Movies Releasing This Week: ಈ ವಾರ ಬಂದಿವೆ ಒಂದಕ್ಕಿಂತ ಒಂದು ದೊಡ್ಡ ಸಿನಿಮಾ, ನಿಮ್ಮ ಆಯ್ಕೆ ಯಾವುದು?
ಈ ವಾರ ಸಿನಿಮಾ ರಸಿಕರಿಗೆ ಹಬ್ಬ. ಬರೋಬ್ಬರಿ ಐದು ಬಿಗ್ ಬಜೆಟ್, ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಈ ಐದರಲ್ಲಿ ನಿಮ್ಮ ಆಯ್ಕೆ ಯಾವುದು?
ಮತ್ತೊಂದು ಶುಕ್ರವಾರದ (Friday) ಹೊಸ್ತಿಲಲ್ಲಿ ಹೊಸ ಸಿನಿಮಾಗಳು ಚಿತ್ರಮಂದಿರಗಳಿಗೆ (Theater) ಕಾಲಿಟ್ಟಿವೆ. ಮಾರ್ಚ್ 17 ರಂದು ಬಿಡುಗಡೆ ಆಗಿದ್ದ ಕಬ್ಜ ಸಿನಿಮಾದ ಬಳಿಕ ಆ ಮಟ್ಟಿಗಿನ ದೊಡ್ಡ ಸಿನಿಮಾ ಯಾವುದೂ ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. ಆದರೆ ಇದೀಗ ಒಮ್ಮಿಗೆ ಐದು ಬಿಗ್ಬಜೆಟ್, ಸ್ಟಾರ್ ಸಿನಿಮಾಗಳು ಚಿತ್ರಮಂದಿರಗಳಿಗೆ ದಾಂಗುಡಿ ಇಟ್ಟಿವೆ. ಸಿನಿಮಾ ಪ್ರಿಯರಿಗೆ ಈ ವಾರ ಆಯ್ಕೆಯ ಸಮಸ್ಯೆ ಕಾಡಲಿವೆ, ಒಂದಕ್ಕಿಂತಲೂ ಒಂದು ಭಿನ್ನ ಕಥಾವಸ್ತುವುಳ್ಳ, ಗುಣಮಟ್ಟದ ಮೇಕಿಂಗ್ ಉಳ್ಳ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ.
ಹೊಯ್ಸಳ
ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ ಹೊಯ್ಸಳ ಈ ವಾರ ತೆರೆಗೆ ಬಂದಿದೆ. ಮಾರ್ಚ್ 30 ರಂದು ಕರ್ನಾಟಕದಾದ್ಯಂತ ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಿದೆ. ಹೊಂಬಾಳೆಯ ಸಹೋದರ ಸಂಸ್ಥೆ ಕೆಆರ್ಜಿ ವತಿಯಿಂದ ಸಿನಿಮಾ ನಿರ್ಮಾಣಗೊಂಡಿದ್ದು, ವಿಜಯ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ. ಸಿನಿಮಾದಲ್ಲಿ ಡಾಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ದಸರಾ
ನಟ ನಾನಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಕನ್ನಡಿಗ ದರ್ಶಿತ್ ಒಟ್ಟಿಗೆ ನಟಿಸಿರುವ ದಸರಾ ಸಿನಿಮಾ ಮಾರ್ಚ್ 30 ರ ಗುರುವಾರ ವಿಶ್ವದೆಲ್ಲೆಡೆ ಬಿಡುಗಡೆ ಆಗಲಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಬೆಂಗಳೂರಿನಲ್ಲಿ ತೆಲುಗು ಜೊತೆಗೆ ಕೆಲವು ಚಿತ್ರಮಂದಿರಗಳಲ್ಲಿ ಕನ್ನಡದಲ್ಲಿಯೂ ಬಿಡುಗಡೆ ಆಗಿದೆ. ಹಳ್ಳಿಯ ಮಾಸ್ ಕತೆಯನ್ನು ಈ ಸಿನಿಮಾ ಹೊಂದಿದ್ದು, ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಸಿನಿಮಾ ಪ್ರೇಮಿಗಳಿಗಿದೆ.
ಪತ್ತು ತಲ
ಕನ್ನಡದಲ್ಲಿ ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಮಫ್ತಿ ಸಿನಿಮಾದ ತಮಿಳು ರೀಮೇಕ್ ಪತ್ತು ತಲ ಇಂದು ಗುರುವಾರ ಬಿಡುಗಡೆ ಆಗುತ್ತಿದೆ. ಕನ್ನಡದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದ ಪಾತ್ರದಲ್ಲಿ ತಮಿಳಿನ ಸ್ಟಾರ್ ನಟ ಸಿಂಭು ನಟಿಸಿದ್ದಾರೆ.
ಭೋಲಾ
ಅಜಯ್ ದೇವಗನ್ ನಟನೆಯ ಹಿಂದಿ ಸಿನಿಮಾ ಭೋಲಾ ಇಂದು ಗುರುವಾರ ಬಿಡುಗಡೆ ಆಗಲಿದೆ. ಇದು ತಮಿಳಿನ ಸೂಪರ್ ಹಿಟ್ ಸಿನಿಮಾ ಖೈದಿಯ ರೀಮೇಕ್ ಆದರೂ ಕತೆ ಹಾಗೂ ಮೇಕಿಂಗ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಚಿತ್ರತಂಡ ಮಾಡಿಕೊಂಡಿದೆ. 3ಡಿ ತಂತ್ರಜ್ಞಾನದಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಟಬು ಸಹ ಮುಖ್ಯ ಪಾತ್ರವೊಂದರಲ್ಲಿ ನಟಿಸಿರುವ ಭೋಲಾ ಸಿನಿಮಾದ ಟ್ರೈಲರ್ ಈಗಾಗಲೇ ವೈರಲ್ ಆಗಿದೆ.
ವಿಡುದಲೈ
ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು ಎನ್ನಲಾಗುವ ತಮಿಳಿನ ವೆಟ್ರಿಮಾರನ್ ನಿರ್ದೇಶನ ಮಾಡಿರುವ ಥ್ರಿಲ್ಲರ್ ಕತೆಯುಳ್ಳ ವಿಡುದಲೈ ಪಾರ್ಟ್ 1 ಸಿನಿಮಾ ಶುಕ್ರವಾರ ಮಾರ್ಚ್ 31 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ಸೂರಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯಪಾತ್ರಗಳಲ್ಲಿ ನಟಿಸುತ್ತಿದ್ದ ಸೂರಿ ಈ ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.