‘ಮಿಷನ್ ಇಂಪಾಸಿಬಲ್’ ಬಿಡುಗಡೆ ದಿನಾಂಕ ಪ್ರಕಟ: ‘ನಮ್ಮಲ್ಲೆ ಮೊದಲು’

Mission Impossible: ವಿಶ್ವದ ಟಾಪ್ ಆಕ್ಷನ್ ಸಿನಿಮಾ ಸರಣಿಗಳಲ್ಲಿ ಮಿಷನ್ ಇಂಪಾಸಿಬಲ್​ಗೆ ಅಗ್ರ ಸ್ಥಾನ. ಮಿಷನ್ ಇಂಪಾಸಿಬಲ್ ಸರಣಿಯ ಎಂಟನೇ ಸಿನಿಮಾ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಬಿಡುಗಡೆ ದಿನಾಂಕವನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಭಾರತದ ಸಿನಿಮಾ ಪ್ರೇಮಿಗಳು ಟಾಮ್ ಕ್ರೂಸ್​ಗೆ ಧನ್ಯವಾದ ಹೇಳುತ್ತಿದ್ದಾರೆ. ಕಾರಣ ಏನು?

‘ಮಿಷನ್ ಇಂಪಾಸಿಬಲ್’ ಬಿಡುಗಡೆ ದಿನಾಂಕ ಪ್ರಕಟ: ‘ನಮ್ಮಲ್ಲೆ ಮೊದಲು’
Mission

Updated on: Apr 25, 2025 | 7:18 PM

ವಿಶ್ವದ ಬಲು ಜನಪ್ರಿಯ ಆಕ್ಷನ್ ಸಿನಿಮಾ ಸರಣಿಗಳಲ್ಲಿ ಒಂದೆನಿಸಿಕೊಂಡಿರುವ ‘ಮಿಷನ್ ಇಂಪಾಸಿಬಲ್’ ಸಿನಿಮಾ ಸರಣಿಯ ಎಂಟನೇ ಸಿನಿಮಾ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಶ್ವದ ಅತ್ಯಂತ ದುಬಾರಿ ನಟ ಟಾಮ್ ಕ್ರೂಸ್ ನಟಿಸಿರುವ ಈ ಸಿನಿಮಾ ವಿಶ್ವದಲ್ಲಿಯೇ ಮೊದಲು ಭಾರತದಲ್ಲಿಯೇ ಬಿಡುಗಡೆ ಆಗಲಿರುವುದು ವಿಶೇಷ. ಈ ಮೂಲಕ ಟಾಮ್ ಕ್ರೂಸ್ ಭಾರತದ ಸಿನಿಮಾ ಪ್ರೇಮಿಗಳಿಗೆ ವಿಶೇಷ ಉಡುಗೊರೆ ಕೊಟ್ಟಂತಾಗಿದೆ.

‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ವಿಶ್ವದಾದ್ಯಂತ ಮೇ 23ಕ್ಕೆ ಬಿಡುಗಡೆ ಆಗಲಿದೆ. ಆದರೆ ಭಾರತದಲ್ಲಿ ಒಂದು ವಾರ ಮುಂಚೆ ಅಂದರೆ ಮೇ 17ಕ್ಕೆ ತೆರೆಗೆ ಬರಲಿದೆ. ಮತ್ತೊಂದು ವಿಶೇಷವೆಂದರೆ ಇಂಗ್ಲೀಷ್ ಮಾತ್ರವೇ ಅಲ್ಲದೆ ಪ್ರಾದೇಶಿಕ ಭಾಷೆಗಳಲ್ಲಿಯೂ ಏಕಕಾಲದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ, ಇಂಗ್ಲೀಷ್, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೇ 17ರಂದೇ ತೆರೆಗೆ ಬರಲಿದೆ. ಈ ಸಿನಿಮಾದ ಮೊದಲ ಭಾಗ ‘ಮಿಷನ್ ಇಂಪಾಸಿಬಲ್: ಡೆಡ್ ರಕೂನ್’ 2023ರ ಜುಲೈ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಒಂದು ಬೀಗದ ಹಿಂದೆ ಬಿದ್ದ ಮಾಫಿಯಾ ಗುಂಪನ್ನು ನಾಯಕ ಟಾಮ್ ಕ್ರೂಸ್ ತಡೆಯುವ ಕತೆಯನ್ನು ಆ ಸಿನಿಮಾ ಒಳಗೊಂಡಿತ್ತು. ಸಿನಿಮಾದ ಅಂತ್ಯದಲ್ಲಿ ಆ ಬೀಗ ಟಾಮ್ ಕ್ರೂಸ್ ಕೈ ಸೇರಿತ್ತು. ಇದೀಗ ಅದೇ ಕತೆಯ ಮುಂದುವರೆದ ಭಾಗ ಬರಲಿದೆ.

ಇದನ್ನೂ ಓದಿ:ಮತ್ತೆ ಹಾಲಿವುಡ್​ಗೆ ಹಾರಲಿರುವ ನಟಿ ಆಲಿಯಾ ಭಟ್, ಸಿನಿಮಾ ಯಾವುದು?

‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ, ಮಿಷನ್ ಇಂಪಾಸಿಬಲ್ ಸರಣಿಯ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾ ಅನ್ನು ಕ್ರಿಸ್ಟೊಫರ್ ಮೆಕ್ವೈರ್ ನಿರ್ದೇಶನ ಮಾಡಿದ್ದಾರೆ. ಇದು ಅವರು ನಿರ್ದೇಶಿಸುತ್ತಿರುವ ಮೂರನೇ ‘ಮಿಷನ್ ಇಂಪಾಸಿಬಲ್’ ಸಿನಿಮಾ. ಈ ಸಿನಿಮಾಕ್ಕೆ ಸುಮಾರು 500 ಕೋಟಿ ಹಣ ಖರ್ಚು ಮಾಡಲಾಗಿದೆ. ಇದು ಕೊನೆಯ ಸಿನಿಮಾ ಆಗಿದ್ದು ಟಾಮ್ ಕ್ರೂಸ್ ನಿರ್ವಹಿಸುತ್ತಿರುವ ಈತನ್ ಹಂಟ್ ಪಾತ್ರ ಈ ಸಿನಿಮಾದ ಅಂತ್ಯದಲ್ಲಿ ಸಾಯಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಏನೇ ಆಗಲಿ, ಭಾರತದಲ್ಲಿ ಈ ಸಿನಿಮಾ ಮೊದಲು ಬಿಡುಗಡೆ ಮಾಡುತ್ತಿರುವುದಕ್ಕೆ ಟಾಮ್ ಕ್ರೂಸ್​ಗೆ ಭಾರತದ ಸಿನಿಮಾ ಪ್ರೇಮಿಗಳು ಧನ್ಯವಾದ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Fri, 25 April 25