ಎಮ್ಮಿ ಪ್ರಶಸ್ತಿಯನ್ನು (Emmys Awards) ಆಸ್ಕರ್ ಸಮಾನವೆಂದೇ ಪರಿಗಣಿಸಲಾಗುತ್ತದೆ. ಎಮ್ಮಿ ಪ್ರಶಸ್ತಿ ಸಿನಿಮಾಗಳಿಗಲ್ಲದೆ ಟಿವಿ ಅಥವಾ ಒಟಿಟಿ ಶೋಗಳಿಗೆ ನೀಡಲಾಗುತ್ತದೆ. 75ನೇ ಎಮ್ಮಿ ಪ್ರಶಸ್ತಿಗೆ ಸೆಣಸುತ್ತಿರುವ ಶೋಗಳು, ಅಂಥಾಲಜಿ ಸಿನಿಮಾ, ನಟ-ನಟಿ, ತಂತ್ರಜ್ಙರ ನಾಮಿನೇಶನ್ (Nominations) ಪಟ್ಟಿ ಬಿಡುಗಡೆ ಆಗಿದೆ. ಹಲವು ಜನಪ್ರಿಯ ಶೋಗಳು ಪ್ರಶಸ್ತಿಗಾಗಿ ಸೆಣೆಸುತ್ತಿವೆ. ಭಾರತದಲ್ಲಿ ಸಾಕಷ್ಟು ಶೋಗಳು ನಿರ್ಮಾಣವಾಗುತ್ತಿವೆಯಾದರೂ ಈ ಬಾರಿಯ ಎಮ್ಮಿಯಲ್ಲಿ ಭಾರತದ ಯಾವುದೇ ಶೋ ಇಲ್ಲ.
ಈ ಬಾರಿ ಅತ್ಯುತ್ತಮ ಟಿವಿ ಡ್ರಾಮಾ ಶೋ ಅಥವಾ ಸರಣಿ ವಿಭಾಗದಲ್ಲಿ ಹಾಟ್ಸ್ಟಾರ್ನಲ್ಲಿ ಸ್ಟ್ರೀಂ ಆಗುತ್ತಿರುವ ‘ಆಂಡೋರ್’, ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿರುವ ‘ಬೆಟರ್ ಕಾಲ್ ಸಾಲ್’, ನೆಟ್ಫ್ಲಿಕ್ಸ್ನ ‘ದಿ ಕ್ರೌನ್’, ಎಚ್ಬಿಓನ ‘ಹೌಸ್ ಆಫ್ ಡ್ರ್ಯಾಗನ್ಸ್’, ‘ದಿ ಲಾಸ್ಟ್ ಆಫ್ ಅಸ್’, ‘ಸಕ್ಸೆಶನ್’, ‘ದಿ ವೈಟ್ ಲೋಟಸ್’, ‘ಯಲ್ಲೊ ಜಾಕೆಟ್’ ಶೋಗಳು ಈ ವರ್ಷದ ಅತ್ಯುತ್ತಮ ಟಿವಿ ಸರಣಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಈ ವರ್ಷದ ಅತ್ಯುತ್ತಮ ಕಾಮಿಡಿ ಸರಣಿ ವಿಭಾಗದಲ್ಲಿ, ಎಬಿಸಿಯ ‘ಅಬಾಟ್ ಎಲಿಮೆಂಟ್ರಿ’, ‘ಬ್ಯಾರಿ’, ‘ದಿ ಬಿಯರ್’, ‘ಜ್ಯೂರಿ ಡ್ಯೂಟಿ’, ‘ದಿ ಮಾರವೆಲೆಸ್ ಮಿಸೆಸ್ ಮೈಸಲ್’, ‘ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್’, ‘ಟೆಡ್ ಲಾಸ್ಸೊ’, ‘ವೆಡ್ನೆಸ್ ಡೇ’ ಶೋಗಳು ಪರಸ್ಪರ ಸೆಣೆಸುತ್ತಿವೆ.
ಅತ್ಯುತ್ತಮ ಡ್ರಾಮಾ ಸರಣಿಯಲ್ಲಿ ‘ಸಕ್ಸೆಶನ್’, ‘ಬೆಟರ್ ಕಾಲ್ ಸಾಲ್’, ‘ದಿ ಕ್ರೌನ್’ ಹಾಗೂ ‘ಹೌಸ್ ಆಫ್ ಡ್ರ್ಯಾಗನ್ಸ್’ ಮಧ್ಯೆ ಪ್ರಬಲ ಪೈಪೋಟಿ ಇದೆ. ಇನ್ನು ಕಾಮಿಡಿ ವಿಭಾಗದಲ್ಲಿ ‘ದಿ ಮಾರವೆಲೆಸ್ ಮಿಸೆಸ್ ಮೈಸಲ್’, ‘ಟೆಡ್ ಲಾಸ್ಸೊ’ ಮಧ್ಯೆ ಪೈಪೋಟಿ ಇದೆ. ‘ವೆಡ್ನೆಸ್ ಡೇ’ ಬಗ್ಗೆಯೂ ನಿರೀಕ್ಷೆಗಳಿವೆ. ವೆಡ್ನೆಸ್ ಡೇ ನಟಿ ಜೆನ್ನಾ ಒರ್ಟೆಗಾ, ಕಾಮಿಡಿ ಸರಣಿಯ ಅತ್ಯುತ್ತಮ ನಟಿ ವಿಭಾಗದಲ್ಲಿಯೂ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ:Alia Bhatt: ಹಾಲಿವುಡ್ನಲ್ಲೂ ಬಾಲಿವುಡ್ ಬೆಡಗಿಯರದ್ದೇ ಹವಾ
ಹಲವಾರು ವಿಭಾಗಗಳಲ್ಲಿ ಎಮ್ಮಿ ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದೆ. ಆಸ್ಕರ್ಗಿಂತಲೂ ಹೆಚ್ಚಿನ ವಿಭಾಗಗಳು ಎಮ್ಮಿ ಪ್ರಶಸ್ತಿಯಲ್ಲಿವೆ. ಡ್ರಾಮಾ ಸೀರೀಶ್ ಅತ್ಯುತ್ತಮ ನಟ, ಡ್ರಾಮಾ ಸೀರೀಸ್ ಅತ್ಯುತ್ತಮ ನಟಿ, ಪೋಷಕ ನಟ, ಪೋಷಕ ನಟಿ, ಕಾಮಿಡಿ ಸರಣಿಯಲ್ಲಿ ಅತ್ಯುತ್ತಮ ನಟ,ಕಾಮಿಡಿ ಸರಣಿಯಲ್ಲಿ ಅತ್ಯುತ್ತಮ ನಟಿ, ಕಾಮಿಡಿ ಸರಣಿಯಲ್ಲಿ ಅತ್ಯುತ್ತಮ ಪೋಷಕ ನಟ, ಪೋಷಕ ನಟಿ, ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ನಿರ್ದೇಶಕ, ಎಡಿಟರ್, ಸಂಗೀತಗಾರ ಹೀಗೆ ಹಲವು ಪ್ರಶಸ್ತಿಗಳ ಜೊತೆಗೆ ಅತ್ಯುತ್ತಮ ಟಾಕ್ ಶೋ, ಅತ್ಯುತ್ತಮ ಲೇಟ್ ನೈಟ್ ಶೋ, ಅತ್ಯುತ್ತಮ ರಿಯಾಲಿಟಿ ಶೋ, ಅತ್ಯುತ್ತಮ ಡಾಕ್ಯುಮೆಂಟರಿ, ಅತ್ಯುತ್ತಮ ಡಾಕ್ಯುಮೆಂಟರಿ ಫಿಕ್ಷನಲ್, ಕಾಮಿಡಿ ಹಾಗೂ ಡ್ರಾಮಾ ಎರಡು ವಿಭಾಗದಲ್ಲಿ ಅತ್ಯುತ್ತಮ ಗೆಸ್ಟ್ ಅಪಿಯರೆನ್ಸ್, ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಬರಹಗಾರರು, ಎಪಿಸೋಡ್ ಬರಹಗಾರರು, ನಿರ್ಮಾಪಕರು, ಎಪಿಸೋಡ್ ನಿರ್ಮಾಪಕರು, ಕ್ಯಾಮೆರಾ ಇನ್ನೂ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಇದು 75ನೇ ಎಮ್ಮಿ ಪ್ರಶಸ್ತಿಯಾಗಿದ್ದು, ಪ್ರಶಸ್ತಿ ವಿತರಣೆ ಸಮಾರಂಭವು ಸೆಪ್ಟೆಂಬರ್ 18 ರಂದು ನಡೆಯಲಿದೆ. 2020ರಲ್ಲಿ ಭಾರತದ ಡೆಲ್ಲಿ ಕ್ರೈಂ ಸರಣಿಯು ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಈ ಬಾರಿ ಭಾರತದ ಯಾವುದೇ ಸರಣಿ ಸ್ಪರ್ಧೆಯಲ್ಲಿಲ್ಲ. ಈ ಬಾರಿ ನೆಟ್ಫ್ಲಿಕ್ಸ್ ಹಾಗೂ ಎಚ್ಬಿಓನ ಹಲವು ಶೋಗಳು, ಡಾಕ್ಯುಮೆಂಟರಿಗಳು ನಾಮಿನೇಟ್ ಆಗಿವೆ. ಅಮೆಜಾನ್ ಪ್ರೈಂನ ಸರಣಿಗಳು ತೀರ ಕಡಿಮೆ ನಾಮಿನೇಟ್ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ