ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ ಎಂದು ಒಂದು ವರ್ಗದ ಮಂದಿ ಬೊಬ್ಬೆ ಹೊಡೆದುಕೊಳ್ಳುತ್ತಾರೆ. ಆದರೆ ಕೆಲವು ಸಿನಿಮಾಗಳಿಗೆ ಹೌಸ್ಫುಲ್ ಪ್ರದರ್ಶನ ಆಗುತ್ತದೆ. ಕಂಟೆಂಟ್ ಮತ್ತು ಮೇಕಿಂಗ್ ಚೆನ್ನಾಗಿ ಇದ್ದರೆ ಖಂಡಿತವಾಗಿಯೂ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ, ‘ಆಪನ್ಹೈಮರ್’ (Oppenheimer) ಸಿನಿಮಾ. ಹಾಲಿವುಡ್ನ ಈ ಚಿತ್ರದ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ಜನರು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ. ಕ್ರಿಸ್ಟೋಫರ್ ನೋಲನ್ (Christopher Nolan) ನಿರ್ದೇಶನ ಮಾಡಿರುವ ಈ ಸಿನಿಮಾ ಜುಲೈ 21ರಂದು ರಿಲೀಸ್ ಆಗಲಿದೆ. ಕೆಲವು ಕಡೆಗಳಲ್ಲಿ ಟಿಕೆಟ್ ಬೆಲೆ ದುಬಾರಿ ಆಗಿದೆ. 2 ಸಾವಿರ ರೂಪಾಯಿ ಬೆಲೆಯ ಟಿಕೆಟ್ಗಳನ್ನು ಕೂಡ ಜನರು ಬೆಂಗಳೂರಿನಲ್ಲಿ ಖರೀದಿಸಿದ್ದಾರೆ.
ತಮ್ಮ ಪ್ರತಿ ಸಿನಿಮಾದಲ್ಲೂ ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ ಅವರು ಅಭಿಮಾನಿಗಳಿಗೆ ಹೊಸತನ ನೀಡುತ್ತಾರೆ. ಮೇಕಿಂಗ್ ವಿಚಾರದಲ್ಲಿ ಅವರು ಎಂದಿಗೂ ಕಾಂಪ್ರಮೈಸ್ ಆಗುವುದಿಲ್ಲ. ಗಂಭೀರವಾದ ವಿಚಾರಗಳನ್ನು ಇಟ್ಟುಕೊಂಡು ಅವರು ಸಿನಿಮಾ ಮಾಡುತ್ತಾರೆ. ಹಾಗಾಗಿ ಕ್ರಿಸ್ಟೋಫರ್ ನೋಲನ್ ನಿರ್ದೇಶನ ಮಾಡಿರುವ ‘ಆಪನ್ಹೈಮರ್’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಈ ಚಿತ್ರದಲ್ಲಿ ಐತಿಹಾಸಿಕ ಕಥೆ ಇದೆ. ಆಟಂ ಬಾಂಬ್ ಕಂಡುಹಿಡಿದ ಜೆ. ರಾಬರ್ಟ್ ಆಪನ್ಹೈಮರ್ ಅವರ ಜೀವನದ ವಿವರಗಳನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ.
‘ಆಪನ್ಹೈಮರ್’ ಸಿನಿಮಾದಲ್ಲಿ ಕಿಲಿಯನ್ ಮರ್ಫಿ, ರಾಬರ್ಟ್ ಡೌನಿ ಜೂನಿಯರ್, ಎಮಿಲಿ ಬ್ಲಂಟ್, ಮ್ಯಾಟ್ ಡೇಮನ್ ಮುಂತಾದವರು ನಟಿಸಿದ್ದಾರೆ. ಜೆ. ರಾಬರ್ಟ್ ಆಪನ್ಹೈಪರ್ ಅವರ ಪಾತ್ರವನ್ನು ಕಿಲಿಯನ್ ಮರ್ಫಿ ನಿಭಾಯಿಸಿದ್ದಾರೆ. ರಾಬರ್ಟ್ ಡೌನಿ ಜೂನಿಯರ್ ಅವರು ಸಂಪೂರ್ಣ ಗೆಟಪ್ ಬದಲಾಯಿಸಿಕೊಂಡು ಜನರ ಎದುರು ಬರುತ್ತಿದ್ದಾರೆ. ಟ್ರೇಲರ್ ನೋಡಿದ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಈಗಾಗಲೇ ಲಕ್ಷಾಂತರ ಟಿಕೆಟ್ಗಳು ಭಾರತದಲ್ಲಿ ಸೋಲ್ಡ್ ಔಟ್ ಆಗಿವೆ.
ಇದನ್ನೂ ಓದಿ: ಹಾಲಿವುಡ್ ಚಿತ್ರದ ಸಿದ್ಧತೆಗೆ ಭಗದ್ಗೀತೆ ಓದಿಕೊಂಡ ಐರಿಷ್ ನಟ ಕಿಲಿಯನ್ ಮರ್ಫಿ
2ನೇ ಮಹಾಯುದ್ಧದಲ್ಲಿ ಅಮೆರಿಕವು ಜಪಾನ್ ಮೇಲೆ 2 ಬಾರಿ ಆಟಂ ಬಾಂಬ್ ಹಾಕಿತ್ತು. ಅದರ ಹಿಂದಿರುವ ವಿವರಗಳನ್ನು ‘ಆಪನ್ಹೈಮರ್’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ದೆಹಲಿ, ಮುಂಬೈನಲ್ಲೂ ಈ ಚಿತ್ರದ ಕ್ರೇಜ್ ಜೋರಾಗಿದೆ. ಒಂದು ವರದಿ ಪ್ರಕಾರ, ಮುಂಬೈನ ಕೆಲವು ಮಲ್ಟಿಪ್ಲೆಕ್ಸ್ನಲ್ಲಿ ಮೊದಲ ದಿನದ ಟಿಕೆಟ್ಗಳು 2,450 ರೂಪಾಯಿಗೆ ಸೇಲ್ ಆಗಿದೆ. ಐಮ್ಯಾಕ್ಸ್ ವರ್ಷನ್ನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ಐಮ್ಯಾಕ್ಸ್ ಪರದೆಯ ಟಿಕೆಟ್ಗಳು ಸೋಮವಾರದವರೆಗೆ ಬುಕ್ ಆಗಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:46 pm, Tue, 18 July 23