ಬಾರ್ಬಡೋಸ್‌ನಲ್ಲಿ ನಡೆದ ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ವಿಶ್ವಕಪ್ ಗೆಲುವಿನ ನಂತರ ಅವರ ಪತ್ನಿ ನತಾಶಾ ಅವರು ಹಾರ್ದಿಕ್‌ಗಾಗಿ ಒಂದೇ ಒಂದು ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕದ ಕಾರಣ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಈಗ ವಿಶ್ವಕಪ್ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ನತಾಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕೂಡ ಹಾರ್ದಿಕ್ಗೆ ಸಂಬಂಧಿಸಿದ್ದಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ. ಈ ಪೋಸ್ಟ್‌ನ ಕಾಮೆಂಟ್ ಬಾಕ್ಸ್‌ನಲ್ಲಿ, ಹಲವಾರು ಜನರು ಹತಾಶೆಯಿಂದ ವಿಚ್ಛೇದನದ ಬಗ್ಗೆ ಕೇಳಿದ್ದಾರೆ. ‘ನೀವು ಹಾರ್ದಿಕ್ ಜೊತೆ ಇದ್ದೀರೋ ಇಲ್ಲವೋ ಹೇಳಿ’ ಎಂದು ಪ್ರಶ್ನೆ ಮಾಡಿದ್ದಾರೆ.
ನತಾಶಾ ಇಂದು ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಶ್ವಕಪ್‌ನಲ್ಲಿ ಭಾರತ ಗೆದ್ದ ನಂತರ ಇದು ಅವರ ಮೊದಲ ಪೋಸ್ಟ್. ಹಾಗಾಗಿ ಇದು ಎಲ್ಲರ ಗಮನ ಸೆಳೆದಿದೆ. ನತಾಶಾ ಅವರು ಪೋಸ್ಟ್ ಮಾಡಿದ ಫೋಟೋಗಳಲ್ಲಿ, ಅವರು ತಮ್ಮ ಬಟ್ಟೆ ಮತ್ತು ಪರ್ಸ್ ಅನ್ನು ಪ್ರದರ್ಶಿಸಿದ್ದಾರೆ. ಅವರು ಈ ಫೋಟೋಗಳಿಗೆ ‘ಫಿಟ್ ಚೆಕ್’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋಗೆ ಲೈಕ್‌ಗಳ ಸುರಿಮಳೆ ಬಂದಿದೆ. ಆದರೆ ಅದರೊಂದಿಗೆ ಹಲವರು ಹಾರ್ದಿಕ್ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
‘ಹಾರ್ದಿಕ್ ವಿಶ್ವಕಪ್ ಗೆದ್ದಿದ್ದಾರೆ, ಅವರಿಗೆ ಮೆಚ್ಚುಗೆಯ ಪೋಸ್ಟ್ ಎಲ್ಲಿ’ ಎಂದು ಒಬ್ಬರು ಕೇಳಿದ್ದಾರೆ. ‘ನತಾಶಾ ನಾವು ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ. ನೀವು ಹಾರ್ದಿಕ್ ಜೊತೆ ಇದ್ದೀರೋ ಇಲ್ಲವೋ ನೇರವಾಗಿ ಹೇಳಿ’ ಎಂದು ಮತ್ತೊಬ್ಬರು ಕೇಳಿದ್ದಾರೆ. ‘ವಿಶ್ವಕಪ್ ಸಿಗಲಿ, ಸಿಗದಿರಲಿ, ಇಂಥ ಹೆಂಡತಿ ಯಾರಿಗೂ ಸಿಗಬಾರದು’ ಎಂದೂ ಕೆಲವರು ಬರೆದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಈ ಚರ್ಚೆಗೆ ಇಬ್ಬರೂ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ಒಟ್ಟಾಗಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಇದನ್ನೂ ಓದಿ: ವಿಶ್ವಕಪ್ ಗೆದ್ದ ಹಾರ್ದಿಕ್ ಪಾಂಡ್ಯ: ಪತ್ನಿ ನತಾಶಾ ಫುಲ್ ಸೈಲೆಂಟ್
ಮದುವೆ ಬಳಿಕ ನತಾಶಾ ತಮ್ಮ ಹೆಸರಿನ ಮುಂದೆ ಪಾಂಡ್ಯ ಎಂದು ಸೇರಿಸಿಕೊಂಡಿದ್ದರು. ಆದರೆ, ಇದನ್ನು ಈಗ ತೆಗೆದಿದ್ದಾರೆ. ಅಲ್ಲದೆ ಹಾರ್ದಿಕ್ ಜೊತೆಗಿನ ಕೆಲವು ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದರಿಂದ ವಿಚ್ಛೇದನದ ಸುದ್ದಿಗಳು ಹುಟ್ಟಿಕೊಂಡವು. ಹಾರ್ದಿಕ್ ಹಾಗೂ ನತಾಶಾ ಇಬ್ಬರೂ ಪರಸ್ಪ ಪ್ರೀತಿಸಿದರು. ಮಗು ಪಡೆದ ಬಳಿಕ ಇಬ್ಬರೂ ಮದುವೆ ಆದರು. ಇವರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಕನ್ನಡದ ನಟ ಯಶ್ ಕೂಡ ಈ ಮದುವೆಯಲ್ಲಿ ಭಾಗಿ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:23 am, Tue, 2 July 24