Christopher Nolan: ಸೈನ್ಸ್​ ಫಿಕ್ಷನ್​ ಸಿನಿಮಾ ಮಾಡಿದ್ರೂ ಸ್ಮಾರ್ಟ್​ಫೋನ್​ ಬಳಸಲ್ಲ, ಇ-ಮೇಲ್​ ಮಾಡಲ್ಲ; ಕ್ರಿಸ್ಟೋಫರ್ ನೋಲನ್​ ಬಗ್ಗೆ ಅಚ್ಚರಿಯ ಮಾಹಿತಿ

|

Updated on: Jul 16, 2023 | 11:49 AM

Oppenheimer Movie: ಕ್ರಿಸ್ಟೋಫರ್ ನೋಲನ್​ ನಿರ್ದೇಶನದ ‘ಆಪನ್​ಹೈಮರ್​’ ಚಿತ್ರ ಜುಲೈ 21ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Christopher Nolan: ಸೈನ್ಸ್​ ಫಿಕ್ಷನ್​ ಸಿನಿಮಾ ಮಾಡಿದ್ರೂ ಸ್ಮಾರ್ಟ್​ಫೋನ್​ ಬಳಸಲ್ಲ, ಇ-ಮೇಲ್​ ಮಾಡಲ್ಲ; ಕ್ರಿಸ್ಟೋಫರ್ ನೋಲನ್​ ಬಗ್ಗೆ ಅಚ್ಚರಿಯ ಮಾಹಿತಿ
ಕ್ರಿಸ್ಟೋಫರ್ ನೋಲನ್​
Follow us on

ನಿರ್ದೇಶಕ ಕ್ರಿಸ್ಟೋಫರ್ ನೋಲನ್​ (Christopher Nolan) ಅವರು ಜಾಗತಿಕ ಸಿನಿಮಾದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಲಿವುಡ್​ನಲ್ಲಿ ಒಂದಕ್ಕಿಂತ ಒಂದು ಡಿಫರೆಂಟ್​ ಸಿನಿಮಾಗಳನ್ನು ನೀಡಿ ಅವರು ಸೈ ಎನಿಸಿಕೊಂಡಿದ್ದಾರೆ. ಪ್ರಪಂಚದಲ್ಲಿ ಅನೇಕ ಯುವ ನಿರ್ದೇಶಕರು ಕ್ರಿಸ್ಟೋಫರ್ ನೋಲನ್​ ಅವರನ್ನು ಸ್ಫೂರ್ತಿಯಾಗಿ ಇಟ್ಟುಕೊಂಡಿದ್ದಾರೆ. ‘ಇಂಟರ್​ಸ್ಟೆಲ್ಲರ್​’, ‘ಇನ್ಸೆಪ್ಷನ್​’, ‘ಟೆನೆಟ್​’ ಮುಂತಾದ ಸೈನ್ಸ್​ ಫಿಕ್ಷನ್​ ಸಿನಿಮಾಗಳನ್ನು ಮಾಡಿದ ಕ್ರಿಸ್ಟೋಫರ್ ನೋಲನ್​ ಅವರು ಸ್ಪಾರ್ಟ್​ಫೋನ್​ (Smartphone) ಬಳಸುವುದಿಲ್ಲ. ಅಷ್ಟೇ ಅಲ್ಲದೇ ಅವರು ಇ-ಮೇಲ್​ ಕೂಡ ಮಾಡುವುದಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅವರೇ ವಿವರಿಸಿದ್ದಾರೆ. ಕ್ರಿಸ್ಟೋಫರ್ ನೋಲನ್​ ನಿರ್ದೇಶನ ಮಾಡಿರುವ ‘ಆಪನ್​ಹೈಮರ್​’ (Oppenheimer) ಸಿನಿಮಾ ಜುಲೈ 21ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ‘ಹಾಲಿವುಡ್​ ರಿಪೋರ್ಟರ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಯಾವುದೇ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು ಎಂಬುದು ಕ್ರಿಸ್ಟೋಫರ್ ನೋಲನ್​ ಅವರ ಉದ್ದೇಶ. ಒಂದು ವೇಳೆ ಸ್ಮಾರ್ಟ್​ಫೋನ್​ ಬಳಸಿದರೆ ಅದರಿಂದ ಗಮನ ಬೇರೆ ಕಡೆಗೆ ಹೋಗುತ್ತದೆ. ಆ ಕಾರಣದಿಂದ ಅವರು ಸ್ಮಾರ್ಟ್​ಫೋನ್ ಬಳಕೆಯಿಂದ ದೂರ ಉಳಿದುಕೊಂಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ಆಗಿದೆ. ಕೆಲಸದ ಬಗ್ಗೆ ಕ್ರಿಸ್ಟೋಫರ್ ನೋಲನ್​ ತೋರಿಸುವ ಬದ್ಧತೆ ಬಗ್ಗೆ ತಿಳಿದು ಎಲ್ಲರೂ ವಾವ್​ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಮಹಾ ಮುಷ್ಕರಕ್ಕೆ ತತ್ತರಿಸಿದ ಹಾಲಿವುಡ್​; ಬಿಗ್ ಬಜೆಟ್ ಚಿತ್ರದ ನಿರ್ಮಾಪಕರಿಗೆ ಆತಂಕ

ಇತಿಹಾಸಕ್ಕೆ ಸಂಬಂಧಿಸಿದ ‘ಡಂಕಿರ್ಕ್​’, ‘ಆಪರ್​ಹೈಮರ್​’ ಸಿನಿಮಾಗಳನ್ನು ಕ್ರಿಸ್ಟೋಫರ್ ನೋಲನ್​ ನಿರ್ದೇಶನ ಮಾಡಿದ್ದಾರೆ. ಅದೇ ರೀತಿ ಸೈನ್ಸ್​ ಫಿಕ್ಷನ್​ ಸಿನಿಮಾಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಂಥ ಸಿನಿಮಾಗಳ ಸ್ಕ್ರಿಪ್ಟ್​ ಬರೆಯುವಾಗ ಇಂಟರ್​ನೆಟ್​ನಲ್ಲಿ ಹಲವಾರು ಮಾಹಿತಿಗಳನ್ನು ಆಗಾಗ ಪಡೆಯಬೇಕಾಗುತ್ತದೆ. ಆದರೆ ಅಚ್ಚರಿಯ ವಿಚಾರ ಏನೆಂದರೆ, ಕ್ರಿಸ್ಟೋಫರ್ ನೋಲನ್​ ಅವರು ಇಂಟರ್​ನೆಟ್​ ಕನೆಕ್ಷನ್​ ಇಲ್ಲದ ಕಂಪ್ಯೂಟರ್​ನಲ್ಲಿ ಸ್ಕ್ರಿಪ್ಟ್​ ಬರೆಯುತ್ತಾರೆ. ಗಮನ ಬೇರೆ ಕಡೆಗೆ ಹೋಗಬಾರದು ಎಂಬುದೇ ಅವರ ಉದ್ದೇಶ.

ಇದನ್ನೂ ಓದಿ: ಹಾಲಿವುಡ್​ನಲ್ಲೂ ನೆಪೋಟಿಸಂ; ಮಗನಿಗೆ ಅವಕಾಶ ನೀಡಿದ್ದನ್ನು ಸಮರ್ಥಿಸಿಕೊಂಡ ಟಾಮ್​ ಹ್ಯಾಂಕ್ಸ್​

‘ನನ್ನನ್ನು ಆಧುನಿಕ ತಂತ್ರಜ್ಞಾನದ ಬಳಕೆಗೆ ಹಿಂದೇಟು ಹಾಕುವ ವ್ಯಕ್ತಿ ಅಂತ ನನ್ನ ಮಕ್ಕಳು ಕರೆಯಬಹುದು’ ಎಂದು ಕೂಡ ಕ್ರಿಸ್ಟೋಫರ್ ನೋಲನ್​ ಹೇಳಿದ್ದಾರೆ. 1998ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಾಗೂ ಬರಹಗಾರನಾಗಿ ಅವರು ಫೇಮಸ್​ ಆಗಿದ್ದಾರೆ. ಕ್ರಿಸ್ಟೋಫರ್ ನೋಲನ್​ ನಿರ್ದೇಶಿಸಿರುವ ‘ಆಪರ್​ಹೈಮರ್​’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ. ಅಣು ಬಾಂಬ್​ ಕಂಡುಹಿಡಿದ ಜೆ. ರಾಬರ್ಟ್​ ಆಪರ್​ಹೈಮರ್​ ಅವರ ಜೀವನವನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.