ಆಸ್ಕರ್ ಪ್ರಶಸ್ತಿ ಸಮಾರಂಭ (Oscar Awards 2022) ಮಾರ್ಚ್ 28ರಂದು ನಡೆಯಲಿದೆ. ಎರಡು ವರ್ಷಗಳ ನಂತರ ಕಾರ್ಯಕ್ರಮ ವೇದಿಕೆಯಲ್ಲಿ ನಡೆಯುತ್ತಿದ್ದು, ಭರ್ಜರಿ ತಯಾರಿ ನಡೆಯುತ್ತಿದೆ. ಆಸ್ಕರ್ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮವನ್ನು ಪ್ರಸಾರ ಮಾಡುವುದಕ್ಕೆ ಅತೀವ ಪ್ರಾಮುಖ್ಯತೆ ಕೊಡಲಾಗುತ್ತದೆ. ಸಮಯ, ಕಾರ್ಯಕ್ರಮದ ಶೈಲಿ ಮೊದಲಾದವುಗಳನ್ನು ಮೊದಲೇ ನಿರ್ಧರಿಸಲಾಗುತ್ತದೆ. ಕಳೆದ ವರ್ಷಗಳಲ್ಲಿ ಆಸ್ಕರ್ ಪ್ರಶಸ್ತಿ ಸಮಾರಂಭದ ಟಿವಿ ರೇಟಿಂಗ್ ತುಸು ತಗ್ಗಿತ್ತು. ಇದನ್ನು ಸರಿಪಡಿಸಲು ಈ ಬಾರಿ ಹಲವು ಬದಲಾವಣೆ ತೆಗೆದುಕೊಳ್ಳಲಾಗುತ್ತಿದೆ. ಕಾರ್ಯಕ್ರಮವನ್ನು ಮತ್ತಷ್ಟು ರಂಗಾಗಿಸಲು ಮೂವರು ನಿರೂಪಕರನ್ನು ನಿಯೋಜಿಸಲಾಗಿದೆ. ಇದೀಗ ಆಯೋಜಕರು ಸಮಯವನ್ನು ಹೊಂದಿಸಲು ಹೊಸ ನಿರ್ಧಾರವೊಂದಕ್ಕೆ ಮುಂದಾಗಿದ್ದಾರೆ. ಆದರೆ ಇದು ಚಿತ್ರರಂಗದ ಆಕ್ರೋಶಕ್ಕೆ ಕಾರಣವಾಗಿದೆ. ಏನಿದು ಆಸ್ಕರ್ ಆಯೋಜಕರ ತೀರ್ಮಾನ? ವಿವರ ಇಲ್ಲಿದೆ.
8 ಪ್ರಶಸ್ತಿಗಳನ್ನು ಪ್ರಸಾರದ ಆರಂಭಕ್ಕೂ ಮುನ್ನ ನೀಡಲು ನಿರ್ಧರಿಸಿದ ಆಯೋಜಕರು:
‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆಂಡ್ ಸೈನ್ಸಸ್’ 8 ವಿಭಾಗಗಳ ಪ್ರಶಸ್ತಿಗಳನ್ನು ‘ಆಫ್ ಏರ್’ ಅರ್ಥಾತ್ ಕಾರ್ಯಕ್ರಮದ ಪ್ರಸಾರ ಆರಂಭವಾಗುವುದಕ್ಕೂ ಮುನ್ನವೇ ನೀಡಲು ನಿರ್ಧರಿಸಿದ್ದರು. ಇದೀಗ ತೀವ್ರ ಚರ್ಚೆಗೆ ಕಾರಣವಾಗಿರುವುದಲ್ಲದೇ ಚಿತ್ರರಂಗದ ಆಕ್ರೋಶಕ್ಕೆ ಕಾರಣವಾಗಿದೆ. ‘ಮೂಲ ಸಂಗೀತ’, ‘ಮೇಕಪ್ ಮತ್ತು ಕೇಶ ವಿನ್ಯಾಸ’, ‘ಕಿರು ಸಾಕ್ಷ್ಯಚಿತ್ರ’, ‘ಸಂಕಲನ’, ‘ಪ್ರೊಡಕ್ಷನ್ ಡಿಸೈನ್’, ‘ ಕಿರು ಆನಿಮೇಟೆಡ್ ಚಿತ್ರ’, ‘ಲೈವ್ ಆಕ್ಷನ್ ಮತ್ತು ಧ್ವನಿ ಕಿರು ಚಿತ್ರ’ ವಿಭಾಗಗಳಿಗೆ ಮಾರ್ಚ್ 27ರ ಕಾರ್ಯಕ್ರಮದ ಆರಂಭಕ್ಕೂ ಮುನ್ನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
ವೆರೈಟಿ ಮಾಧ್ಯಮ ತಿಳಿಸಿರುವಂತೆ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸುಲಭವಾಗುವಂತೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ವಿಚಾರವನ್ನು ಸಾರ್ವಜನಿಕಗೊಳಿಸುವ ಮುನ್ನ ಆಯಾ ವಿಭಾಗಗಳ ನಾಮನಿರ್ದೇಶಿತರಿಗೆ ಮೊದಲೇ ತಿಳಿಸಲು ಜೂಮ್ ಕರೆಯನ್ನು ಕರೆಯಲಾಗಿತ್ತು. ಅದರಲ್ಲಿ ಅಕಾಡೆಮಿಯ ತೀರ್ಮಾನಕ್ಕೆ ಸ್ಪರ್ಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾಗಿ ವರದಿಯಾಗಿದೆ.
ಕಾರ್ಯಕ್ರಮವನ್ನು ಸುಗಮವಾಗಿಸಲು ಪರ್ಯಾಯ ಮಾರ್ಗಗಳನ್ನು ಸೂಚಿಸಿದರೂ ಕೂಡ ಅಕಾಡೆಮಿ ಅದಕ್ಕೆ ಒಪ್ಪಿಲ್ಲ. ಅಲ್ಲದೇ ತಮ್ಮ ತೀರ್ಮಾನವೇ ಅಂತಿಮ ಎಂದು ಸಂಸ್ಥೆ ತಿಳಿಸಿದೆ. ಇದಕ್ಕೆ ನಾಮನಿರ್ದೇಶಿತರು ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ. ನಾಮನಿರ್ದೇಶಿತರಾಗಿರುವ ಪ್ರಬಲ ವ್ಯಕ್ತಿಗಳಿಗೆ ಆದ್ಯತೆ ನೀಡುವ ಈ ವಿಧಾನ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೆಸರು ಹೇಳಲು ಇಚ್ಛಿಸದ ನಿರ್ಮಾಪಕರೊಬ್ಬರು ಮಾತನಾಡಿ, ‘ಅಕಾಡೆಮಿಗೆ ಸಮಯವನ್ನು ಕಡಿತಗೊಳಿಸಲು ಹಲವಾರು ವಿಧಾನಗಳಿವೆ. ಆದರೆ ಈ ನಿರ್ಧಾರ ವಿವೇಚನೆಯಿಂದ ಕೂಡಿಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಮೇರಿಕಾದ ಎಡಿಟರ್ಗಳ ಸಂಘ (ಸಂಕಲನಕಾರರು) ಆಸ್ಕರ್ ಕಾರ್ಯಕ್ರಮದ ಹೊಸ ನಿಲುವನ್ನು ಬಹಿರಂಗವಾಗಿ ಖಂಡಿಸಿದೆ.
‘‘ಅಕಾಡೆಮಿಯ ನಿಲುವು ಕೆಲವು ವಿಭಾಗಗಳು ಇತರದ್ದಕ್ಕಿಂತ ಹೆಚ್ಚು ಮಹತ್ವದ್ದಾಗಿದೆ ಎಂದು ಸೂಚಿಸುವಂತಿದೆ. ವಾಸ್ತವವಾಗಿ ಚಲನಚಿತ್ರದಲ್ಲಿ ಹೀಗೆ ಇರುವುದಿಲ್ಲ. ಚಿತ್ರಗಳಿಗೆ ಸಂಕಲನಕಾರರ ಕೊಡುಗೆ ಅಗೋಚರವಾಗಿರಬಹುದು. ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ. ಎಲ್ಲಾ ಸೃಜನಶೀಲ ವಿಭಾಗಗಳನ್ನು ಸಮಾನವಾಗಿ, ಗೌರವದಿಂದ ಕಾಣಬೇಕು. ಆದರೆ ಅಕಾಡೆಮಿಯ ಈ ನಿರ್ಧಾರದಿಂದ ನಿರಾಶೆಯಾಗಿದೆ’’ ಎಂದ ಸಂಕಲನಕಾರರ ಸಂಘ ಪ್ರತಿಕ್ರಿಯೆ ನೀಡಿದೆ. ಅಕಾಡೆಮಿಯ ನಿರ್ಧಾರದಿಂದ ಯಾವೆಲ್ಲಾ ವಿಭಾಗಗಳಿಗೆ ಸಮಸ್ಯೆಯಾಗುತ್ತದೋ ಅವರನ್ನು ಗೌರವದಿಂದ ಅಕಾಡೆಮಿ ನಡೆಸಿಕೊಳ್ಳಬೇಕು ಎಂದು ಸಂಘ ಅಭಿಪ್ರಾಯ ಹಂಚಿಕೊಂಡಿದೆ.
ಇದನ್ನೂ ಓದಿ:
ರಿಲೀಸ್ಗೂ ಮುನ್ನವೇ ‘ಏಕ್ ಲವ್ ಯಾ’ ನೋಡಿದ ಸಿದ್ದರಾಮಯ್ಯ; ಹೇಗಿತ್ತು ಪ್ರತಿಕ್ರಿಯೆ?
ಪ್ರೆಗ್ನೆಂಟ್ ಸಂಜನಾ ಗಲ್ರಾನಿ ರೀಲ್ಸ್ ವೈರಲ್; ಮಗುವಿನ ಆಗಮನ ಯಾವಾಗ ಎಂದು ತಿಳಿಸಿದ ನಟಿ