13 ವರ್ಷದ ಬಳಿಕ ದಕ್ಷಿಣಕ್ಕೆ ಬಂದ ಜೆನಿಲಿಯಾ, ಸ್ವಾಗತ ಕೋರಿದ ರಾಜಮೌಳಿ
Genilia D'soza movies: ಜೆನಿಲಿಯಾ ಡಿಸೋಜಾ ಪ್ಯಾನ್ ಇಂಡಿಯಾ ಸಿನಿಮಾಗಳು ಶುರುವಾಗುವ ಮುಂಚೆಯೇ ಪ್ಯಾನ್ ಇಂಡಿಯಾ ನಟಿ ಆಗಿದ್ದವರು. ಅದರಲ್ಲೂ ತೆಲುಗು ಚಿತ್ರರಂಗದಲ್ಲಂತೂ ಬಹಳ ಬೇಡಿಕೆಯ ನಟಿ. ತೆಲುಗು ಪ್ರೇಕ್ಷಕರು ಜೆನಿಲಿಯಾ ಅನ್ನು ತಮ್ಮವರೇ ಎಂದುಕೊಂಡಿದ್ದರು. ಇದೀಗ 13 ವರ್ಷಗಳ ಬಳಿಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಜೆನಿಲಿಯಾ ಮರಳುತ್ತಿದ್ದು, ರಾಜಮೌಳಿ, ನಟಿಯನ್ನು ಸ್ವಾಗತಿಸಿದ್ದಾರೆ.

ಜೆನಿಲಿಯಾ ಡಿಸೋಜಾ (Genelia D’soza) ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನಕ್ಕೆ ಮುಂಚೆಯೇ ಪ್ಯಾನ್ ಇಂಡಿಯಾ ನಟಿ. ಕನ್ನಡ, ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದು ಮಾತ್ರವೇ ಅಲ್ಲದೆ, ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಬಲು ಬೇಡಿಕೆಯ ನಟಿ ಸಹ ಆಗಿದ್ದರು. ಅದರಲ್ಲೂ ತೆಲುಗು ಸಿನಿಮಾ ಪ್ರೇಮಿಗಳ ಬಲು ಮೆಚ್ಚಿನ ನಾಯಕಿ ಸಹ ಆಗಿದ್ದರು ಜೆನಿಲಿಯಾ ಡಿಸೋಜಾ. ಆದರೆ ನಟ ರಿತೇಶ್ ದೇಶ್ಮುಖ್ ಜೊತೆ ವಿವಾಹದ ಬಳಿಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸುವುದು ಬಿಟ್ಟು ಬಿಟ್ಟರು. ಈಗ ಬರೋಬ್ಬರಿ 13 ವರ್ಷದ ಬಳಿಕ ದಕ್ಷಿಣ ಭಾರತ ಸಿನಿಮಾನಲ್ಲಿ ಮತ್ತೆ ನಟಿಸಿದ್ದಾರೆ.
2012 ರಲ್ಲಿ ಜೆನಿಲಿಯಾ ಡಿಸೋಜಾ, ನಟ ರಿತೇಶ್ ದೇಶ್ಮುಖ್ ಜೊತೆ ವಿವಾಹವಾದರು. ಅದೇ ವರ್ಷವೇ ಅವರು ‘ನಾ ಇಷ್ಟಂ’ ಹೆಸರಿನ ತೆಲುಗು ಸಿನಿಮಾನಲ್ಲಿ ನಟಿಸಿದ್ದು, ಅದೇ ಅವರ ಕೊನೆಯ ದಕ್ಷಿಣ ಭಾರತ ಸಿನಿಮಾ ಆಗಿದೆ. ಆದರೆ ಈಗ 13 ವರ್ಷಗಳ ಬಳಿಕ ಜೆನಿಲಿಯಾ ಡಿಸೋಜಾ ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವ ‘ಜೂನಿಯರ್’ ಸಿನಿಮಾ ಮೂಲಕ ಅವರು ಮರಳಿದ್ದು, ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ, ಜೆನಿಲಿಯಾಗೆ ಸ್ವಾಗತ ಕೋರಿದ್ದಾರೆ.
ಇದನ್ನೂ ಓದಿ:‘ಕನ್ನಡದ ಜನರು ಈಗಲೂ ಪ್ರೀತಿ ತೋರಿಸ್ತಾರೆ’; ಖುಷಿಯಿಂದ ಹೇಳಿದ ಜೆನಿಲಿಯಾ
ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ರಾಜಮೌಳಿ, ‘ಸಮಯ ಕಳೆಯುತ್ತಿದೆ ಆದರೆ ನೀವು ಮಾತ್ರ ಹಾಗೆಯೇ ಇದ್ದೀರಿ. ಎಷ್ಟು ವರ್ಷಗಳಾಗಿದೆ ನಾವು ಒಟ್ಟಿಗೆ ಕೆಲಸ ಮಾಡಿ, ಆಗ ಹೇಗಿದ್ದಿರೊ, ಈಗಲೂ ಹಾಗೆಯೇ ಇದ್ದೀರಿ. ನಾನು ಸೆಂಥಿಲ್ ಅನ್ನು ಕೇಳಿದೆ, ಈ ಸಿನಿಮಾನಲ್ಲಿ ಹೊಸ ಜೆನಿಲಿಯಾ ಅನ್ನು ನೋಡಲು ಸಿಗುತ್ತದೆಯೇ ಎಂದು, ಸೆಂಥಿಲ್ ಹೌದು ಎಂದಿದ್ದಾರೆ. ಈ ಸಿನಿಮಾಕ್ಕಾಗಿ ನಾನು ಕಾಯುತ್ತಿದ್ದೇನೆ’ ಎಂದಿದ್ದಾರೆ.
ರಾಜಮೌಳಿ ಅವರ ಮೆಚ್ಚುಗೆಯ ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ನಟಿ ಜೆನಿಲಿಯಾ, ‘ನೀವು ಬಹಳ ವಿನಯವಂತರು ಸರ್, ನಿಮ್ಮ ಮಾತುಗಳು ನನಗೆ ಬಹಳ ಮುಖ್ಯವಾದುದು, ಸ್ಪೂರ್ತಿದಾಯಕವಾದುದು’ ಎಂದಿದ್ದಾರೆ.
ಅಂದಹಾಗೆ ಜೆನಿಲಿಯಾ ಡಿಸೋಜಾ, ರಾಜಮೌಳಿ ಅವರ ಸಿನಿಮಾನಲ್ಲಿ ಕೆಲಸ ಮಾಡಿದ್ದಾರೆ. ರಾಜಮೌಳಿ ನಿರ್ದೇಶಿಸಿದ್ದ ‘ಸೈ’ ಸಿನಿಮಾನಲ್ಲಿ ಜೆನಿಲಿಯಾ ಡಿಸೋಜಾ ನಾಯಕಿ. ಆ ಸಿನಿಮಾ ರಗ್ಬಿ ಆಟದ ಕುರಿತಾದದ್ದಾಗಿದ್ದು, ಸಿನಿಮಾನಲ್ಲಿ ನಿತಿನ್ ನಾಯಕ. ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




