
‘ಥಗ್ ಲೈಫ್’ ಸಿನಿಮಾದ ಪ್ರಚಾರದ ವೇಳೆ ಬಹುಭಾಷಾ ನಟ ಕಮಲ್ ಹಾಸನ್ (Kamal Haasan) ಅವರು ನೀಡಿದ ಒಂದು ಹೇಳಿಕೆಯಿಂದ ವಿವಾದ ಸೃಷ್ಟಿ ಆಗಿದೆ. ತಮಿಳಿನಿಂದ ಕನ್ನಡ (Kannada) ಹುಟ್ಟಿದ್ದು ಎಂದು ಕಮಲ್ ಹಾಸನ್ ಹೇಳಿದ್ದನ್ನು ಕನ್ನಡಿಗರು ಖಂಡಿಸುತ್ತಿದ್ದಾರೆ. ಕಮಲ್ ಹಾಸನ್ ಅವರ ಈ ಹೇಳಿಕೆಯನ್ನು ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಕೂಡ ಖಂಡಿಸಿದ್ದಾರೆ. ತಮ್ಮದೇ ರೀತಿಯಲ್ಲಿ ಹಂಸಲೇಖ ಅವರು ತಿರುಗೇಟು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ವಿಡಿಯೋ ಹಂಚಿಕೊಳ್ಳುವ ಮೂಲಕ ಕಮಲ್ ಹಾಸನ್ಗೆ ಚಾಟಿ ಬೀಸಿದ್ದಾರೆ.
‘ಮಿಸ್ಟರ್ ತಮಿಳು ಹಾಸನ್. ನೀವು ತಮಿಳು ಹಾಸನ್ ಅಂತ ಹೆಸರು ಬದಲಾಯಿಸಿಕೊಳ್ಳಿ ಎಂದು ನಮ್ಮ ಸಂಗೀತ ಶಾಲೆಯ ವಿದ್ಯಾರ್ಥಿಗಳು ನಿಮಗೆ ಮನವಿ ಮಾಡಿದ್ದಾರೆ. ಮಾತು ಮನೆ ಕೆಡಿಸ್ತು. ತೂತು ಒಲೆ ಕೆಡಿಸ್ತು ಅಂತ ನಮ್ಮ ಕಡೆ ಒಂದು ಗಾದೆ ಇದೆ. ಮಾತು ಎಷ್ಟು ತೊಂದರೆ ಕೊಡುತ್ತೆ ನೋಡಿ’ ಎಂದು ಹಂಸಲೇಖ ಹೇಳಿದ್ದಾರೆ.
‘ತಮಿಳುನಾಡು ಸಿಎಂ ಸ್ಟಾಲಿನ್ ಅವರು ಇಡೀ ದಕ್ಷಿಣ ಭಾರತವನ್ನು ಒಂದುಗೂಡಿಸಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ. ತೆಂಕಣವನ್ನು ಕಟ್ಟಬೇಕು ಎಂಬುದು ಅವರ ಕನಸು. ಅವರ ಕನಸಿಗೆ ನಿಮ್ಮ ಮಾತು ಸಹಾಯ ಮಾಡಬೇಕು. ನೀವು ಆ ಪಕ್ಷದ ಮಿತ್ರ ಪಕ್ಷ. ನೀವು ಒಳ್ಳೆಯ ಮಾತಾಡಬೇಕು, ಯೋಚಿಸಿ ಮಾತಾಡಬೇಕು’ ಎಂದು ಹಂಸಲೇಖ ಅವರು ಕಮಲ್ ಹಾಸನ್ಗೆ ಬುದ್ಧಿ ಹೇಳಿದ್ದಾರೆ.
‘ನಾವು ಕನ್ನಡಿಗರು ಭಾಷಾಪ್ರಿಯರು. ಭಾಷಾಂಧತೆ ನಮಗೆ ಇಲ್ಲ. ನಮ್ಮ ಕನ್ನಡದೇಶದ ಸಾಂಸ್ಕೃತಿಕ ರಾಯಭಾರಿ ಬಸವಣ್ಣ. ಬಸವಣ್ಣ ನಮಗೆ ಕೊಟ್ಟಿದ್ದು ವಚನಗಳು. ನಾವು ವಚನಗಳಿಗೆ ಯಜಮಾನರು. ವಚನ ಎಂದರೆ ಮಾತು ಸ್ವಾಮಿ. ಮಾತು ಎಚ್ಚರಿಕೆಯಿಂದ ಆಡಬೇಕು. ತಮಿಳಿಗೆ ಲಿಪಿಯನ್ನು ಕೊಟ್ಟಿದ್ದು ಕನ್ನಡ ಭಾಷೆ ಅಂತ ವಿದ್ವಾಂಸರು ಹೇಳ್ತಾರೆ. ಅದರ ಬಗ್ಗೆ ಸ್ವಲ್ಪ ವಿಚಾರಿಸಿ ನೋಡಿ’ ಎಂದಿದ್ದಾರೆ ಹಂಸಲೇಖ.
ಇದನ್ನೂ ಓದಿ: ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು ಎಚ್ಚರಿಕೆ
‘ನಾವು ಕಲಾವಿದರು. ತೆಂಕಣವನ್ನು ಕಟ್ಟುವ ಕನಸನ್ನು ಹೊತ್ತವರು. ಎಲ್ಲರೂ ಒಟ್ಟಾಗಿ ಬದುಕಬೇಕು ಅಂತ ಆಸೆಪಡುವ ಭಾರತೀಯರು. ಆದ್ದರಿಂದ ನೀವು ದಯವಿಟ್ಟು ಕ್ಷಮೆ ಕೇಳಿ. ಏನೂ ತಪ್ಪಿಲ್ಲ. ನೀವು ಕ್ಷಮೆ ಕೇಳಿದರೆ ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲದಿದ್ದರೆ ಆ ಹಾಸನ್ ಆಗುತ್ತೀರಿ. ಆ ಹಾಸನ್ದಲ್ಲಿ ಮತಾಂಧತೆ, ಭಾಷಾಂಧತೆ ಎಂಬ ಕೊಳಕು ಬೀಜಗಳಿರುವ ಅನುಮಾನ ಇದೆ’ ಎಂದು ಹಂಸಲೇಖ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.