ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ದಿ ಆಡೆಸ್ಸಿ’ ಟ್ರೇಲರ್‌ಗೆ ಯೂಟ್ಯೂಬ್‌ನಲ್ಲಿ ಭಾರಿ ಹಿನ್ನಡೆ

ಕ್ರಿಸ್ಟೋಫರ್ ನೋಲನ್ ಅವರ ಸಿನಿಮಾಗೆ ಈ ರೀತಿ ಆಗುತ್ತದೆ ಎಂದು ಅಭಿಮಾನಿಗಳು ಊಹಿಸಿರಲಿಲ್ಲ. ಅವರು ನಿರ್ದೇಶನ ಮಾಡಿರುವ ‘ದಿ ಆಡೆಸ್ಸಿ’ ಸಿನಿಮಾದ ಟ್ರೇಲರ್ ನೋಡಿ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಟ್ರೇಲರ್​ಗೆ ಲೈಕ್ಸ್​ಗಿಂತ ಡಿಸ್‌ಲೈಕ್ಸ್ ಹೆಚ್ಚಳ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ದಿ ಆಡೆಸ್ಸಿ’ ಟ್ರೇಲರ್‌ಗೆ ಯೂಟ್ಯೂಬ್‌ನಲ್ಲಿ ಭಾರಿ ಹಿನ್ನಡೆ
The Odyssey Still
Image Credit source: Universal Pictures

Updated on: Jul 03, 2026 | 7:45 PM

ಮುಖ್ಯಾಂಶಗಳು

  • ಬಹುನಿರೀಕ್ಷಿತ ‘ದಿ ಆಡೆಸ್ಸಿ’ ಸಿನಿಮಾದ ಟ್ರೇಲರ್‌ ಈಗ ಚರ್ಚೆಯ ಕೇಂದ್ರಬಿಂದು ಆಗಿದೆ.
  • ಬಿಡುಗಡೆಗೂ ಮುನ್ನ ಟೀಕೆಗೆ ಒಳಗಾದ ಕ್ರಿಸ್ಟೋಫರ್ ನೋಲನ್ ಅವರ ಹೊಸ ಸಿನಿಮಾ.
  • ಟ್ರೇಲರ್ ನೋಡಿದ ಪ್ರೇಕ್ಷಕರಿಂದ ಭಾರಿ ಅಸಮಾಧಾನ. ಬರುತ್ತಿದೆ ಅತಿ ಹೆಚ್ಚು ಡಿಸ್​ಲೈಕ್.

ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರ ಬಹುನಿರೀಕ್ಷಿತ ಚಿತ್ರ ‘ದಿ ಆಡೆಸ್ಸಿ’ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಹೊಸ ಟ್ರೇಲರ್ ಯೂಟ್ಯೂಬ್‌ನಲ್ಲಿ ಭಾರಿ ಆಕ್ರೋಶಕ್ಕೆ ಈಡಾಗಿದೆ. ಪ್ರೇಕ್ಷಕರಿಂದ ನಿರೀಕ್ಷಿತ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುವಲ್ಲಿ ವಿಫಲವಾಗಿರುವ ‘ದಿ ಆಡೆಸ್ಸಿ’ (The Odyssey) ಟ್ರೇಲರ್‌ಗೆ ‘ಲೈಕ್ಸ್’ಗಿಂತ ‘ಡಿಸ್‌ಲೈಕ್’ಗಳೇ ಹೆಚ್ಚಾಗಿ ಬರುತ್ತಿವೆ. ಹೋಮರ್ ಬರೆದ ಪ್ರಾಚೀನ ಗ್ರೀಕ್ ಮಹಾಕಾವ್ಯವನ್ನು ಆಧರಿಸಿದ ಈ ಚಿತ್ರವು ಜುಲೈ 17ರಂದು ತೆರೆಗೆ ಬರಲಿದ್ದು, ಮ್ಯಾಟ್ ಡೇಮನ್, ಜೆಂಡಾಯಾ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿದೆ. ಸದ್ಯ ಈ ಚಿತ್ರದ ಹೊಸ ಟ್ರೇಲರ್ (The Odyssey Trailer) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹಿನ್ನಡೆಗೆ ಕಾರಣಗಳೇನು?

‘ದಿ ಆಡೆಸ್ಸಿ’ ಟ್ರೇಲರ್‌ನಲ್ಲಿ ಬಳಸಲಾಗಿರುವ ಆಧುನಿಕ ಶೈಲಿಯ ಸಂಭಾಷಣೆಗಳು ಮತ್ತು ಐತಿಹಾಸಿಕ ಹಿನ್ನೆಲೆಗೆ ಹೊಂದಿಕೆಯಾಗದ ಪಾತ್ರವರ್ಗದ ಆಯ್ಕೆಯನ್ನು ಪ್ರೇಕ್ಷಕರು ತೀವ್ರವಾಗಿ ಟೀಕಿಸುತ್ತಿದ್ದಾರೆ. ಪಾತ್ರಗಳು ಇಂದಿನ ಕಾಲದ ಭಾಷೆಯನ್ನು ಬಳಸುತ್ತಿರುವುದು ಕಥೆಯ ಗಾಂಭೀರ್ಯತೆಯನ್ನು ಹಾಳುಮಾಡಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

The Odyssey | Official Countdown Trailer

ಅಮೆರಿಕನ್ ಉಚ್ಚಾರಣೆಗೆ ತೀವ್ರ ವಿರೋಧ:

ಲೂಪಿಟಾ ಅವರನ್ನು ‘ಹೆಲೆನ್ ಆಫ್ ಟ್ರಾಯ್’ ಪಾತ್ರಕ್ಕೆ ಆಯ್ಕೆ ಮಾಡಿರುವುದೂ ಸೇರಿದಂತೆ ಚಿತ್ರದ ಪ್ರಮುಖ ಪಾತ್ರಗಳ ಆಯ್ಕೆಯ ಬಗ್ಗೆ ಆನ್‌ಲೈನ್‌ನಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಜೊತೆಗೆ, ಪಾತ್ರಧಾರಿಗಳು ಬಳಸಿದ ಅಮೆರಿಕನ್ ಉಚ್ಚಾರಣೆ ಮತ್ತು ಇಂದಿನ ಕಾಲದ ಶಬ್ದಗಳು ಸಿನಿಮಾದ ಪ್ರಾಚೀನ ಸೌಂದರ್ಯಕ್ಕೆ ಧಕ್ಕೆ ತಂದಿವೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಒಬ್ಬ ವೀಕ್ಷಕರಂತೂ, ‘ಇದು ಮಹಾಕಾವ್ಯದ ಕಥೆಯಂತೆ ಕಾಣುತ್ತಿಲ್ಲ, ಸ್ಟಾರ್‌ಬಕ್ಸ್ ಕಾಫಿ ಶಾಪ್‌ನ ಹೊರಗೆ ಕುಳಿತು ಮಾತನಾಡುತ್ತಿರುವಂತೆ ಭಾಸವಾಗುತ್ತಿದೆ’ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾದ ಟಿಕೆಟ್ ಬೆಲೆ 3 ಸಾವಿರ ರೂಪಾಯಿಗೂ ಅಧಿಕ

ನೋಲನ್ ವೃತ್ತಿಜೀವನದಲ್ಲೇ ಹೆಚ್ಚು ಡಿಸ್​ಲೈಕ್:

‘ಆಪನ್‌ಹೈಮರ್’ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಗೆದ್ದ ನಂತರ ನೋಲನ್ ಆಯ್ಕೆ ಮಾಡಿಕೊಂಡಿರುವ ‘ದಿ ಆಡೆಸ್ಸಿ’ ಸಿನಿಮಾದ ಕಥೆ ಇತಿಹಾಸಕ್ಕಿಂತ ಹೆಚ್ಚಾಗಿ ಪುರಾಣ ಮತ್ತು ದಂತಕಥೆಗಳ ಸುತ್ತ ಸುತ್ತುತ್ತದೆ. ಆದರೆ, ಚಿತ್ರದ ಬಿಡುಗಡೆಗೂ ಮುನ್ನವೇ ಇದು ಅವರ ವೃತ್ತಿಜೀವನದ ಅತ್ಯಂತ ವಿವಾದಾತ್ಮಕ ಚಿತ್ರವಾಗಿ ಮಾರ್ಪಟ್ಟಿದೆ. ಇದರ ನಡುವೆಯೂ, ತಂತ್ರಜ್ಞಾನ ಕಾರಣದಿಂದಾಗಿ ಇದು ಈ ದಶಕದ ಅತಿ ದೊಡ್ಡ ಹಿಟ್ ಚಿತ್ರವಾಗಲಿದೆ ಎಂದು ನೋಲನ್ ಅಭಿಮಾನಿಗಳು ನಂಬಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us