ತೆಲುಗಿನ ‘ಹನುಮಾನ್’ ಸಿನಿಮಾ (HanuMan) ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ತೇಜ್ ಸಜ್ಜಾ ಅವರು ನಟಿಸುತ್ತಿದ್ದು, ಪ್ರಶಾಂತ್ ವರ್ಮ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಜನವರಿ 12ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಪೌರಾಣಿಕ ಹಾಗೂ ಆಧುನಿಕ ಕಥೆಗಳ ಸಮ್ಮಿಶ್ರಣದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಈಗ ಸಿನಿಮಾ ತಂಡ ಒಂದೊಳ್ಳೆಯ ಕೆಲಸ ಮಾಡಲು ಮುಂದಾಗಿದೆ. ಮಾರಾಟ ಆಗುವ ‘ಹನುಮಾನ್’ ಚಿತ್ರದ ಪ್ರತಿ ಟಿಕೆಟ್ಗೆ ಐದು ರೂಪಾಯಿಯನ್ನು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ತಂಡ ಮುಂದಾಗಿದೆ.
ಕಳೆದ ವರ್ಷ ರಾಮಾಯಣ ಆಧರಿಸಿ ರಿಲೀಸ್ ಆದ ‘ಆದಿಪುರುಷ್’ ಸಿನಿಮಾ ಫ್ಲಾಪ್ ಆಯಿತು. ಪೌರಾಣಿಕ ಕಥೆ ಆಧರಿಸಿ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು ಎಂಬುದನ್ನು ಈ ಸಿನಿಮಾ ಸಾಬೀತು ಮಾಡಿತ್ತು. ಈಗ ‘ಹನುಮಾನ್’ ತಂಡದವರು ಹೊಸ ಪ್ರಯೋಗ ಮಾಡಿದ್ದಾರೆ. ಹನುಮಂತನ ಪಾತ್ರವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಕಥೆಗೆ ಆಧುನಿಕ ಟಚ್ ನೀಡಿ ‘ಹನುಮಾನ್’ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ.
ಜನವರಿ 7ರಂದು ಅದ್ದೂರಿಯಾಗಿ ‘ಹನುಮಾನ್’ ಸಿನಿಮಾದ ಪ್ರೀರಿಲೀಸ್ ಇವೆಂಟ್ ನಡೆಯಿತು. ಚಿರಂಜೀವಿ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಅವರು ಜನರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಮುಖ ವಿಚಾರ ಬಿಚ್ಚಿಟ್ಟರು. ‘ತಮ್ಮ ಚಿತ್ರದ ಪ್ರತಿ ಟಿಕೆಟ್‌ನಿಂದ 5 ರೂಪಾಯಿಯನ್ನು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ಹನುಮಾನ್ ತಂಡ ನಿರ್ಧರಿಸಿದ್ದಾರೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು ಅವರು.
ಇದನ್ನೂ ಓದಿ: ಸಂಕ್ರಾಂತಿ ರೇಸ್ನಲ್ಲಿ ಹಲವು ತೆಲುಗು ಸಿನಿಮಾಗಳು, ನಿರ್ಮಾಪಕರ ನಡುವೆ ಅಸಮಾಧಾನ
‘ಹನುಮಾನ್’ ಸಿನಿಮಾಗೆ ಪ್ರಶಾಂತ್ ವರ್ಮ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಕಲ್ಕಿ’, ‘ಜಾಂಬಿ ರೆಡ್ಡಿ’ ಅಂಥ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ತೇಜ್ ಸಜ್ಜಾ ಹೀರೋ ಪಾತ್ರ ಮಾಡಿದರೆ ವಿನಯ್ ರಾಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮೀ ಶರತ್ಕುಮಾರ್, ರಾಜ್ ದೀಪಕ್ ಶೆಟ್ಟಿ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ ಮೊದಲಾದ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ಈ ಬಾರಿ ಸಂಕ್ರಾಂತಿಗೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ. ‘ಹನುಮಾನ್’ ಜೊತೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’, ಅಕ್ಕಿನೇನಿ ನಾಗಾರ್ಜುನ ನಟನೆಯ ‘ನಾ ಸಾಮಿ ರಂಗ’ ಮೊದಲಾದ ಚಿತ್ರಗಳು ಬಿಡುಗಡೆ ಆಗಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ