AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹಿರಂಗ ಪತ್ರದ ಮೂಲಕ ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟ ರಾಮ್ ಚರಣ್ ಅಭಿಮಾನಿಗಳು

Ram Charan Fans: ರಾಮ್ ಚರಣ್ ನಟನೆಯ ಹಿಂದಿನ ಸಿನಿಮಾ ‘ಗೇಮ್ ಚೆಂಜರ್’ ದೊಡ್ಡ ಫ್ಲಾಪ್ ಆಗಿದೆ. ರಾಮ್ ಚರಣ್ ಮತ್ತು ಅವರ ಅಭಿಮಾನಿಗಳು ಈ ಬಗ್ಗೆ ಬೇಸರದಲ್ಲಿದ್ದಾರೆ. ಆದರೆ ಆ ಸಿನಿಮಾದ ನಿರ್ಮಾಪಕರುಗಳು ಹೋದಲ್ಲಿ, ಬಂದಲ್ಲೆಲ್ಲ ‘ಗೇಮ್ ಚೇಂಜರ್’ ಫ್ಲಾಪ್ ಬಗ್ಗೆ ಮಾತನಾಡುತ್ತಾ ಅಭಿಮಾನಿಗಳಿಗೆ ಇನ್ನಷ್ಟು ಬೇಸರ ತರಿಸುತ್ತಿದ್ದಾರೆ. ಇದೀಗ ರಾಮ್ ಚರಣ್ ಅಭಿಮಾನಿಗಳು ನಿರ್ಮಾಪಕರಿಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಬಹಿರಂಗ ಪತ್ರದ ಮೂಲಕ ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟ ರಾಮ್ ಚರಣ್ ಅಭಿಮಾನಿಗಳು
Game Changer
ಮಂಜುನಾಥ ಸಿ.
|

Updated on: Jul 02, 2025 | 11:06 AM

Share

ರಾಮ್ ಚರಣ್ (Ram Charan) ಪ್ರಸ್ತುತ ‘ಪೆದ್ದಿ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ‘ಆರ್​​ಆರ್​​ಆರ್’ ಸಿನಿಮಾದ ಮೂಲಕ ಭಾರಿ ದೊಡ್ಡ ಹಿಟ್ ಕೊಟ್ಟ ರಾಮ್ ಚರಣ್ ಅದಾದ ಬಳಿಕ ಒಂದರ ಹಿಂದೆ ಒಂದರಂತೆ ಎರಡು ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ. ‘ಆರ್​​ಆರ್​ಆರ್’ ಬಳಿಕ ಬಿಡುಗಡೆ ಆದ ‘ಆಚಾರ್ಯ’ ಅಟ್ಟರ್ ಫ್ಲಾಪ್ ಆಯ್ತು, ಆದರೆ ಆ ಸಿನಿಮಾನಲ್ಲಿ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಹೀರೋ ಹಾಗಾಗಿ ರಾಮ್ ಚರಣ್ ಅಭಿಮಾನಿಗಳು ಹೆಚ್ಚಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅದಾದ ಬಳಿಕ ಬಂದ ‘ಗೇಮ್ ಚೇಂಜರ್’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಸೋಲು ಕಂಡಿತು. ಸಿನಿಮಾ ಸೋತ ಬಳಿಕ ಸಿನಿಮಾದ ನಿರ್ಮಾಪಕರು ಆಡುತ್ತಿರುವ ಮಾತುಗಳು ಸ್ವತಃ ರಾಮ್ ಚರಣ್ ಹಾಗೂ ಅವರ ಅಭಿಮಾನಿಗಳಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಸಿನಿಮಾದ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರಿಷ್ ಅವರುಗಳು ಹೋದಲ್ಲಿ ಬಂದಲ್ಲಿ ಎಲ್ಲ ‘ಗೇಮ್ ಚೇಂಜರ್’ ಸೋಲಿನ ಬಗ್ಗೆಯೇ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಮಾತನಾಡಿದ ಸಿರೀಶ್, ‘ಗೇಮ್ ಚೇಂಜರ್’ ಸೋಲುತ್ತದೆ ಎಂಬುದು ಮುಂಚೆಯೇ ಗೊತ್ತಾಗಿತ್ತು. ಹಾಗಾಗಿ ನಾವು ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ಬಿಡುಗಡೆ ಮಾಡಿ, ಆದ ನಷ್ಟವನ್ನು ಸರಿದೂಗಿಸಿಕೊಂಡಿದ್ದೆವೆ’ ಎಂದಿದ್ದರು. ದಿಲ್ ರಾಜು ಸಹ ಹಲವು ಸಿನಿಮಾ ಕಾರ್ಯಕ್ರಮಗಳಲ್ಲಿ ‘ಗೇಮ್ ಚೇಂಜರ್’ ಸೋಲಿನ ಬಗ್ಗೆ ಮಾತನಾಡಿ ಅಭಿಮಾನಿಗಳಗೆ ಬೇಸರ ತಂದಿದ್ದರು.

ಇದರಿಂದ ರೋಸಿ ಹೋಗಿರುವ ರಾಮ್ ಚರಣ್ ಅಭಿಮಾನಿಗಳು ನಿರ್ಮಾಪಕರುಗಳಿಗೆ ಬಹಿರಂಗ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ‘ಸಿನಿಮಾ ಎಂದರೆ ವ್ಯವಹಾರ, ಅದರಲ್ಲಿ ಲಾಭ ಮತ್ತು ನಷ್ಟ ಸಾಮಾನ್ಯ. ನಿಮ್ಮ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುವ ಸಿನಿಮಾಗಳು ಗೆಲ್ಲುವುದು ನಿಮ್ಮಿಂದಲೇ ಎಂದು ಹೇಳಿಕೊಳ್ಳುವ ನೀವು ಒಂದು ಸಿನಿಮಾ ಸೋತಾಗ ಅದರ ಜವಾಬ್ದಾರಿ ನೀವೇ ಏಕೆ ತೆಗೆದುಕೊಳ್ಳುತ್ತಿಲ್ಲ. ನಿಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾದ ‘ನೇನೊಕ್ಕಡಿನೆ’ ಸಿನಿಮಾ ಸೋತಾಗ ನೀವು ಆ ನಾಯಕನ ಬಗ್ಗೆ ಏಕೆ ಮಾತನಾಡಿರಲಿಲ್ಲ, ಆದರೆ ಈಗ ಏಕೆ ರಾಮ್ ಚರಣ್ ಬಗ್ಗೆ ಮಾತನಾಡುತ್ತಿದ್ದೀರಿ?’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಗೇಮ್ ಚೇಂಜರ್ ಚಿತ್ರದಿಂದ ಆದ ನಷ್ಟ ಎಷ್ಟು?  ವಿವರಿಸಿದ ದಿಲ್ ರಾಜು

‘ಮೈತ್ರಿ ಬ್ಯಾನರ್​​ ನಲ್ಲಿ ನಿರ್ಮಾಣವಾದ ಸಿನಿಮಾಗಳು ಸಹ ಸೋತಿವೆ, ಆದರೆ ಎಂದಿಗೂ ಅವರು ಯಾವ ಹೀರೋ ಬಗ್ಗೆಯೂ ಋಣಾತ್ಮಕವಾಗಿ ಮಾತನಾಡಿಲ್ಲ. ವೆಂಕಟೇಶ್ ನಟನೆಯ ‘ಸೈಂಧವ’ ಸಿನಿಮಾ ಸೋತಾಗ ಆ ನಿರ್ಮಾಪಕ ಒಂದೇ ಒಂದು ಮಾತು ಸಹ ವೆಂಕಟೇಶ್ ಬಗ್ಗೆ ಮಾತನಾಡಿರಲಿಲ್ಲ. ಸರಿ ಈಗ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ಹಿಟ್ ಆಗಿದೆ. ವೆಂಕಟೇಶ್ ಅವರಿಗೆ ಹೆಚ್ಚಿನ ಸಂಭಾವನೆ ಕೊಟ್ಟಿದ್ದೀರಾ? ಮೊದಲು ಮಾತನಾಡಿದಷ್ಟೆ ಕೊಟ್ಟಿದ್ದೀರಿ ತಾನೆ?’ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

‘ನಿರ್ದೇಶಕ ಶಂಕರ್ ಇದ್ದಾರೆ‘ ಎಂದು ಉತ್ಸಾಹದಿಂದ ಮುಂದೆ ಹೋಗಿದ್ದು ನೀವು. ಒಂದು ವರ್ಷ ಎಂದು ಹೇಳಿ ಕೊನೆಗೆ ಮೂರು ವರ್ಷ ಸಿನಿಮಾ ಮಾಡಿದಿರಿ. ‘ಆರ್​ಆರ್​​ಆರ್’ ಅಂಥಹಾ ಹಿಟ್ ಸಿನಿಮಾ ಕೊಟ್ಟ ಮೇಲೂ ರಾಮ್ ಚರಣ್ ನಿಮ್ಮ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದು ಅವರ ದೊಡ್ಡತನ. ಮೂರು ವರ್ಷ ಕಾದ ಬಳಿಕ ರಾಮ್ ಚರಣ್ ಸಿನಿಮಾ ಬಂತು, ಅದೂ ಸಹ ಫ್ಲಾಪ್ ಆಯ್ತು ಎನ್ನುವ ಬೇಸರದಲ್ಲಿ ನಾವು ಅಭಿಮಾನಿಗಳು ಇರುವಾಗ, ನೀವು ಪ್ರತಿದಿನವೂ ಅದೇ ವಿಷಯ ಮಾತನಾಡುತ್ತಾ, ಹೀರೋ ಬಗ್ಗೆ ಸಿನಿಮಾ ಬಗ್ಗೆ ವಿಷ ಕಾರುತ್ತಿರುವುದು ಸರಿಯೇ?’ ಎಂದು ಪ್ರಶ್ನಿಸಿದ್ದಾರೆ.

‘ಪ್ರತಿ ಪ್ರೆಸ್ ಮೀಟ್​​ನಲ್ಲೂ ಪ್ರತಿ ಸಂದರ್ಶನದಲ್ಲೂ ಅದೇ ವಿಷಯವನ್ನು ಪದೇ ಪದೇ ಮಾತನಾಡುತ್ತಾ ಉದ್ದೇಶಪೂರ್ವಕವಾಗಿ ಘಾಸಿಗೊಳಿಸುವ ಯತ್ನ ನಡೆಸಲಾಗುತ್ತಿದೆ. ನಿಮಗೆ ಇದು ಕೊನೆಯ ಎಚ್ಚರಿಕೆ. ಇನ್ನೊಮ್ಮೆ ‘ಗೇಮ್ ಚೇಂಜರ್’ ಬಗ್ಗೆ ಆಗಲಿ, ರಾಮ್ ಚರಣ್ ಬಗ್ಗೆ ಆಗಲಿ ಋಣಾತ್ಮಕವಾಗಿ ಮಾತನಾಡಿದರೆ ಪರಿಸ್ಥಿತಿ ವಿಷಮಕ್ಕೆ ಹೋಗುತ್ತದೆ’ ಎಂದಿದ್ದಾರೆ ರಾಮ್ ಚರಣ್ ಅಭಿಮಾನಿಗಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ