PK Rosy: ನಟಿ ಪಿಕೆ ರೋಸಿಗೆ ಗೂಗಲ್ ಡೂಡಲ್ ಗೌರವ; ಇವರು ಮಾಡಿದ ಸಾಧನೆಗಳೇನು?
Google Doodle Today: 1903, ಫೆಬ್ರವರಿ 10ರಂದು ರೋಸಿ ಅವರು ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಅವರ ಮೂಲ ಹೆಸರು ರಾಜಮ್ಮ. ಸಿನಿಮಾಗಾಗಿ ಅವರು ತಮ್ಮ ಹೆಸರನ್ನು ರೋಸಿ ಎಂದು ಬದಲಾಯಿಸಿಕೊಂಡರು.
ಮಲಯಾಳಂನ ಖ್ಯಾತ ನಟಿ ಪಿಕೆ ರೋಸಿ (PK Rosy) ಅವರ 120ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಡೂಡಲ್ (Google Doodle) ಮೂಲಕ ಗೂಗಲ್ ಗೌರವ ಸಲ್ಲಿಕೆ ಮಾಡಿದೆ. ಮಲಯಾಳಂ ಚಿತ್ರರಂಗದಲ್ಲಿ ಮೊದಲ ಹೀರೋಯಿನ್ ಎನ್ನುವ ಖ್ಯಾತಿ ಅವರಿಗೆ ಸಲ್ಲಿಕೆ ಆಗುತ್ತದೆ. ಅವರು ಮಾಡಿದ ಪಾತ್ರ ಕ್ರಾಂತಿಕಾರಿಯಾಗಿತ್ತು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಅವರ ವೃತ್ತಿಬದುಕು ಆರಂಭದಲ್ಲೇ ಕೊನೆಗೊಂಡಿತು.
1903, ಫೆಬ್ರವರಿ 10ರಂದು ರೋಸಿ ಅವರು ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಅವರ ಮೂಲ ಹೆಸರು ರಾಜಮ್ಮ. ಸಿನಿಮಾಗಾಗಿ ಅವರು ತಮ್ಮ ಹೆಸರನ್ನು ರೋಸಿ ಎಂದು ಬದಲಾಯಿಸಿಕೊಂಡರು. ಚಿಕ್ಕ ವಯಸ್ಸಿನಲ್ಲೇ ರೋಸಿ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ‘ವಿಗಥಕುಮಾರನ್’ ಅವರು ನಟಿಸಿದ ಮೊದಲ ಸಿನಿಮಾ. ಜೆಸಿ ಡ್ಯಾನಿಯಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು.
ಈ ಚಿತ್ರದಲ್ಲಿ ರೋಸಿ ಅವರು ಸರೋಜಿನಿ ನಾಯರ್ ಆಗಿ ಕಾಣಿಸಿಕೊಂಡಿದ್ದರು. ದಲಿತ ಮಹಿಳೆ ನಾಯರ್ ಪಾತ್ರ ಮಾಡಿದ್ದಕ್ಕೆ ಆ ಸಮುದಾಯದವರು ಸಿಟ್ಟಿಗೆದ್ದಿದ್ದರು. ಈ ಸಂಬಂಧ ಪ್ರತಿಭಟನೆಗಳು ನಡೆದವು. ರೋಸಿ ಮನೆಯನ್ನು ಸುಡಲಾಯಿತು. ಈ ಕಾರಣದಿಂದ ರೋಸಿ ಅವರು ಕೇರಳ ಬಿಟ್ಟು ಓಡಿ ಹೋಗಬೇಕಾಯಿತು. ರಸ್ತೆಯಲ್ಲಿ ಸಿಕ್ಕ ಟ್ರಕ್ ಏರಿ ಅವರು ತಮಿಳುನಾಡಿಗೆ ಹೊರಟರು. ನಂತರ ಅದೇ ಲಾರಿ ಡ್ರೈವರ್ನ ಅವರು ಮದುವೆ ಆದರು.
‘ಸಮಾಜದ ಅನೇಕ ವಿಭಾಗಗಳಲ್ಲಿ, ವಿಶೇಷವಾಗಿ ಮಹಿಳೆಯರಿಗೆ ಕಲೆಯಲ್ಲಿ ಅವಕಾಶಗಳು ಸಿಗುತ್ತಿರಲಿಲ್ಲ. ಆದರೆ, ರೋಸಿ ಅವರು ತಮ್ಮ ಪಾತ್ರದ ಮೂಲಕ ಅಡೆತಡೆಗಳನ್ನು ಮುರಿದರು. ಅವರ ಕೆಲಸಕ್ಕೆ ಮನ್ನಣೆ ಸಿಗಲೇ ಇಲ್ಲ. ಅವರ ಕಥೆ ಅನೇಕರಿಗೆ ಪ್ರೇರಣೆ ಮತ್ತು ಸ್ಫೂರ್ತಿ’ ಎಂದು ಗೂಗಲ್ ಹೇಳಿದೆ.
ಇದನ್ನೂ ಓದಿ: ‘ನಾನು ಒಪ್ಪಿಕೊಂಡ ಕಾರ್ಯಕ್ರಮ ತಪ್ಪಿಸಿದವನಲ್ಲ’; ವಾಲ್ಮೀಕಿ ಜಾತ್ರೆಗೆ ಗೈರಾದ ಬಗ್ಗೆ ಸುದೀಪ್ ಸ್ಪಷ್ಟನೆ
ಗೂಗಲ್ ಡೂಡಲ್ನಲ್ಲಿ ರೋಸಿ ಅವರ ಫೋಟೋ ಇದೆ. ಅವರ ಹಿಂದೆ ಸಿನಿಮಾ ರೀಲ್ ಇದೆ. ಅವರ ಸುತ್ತಲೂ ಗುಲಾಬಿ ಹೂಗಳು ಇವೆ. ಈ ಡೂಡಲ್ನಿಂದ ಅನೇಕರಿಗೆ ನಟಿಯ ಸಾಧನೆ ಬಗ್ಗೆ ತಿಳಿದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ