
ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ನಟ, ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದ ಪ್ರಶಾಂತ್ ಗೌಡ, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ (ಜುಲೈ 5) ಪ್ರಶಾಂತ್ ಗೌಡ ಹಾಗೂ ಕೃತಿ ಗೌಡ ಅವರ ವಿವಾಹ ಮಹೋತ್ಸವ ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಿದೆ. ಇವರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಪ್ರಶಾಂತ್ ಗೌಡ ಅವರು ವಿವಾಹವಾಗಿರುವ ಕೃತಿ ಗೌಡ ಅವರು ಕೂಡ ಚಿತ್ರರಂಗದ ಹಿನ್ನೆಲೆಯನ್ನೇ ಹೊಂದಿದ್ದಾರೆ ಎಂಬುದು ವಿಶೇಷ. ಕೃತಿ ಗೌಡ ಅವರು ಈ ಹಿಂದೆ ‘ಬ್ರೇಕ್ ಫೇಲ್ಯೂರ್’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಕಲಾ ರಂಗದಲ್ಲೇ ಗುರುತಿಸಿಕೊಂಡಿರುವ ಈ ಜೋಡಿಯ ಪರಿಚಯ ಪ್ರೇಮಕ್ಕೆ ತಿರುಗಿ, ಈಗ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಒಂದಾಗಿದ್ದಾರೆ.
ಜುಲೈ 5ರಂದು ನಡೆದ ಈ ಅದ್ಧೂರಿ ಮದುವೆಗೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಅನೇಕ ಪ್ರಮುಖ ಸೆಲೆಬ್ರಿಟಿಗಳು ಆಗಮಿಸಿ ನವದಂಪತಿಯನ್ನು ಹರಸಿದ್ದಾರೆ. ವಿಶೇಷವಾಗಿ ‘ಗಿಚ್ಚಿ ಗಿಲಿಗಿಲಿ’ ಶೋನ ಸಹ-ಕಲಾವಿದರು, ಕಾಮಿಡಿ ನಟರು ಹಾಗೂ ಪ್ರಶಾಂತ್ ಅವರ ಆಪ್ತ ಸ್ನೇಹಿತರು ಮದುವೆಯಲ್ಲಿ ಪಾಲ್ಗೊಂಡು ಸಖತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮವನ್ನು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಗೌಡ ಮದುವೆ ಆಗುತ್ತಿರುವ ಕೃತಿ ಗೌಡ ಯಾರು? ಇಲ್ಲಿದೆ ಅವರ ಹಿನ್ನೆಲೆ
ಪ್ರಶಾಂತ್ ಗೌಡ ಅವರು ಕಿರುತೆರೆಯಲ್ಲಿ ತಮ್ಮ ಅದ್ಭುತ ಹಾಸ್ಯ ಟೈಮಿಂಗ್ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿ’ಯ ಸತತ ಮೂರು ಸೀಸನ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅವರು ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಸದ್ಯ ಮದುವೆಯಾಗಿ ಸಂಸಾರ ನೌಕೆ ಏರಿರುವ ನೆಚ್ಚಿನ ನಟನಿಗೆ ಅಭಿಮಾನಿಗಳು ‘ಹೊಸ ಜೀವನಕ್ಕೆ ಶುಭವಾಗಲಿ’ ಎಂದು ಹಾರೈಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:40 am, Mon, 6 July 26