Oscar 2023: ಅಬ್ಬಬ್ಬಾ.. ಆಸ್ಕರ್ ವೇದಿಕೆ ಮೇಲೆ ಏಳು ಪ್ರಶಸ್ತಿ ಬಾಚಿಕೊಂಡ್ತು ಈ ಸಿನಿಮಾ

|

Updated on: Mar 13, 2023 | 1:13 PM

ಆಸ್ಕರ್ ಕಾರ್ಯಕ್ರಮದಲ್ಲಿ ‘ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​’ ಸಿನಿಮಾ ದಾಖಲೆ ಬರೆದಿದೆ. ಈ ಚಿತ್ರಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ಪ್ರಶಸ್ತಿಗಳು ಸಿಕ್ಕಿವೆ.

Oscar 2023: ಅಬ್ಬಬ್ಬಾ.. ಆಸ್ಕರ್ ವೇದಿಕೆ ಮೇಲೆ ಏಳು ಪ್ರಶಸ್ತಿ ಬಾಚಿಕೊಂಡ್ತು ಈ ಸಿನಿಮಾ
‘ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​’ ಸಿನಿಮಾ ಪೋಸ್ಟರ್
Follow us on

ಅಮೆರಿಕದ ಲಾಸ್ ಏಂಜಲಿಸ್​ನಲ್ಲಿ ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆದಿದೆ. ವಿಶ್ವದ ವಿವಿಧ ಚಿತ್ರರಂಗದವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ‘ಆರ್​ಆರ್​ಆರ್​’ ಚಿತ್ರದ (RRR Movie) ನಿರ್ದೇಶಕ ರಾಜಮೌಳಿ, ಜೂನಿಯರ್ ಎನ್​ಟಿಆರ್​ ಹಾಗೂ ರಾಮ್ ಚರಣ್ ಈ ಕಾರ್ಯಕ್ರಮದಲ್ಲಿ ಹಾಜರಿ ಹಾಕಿದ್ದರು. ‘ನಾಟು ನಾಟು..’ ಹಾಡು ಈ ವೇದಿಕೆ ಮೇಲೆ ಅವಾರ್ಡ್ ಗೆದ್ದಿದೆ. ಈ ಪ್ರಶಸ್ತಿಯಿಂದ ಭಾರತದ ಹಿರಿಮೆ ಹೆಚ್ಚಾಗಿದೆ. ಆಸ್ಕರ್ ಕಾರ್ಯಕ್ರಮದಲ್ಲಿ ‘ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​’ ಸಿನಿಮಾ (Everything Everywhere All at Once) ದಾಖಲೆ ಬರೆದಿದೆ. ಈ ಚಿತ್ರಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ಪ್ರಶಸ್ತಿಗಳು ಸಿಕ್ಕಿವೆ. ವಿವಿಧ ವಿಭಾಗಗಳಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.

ಕಳೆದ ವರ್ಷ ರಿಲೀಸ್ ಆಗಿದ್ದ ಸಿನಿಮಾ

‘ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​’ ಸಿನಿಮಾ ಹಾಲಿವುಡ್​ನಲ್ಲಿ ಸಿದ್ಧಗೊಂಡಿದೆ. ಇಂಗ್ಲಿಷ್ ಸೇರಿ ಮೂರು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಕಳೆದ ಮಾರ್ಚ್​ 23ರಂದು ಅಮೆರಿಕದಲ್ಲಿ ರಿಲೀಸ್ ಆಯಿತು. ಭಾರತದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆ ಆಯಿತು.

ಇಬ್ಬರು ನಿರ್ದೇಶಕರು

‘ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​’ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್​ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಿಂದ ಅವರಿಗೆ ಜನಪ್ರಿಯತೆ ಸಿಕ್ಕಿದೆ.

ಈ ಚಿತ್ರಕ್ಕೆ ಸಿಕ್ಕ ಪ್ರಶಸ್ತಿಗಳು

‘ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​’ ಚಿತ್ರಗಳು ಬರೋಬ್ಬರಿ ಏಳು ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟಿ (ಮಿಶೆಲ್ ಯೋ), ಅತ್ಯುತ್ತಮ ಪೋಷಕ ನಟ (ಕಿ ಹು ಕ್ವಾನ್), ಅತ್ಯುತ್ತಮ ಪೋಷಕ ನಟಿ (ಜೇಮಿ ಲೀ ಕರ್ಟಿಸ್), ಅತ್ಯುತ್ತಮ ಸಂಕಲನ (ಪೌಲ್ ರೋಜರ್ಸ್), ಅತ್ಯುತ್ತಮ ಮೂಲ ಚಿತ್ರಕಥೆ ಪ್ರಶಸ್ತಿಗಳು ಸಿಕ್ಕಿವೆ.

ಸ್ಲಮ್ ಡಾಗ್ ಮಿಲಿಯನೇರ್​ಗೆ 8 ಅವಾರ್ಡ್​

2009ರಲ್ಲಿ ‘ಸ್ಲಮ್ ಡಾಗ್ ಮಿಲಿಯನೇರ್​’ ಸಿನಿಮಾ ಬರೋಬ್ಬರಿ ಎಂಟು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ ಮೊದಲಾದ ವಿಭಾಗಗಳಲ್ಲಿ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿತ್ತು.

ಇದನ್ನೂ ಓದಿ: RRR Movie: ‘ಆರ್​ಆರ್​ಆರ್​’ ಆಸ್ಕರ್ ಗೆದ್ದ ಬಳಿಕ ಹೇಗಿತ್ತು ನೋಡಿ ಇಡೀ ತಂಡದ ಸಂಭ್ರಮ

ಭಾರತಕ್ಕೆ ಎರಡು ಅವಾರ್ಡ್

‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ‘ಅತ್ಯುತ್ತಮ ಒರಿಜಿನಲ್ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಪಡೆಯಿತು. ‘ದಿ ಎಲಿಫೆಂಟ್ ವಿಸ್ಪರರ್ಸ್​’ಗೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್​ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ನಮ್ಮ ದೇಶಕ್ಕೆ ಈ ಬಾರಿ ಎರಡು ಆಸ್ಕರ್ ಅವಾರ್ಡ್​ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ