Google Doodle: ಅಲೆನ್ ರಿಕ್ಮ್ಯಾನ್ಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಕೆ; ನಟನ ಸಾಧನೆ ಬಗ್ಗೆ ಇಲ್ಲಿದೆ ಮಾಹಿತಿ
Alan Rickman: 25ಕ್ಕೂ ಅಧಿಕ ನಾಟಕಗಳಲ್ಲಿ ಅಲೆನ್ ರಿಕ್ಮ್ಯಾನ್ ಅವರು ನಟಿಸಿದ್ದರು. ಸಿನಿಮಾ ಮತ್ತು ಕಿರುತೆರೆಗೂ ಅವರು ನೀಡಿದ ಕೊಡುಗೆ ಅಪಾರ.
ಸಿನಿಮಾದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಪ್ರೇಕ್ಷಕರು ಎಂದಿಗೂ ಮರೆಯುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ಸಾಧ್ಯವಾದ ಎಲ್ಲ ರೀತಿಯಲ್ಲೂ ಗೌರವ ಸಲ್ಲಿಸಲಾಗುತ್ತದೆ. ನಟ-ನಟಿಯರ ನಿಧನದ ಬಳಿಕವೂ ಅವರಿಗೆ ಗೌರವ ಸಲ್ಲಿಕೆ ಆಗುತ್ತದೆ. ಗೂಗಲ್ ಡೂಡಲ್ (Google Doodle) ಮೂಲಕವೂ ಅನೇಕ ಕಲಾವಿದರನ್ನು ಸ್ಮರಿಸಿಕೊಳ್ಳಲಾಗುತ್ತದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಇಂದಿನ (ಏಪ್ರಿಲ್ 30) ಗೂಗಲ್ ಡೂಡಲ್. ಹಾಲಿವುಡ್ನ (Hollywood) ಖ್ಯಾತ ನಟ ಅಲೆನ್ ರಿಕ್ಮ್ಯಾನ್ ಅವರಿಗೆ ಗೂಗಲ್ ನಮನ ಸಲ್ಲಿಸಿದೆ. ಅವರು ರಂಗಭೂಮಿಯಲ್ಲಿ ಮಾಡಿದ ಫೇಮಸ್ ಪಾತ್ರವನ್ನು ಈಗ ಸ್ಮರಿಸಿಕೊಳ್ಳಲಾಗಿದೆ. ಅಭಿಮಾನಿಗಳಿಗೆ ಇದು ಖುಷಿ ನೀಡಿದೆ. ಅಲೆನ್ ರಿಕ್ಮ್ಯಾನ್ (Alan Rickman) ನಿಧನರಾಗಿ ಹಲವು ವರ್ಷ ಕಳೆದಿದೆ. ಆದರೂ ಅಭಿಮಾನಿಗಳ ಮನದಲ್ಲಿ ಅವರ ನೆನಪು ಹಸಿರಾಗಿದೆ.
ಇಂಗ್ಲಿಷ್ನ ಹಲವು ಸಿನಿಮಾಗಳಲ್ಲಿ ಅಲೆನ್ ರಿಕ್ಮ್ಯಾನ್ ನಟಿಸಿದ್ದಾರೆ. ಅನೇಕ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಆದರೆ ಅದಕ್ಕೂ ಮುನ್ನ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ರಂಗಭೂಮಿ. ಹಲವು ನಾಟಕಗಳಲ್ಲಿ ಅಭಿನಯಿಸುವ ಮೂಲಕ ಅವರು ಮನೆಮಾತಾಗಿದ್ದರು. 1985ರಲ್ಲಿ ಪ್ರದರ್ಶನ ಕಂಡ ‘ಡೇಂಜರಸ್ ಲಿಯೇಸಾನ್’ ನಾಟಕದಲ್ಲಿ ಅಲೆಕ್ ರಿಕ್ಮ್ಯಾನ್ ಮಾಡಿದ Le Vicomte de Valmont ಪಾತ್ರ ತುಂಬ ಫೇಮಸ್ ಆಗಿತ್ತು. ಅವರು ಆ ಪಾತ್ರ ಮಾಡಿ ಇಂದಿಗೆ 36 ವರ್ಷ ಕಳೆದಿದೆ. ಆ ಪ್ರಯುಕ್ತ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.
ಇದನ್ನೂ ಓದಿ: PK Rosy: ನಟಿ ಪಿಕೆ ರೋಸಿಗೆ ಗೂಗಲ್ ಡೂಡಲ್ ಗೌರವ; ಇವರು ಮಾಡಿದ ಸಾಧನೆಗಳೇನು?
25ಕ್ಕೂ ಅಧಿಕ ನಾಟಕಗಳಲ್ಲಿ ಅಲೆನ್ ರಿಕ್ಮ್ಯಾನ್ ಅವರು ನಟಿಸಿದ್ದರು. ಸಿನಿಮಾ ಮತ್ತು ಕಿರುತೆರೆಗೂ ಅವರು ನೀಡಿದ ಕೊಡುಗೆ ಅಪಾರ. ‘ಡೈ ಹಾರ್ಡ್’ ಮತ್ತು ‘ಹ್ಯಾರಿ ಪಾಟರ್’ ಸರಣಿಯ ಸಿನಿಮಾಗಳಲ್ಲಿ ಅವರು ಮಾಡಿದ ಪಾತ್ರವನ್ನು ಫ್ಯಾನ್ಸ್ ಮರೆಯಲು ಸಾಧ್ಯವಿಲ್ಲ. ಅಲೆನ್ ರಿಕ್ಮ್ಯಾನ್ ಅವರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.
ಇದನ್ನೂ ಓದಿ: ಕಲರ್ಫುಲ್ ಹೂವುಗಳ ಡೂಡಲ್ ಮೂಲಕ ಪರ್ಷಿಯನ್ ಹೊಸ ವರ್ಷ ಆಚರಿಸಿದ ಗೂಗಲ್
ತಮ್ಮ ಕಂಠದ ಮೂಲಕವೂ ಅಲೆನ್ ರಿಕ್ಮ್ಯಾನ್ ಅವರು ಜನರ ಗಮನ ಸೆಳೆದಿದ್ದರು. ಲಂಡನ್ನ ‘ರಾಯಲ್ ಅಕಾಡೆಮಿ ಆಫ್ ಡ್ರಮ್ಯಾಟಿಕ್ ಆರ್ಟ್’ ಮೂಲಕ ಅವರು ತರಬೇತಿ ಪಡೆದಿದ್ದರು. ಅವರು ಚಿತ್ರ ಕಲಾವಿದ ಕೂಡ ಆಗಿದ್ದರು. ‘ರಾಯಲ್ ಶೇಕ್ಸ್ಪಿಯರ್ ಕಂಪನಿ’ ಸೇರಿಕೊಂಡ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಪ್ರತಿಷ್ಠಿತ ಟೋನಿ ಅವಾರ್ಡ್ಸ್ಗೆ ನಾಮನಿರ್ದೇಶಗೊಂಡ ಬಳಿಕ ಸಿನಿಮಾಗಳಲ್ಲಿ ನಟಿಸಲು ಅವರಿಗೆ ಅವಕಾಶ ಸಿಕ್ಕಿತು.
ನಟನೆಯ ಜೊತೆಯಲ್ಲಿ ನಿರ್ದೇಶನದಲ್ಲೂ ಅಲೆನ್ ರಿಕ್ಮ್ಯಾನ್ ಅವರು ಆಸಕ್ತಿ ಹೊಂದಿದ್ದರು. ಮೂರು ನಾಟಕ ಮತ್ತು ಎರಡು ಸಿನಿಮಾವನ್ನು ಅವರು ನಿರ್ದೇಶಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Sun, 30 April 23