್ರಕ್ಕೆ ಜನರು ಬಂದು ಸಿನಿಮಾ ನೋಡುತ್ತಾರೆ ಅಂದುಕೊಂಡರೆ ನಾವು ತುಂಬಾ ದಡ್ಡರು’ ಎಂದಿದ್ದಾರೆ ಯಶ್ ತಾಯಿ ಪುಷ್ಪ.
ಇದನ್ನೂ ಓದಿ: ಶಿವರಾಜ್ ಕುಮಾರ್ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
‘ಸಿನಿಮಾ ಚೆನ್ನಾಗಿ ಇದ್ದರೆ ಜನರು ಚಿತ್ರಮಂದಿರದಲ್ಲಿ ನೋಡುತ್ತಾರೆ. ಮೊದಲ ಮೂರು ದಿನ ನಮಗೆ ಚಾನ್ಸ್ ಕೊಡುತ್ತಾರೆ. ಸಿನಿಮಾದಲ್ಲಿ ಕಂಟೆಂಟ್ ಇದ್ದರೆ ಜನರು ಬಾಯಿ ಮಾತಿನ ಪ್ರಚಾರ ನೀಡುತ್ತಾರೆ. ಇಲ್ಲದಿದ್ದರೆ, ನೆಗೆಟಿವ್ ಕೂಡ ಅಷ್ಟೇ ಬೇಗ ಮಾಡುತ್ತಾರೆ. ನಮ್ಮ ಮೊದಲ ಸಿನಿಮಾಗೆ ಜನರು ತಪ್ಪು-ಸರಿ ಎರಡನ್ನೂ ಹೇಳಲಿ. ನನ್ನ ಪ್ರಕಾರ ನಮ್ಮ ಡೈರೆಕ್ಟರ್ ಚೆನ್ನಾಗಿ ಮಾಡಿದ್ದಾರೆ. ನೀವೆಲ್ಲ ನೋಡಿ ಹೇಳಿ’ ಎಂಬುದು ಪುಷ್ಪ ಅವರ ಮಾತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.