Oscars 2022: ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಹತ್ತರ ಬದಲಾವಣೆ; ಏನೇನು? ಇಲ್ಲಿದೆ ಮಾಹಿತಿ
Oscars 2022 Hosts: ಆಸ್ಕರ್ ಪ್ರಶಸ್ತಿ ಸಮಾರಂಭದ ನಿರೂಪಣೆಗೆ ವಿಶೇಷ ಸ್ಥಾನವಿದೆ. ಇದೇ ಮೊದಲ ಬಾರಿಗೆ ಹಲವು ಹೊಸತನಗಳು ಕಾರ್ಯಕ್ರಮದಲ್ಲಿ ಇರಲಿದೆ. ಅಲ್ಲದೇ ಜನರನ್ನು ಸೆಳೆಯಲು ಹೊಸ ಪ್ರಶಸ್ತಿ ವಿಭಾಗವನ್ನೂ ಸ್ಥಾಪಿಸಲಾಗಿದೆ. ಈ ಬಾರಿಯ ಆಸ್ಕರ್ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.
ಮುಂದಿನ ತಿಂಗಳು ಆಸ್ಕರ್- 2022ರ ಪ್ರಶಸ್ತಿ ಪ್ರದಾನ ಸಮಾರಂಭ (Oscars 2022 Ceremony) ನಡೆಯಲಿದೆ. ದೀರ್ಘಕಾಲದಿಂದ ಈ ಸಮಾರಂಭಕ್ಕೆ ಅಭಿಮಾನಿಗಳು ಕಾದಿದ್ದಾರೆ. ಇತ್ತೀಚೆಗಷ್ಟೇ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇನಗೊಂಡ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಹಲವು ಖ್ಯಾತ ಚಿತ್ರಗಳು ಈ ಬಾರಿಯ ಆಸ್ಕರ್ ರೇಸ್ ನಲ್ಲಿ ಕಾಣಿಸಿಕೊಂಡಿದ್ದವು. ಆದ್ದರಿಂದ ಈ ಬಾರಿಯ ಸಮಾರಂಭ ಕುತೂಹಲ ಮೂಡಿಸಿದೆ. ಈ ನಡುವೆ ಎಬಿಸಿ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದ ನಿರೂಪಕರನ್ನು ಘೋಷಿಸಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಣೆಗೆ ಮಹತ್ತರ ಸ್ಥಾನವಿದೆ. ವಿಶೇಷವೆಂದರೆ ಈ ಬಾರಿ ನಿರೂಪಣೆಯಲ್ಲಿ ಹಲವು ಹೊಸತನಗಳಿದೆ. ಅವುಗಳು ಏನೇನು? ಇಲ್ಲಿದೆ ಕುತೂಹಲಕರ ಮಾಹಿತಿ.
ಈ ಬಾರಿಯ ನಿರೂಪಣೆಯಲ್ಲಿ ಹಲವು ‘ಮೊದಲುಗಳಿವೆ’; ಹಲವು ದಾಖಲೆಗಳಿವೆ. ಮೊದಲನೆಯದಾಗಿ 2018ರ ನಂತರ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನಿರೂಪಕರು ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷ ವಿಭಿನ್ನವಾಗಿ ಕಾರ್ಯಕ್ರಮ ನಡೆಸುವ ಸಲುವಾಗಿ ನಿರೂಪಕರು ನಡೆಸುತ್ತಿರಲಿಲ್ಲ. ಆದರೆ ಈ ಬಾರಿ ಮತ್ತೆ ನಿರೂಪಕರು ಇರಲಿದ್ದು, ಸಮಾರಂಭದ ಮೆರುಗು ಹೆಚ್ಚಿಸಲಿದ್ದಾರೆ.
ಈ ಬಾರಿ ಸಮಾರಂಭದಲ್ಲಿ ಮತ್ತೊಂದು ವಿಶೇಷವಿದೆ. 1987ರಲ್ಲಿ ಆಸ್ಕರ್ ಪ್ರಶಸ್ತಿ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೆ ಮೂರು ನಿರೂಪಕರು ಕಾರ್ಯಕ್ರಮ ನಡೆಸಿಕೊಟ್ಟ ಉದಾಹರಣೆಯಿರಲಿಲ್ಲ. ಇದೀಗ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಮೂವರು ನಿರೂಪಕರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಷ್ಟೇ ಅಲ್ಲ. ಮೂವರೂ ಮಹಿಳೆಯರಾಗಿರುವುದು ಮತ್ತೊಂದು ವಿಶೇಷ. ಈ ಬಾರಿ ಕಾರ್ಯಕ್ರಮ ನಡೆಸಿಕೊಡುವವರ ಹೆಸರು ಘೋಷಿಸಲಾಗಿದ್ದು, ಖ್ಯಾತ ಹಾಸ್ಯ ತಾರೆಯರಾದ ವಂಡಾ ಸೈಕ್ಸ್, ಆಮಿ ಶುಮ್ಮರ್ ಮತ್ತು ರೆಜಿನಾ ಹಾಲ್ ನಿರೂಪಣೆ ಮಾಡಲಿದ್ದಾರೆ.
ಆಸ್ಕರ್ ನಿರೂಪಕರ ಹೆಸರನ್ನು ಎಬಿಸಿ ವಾಹಿನಿ ಪ್ರಕಟಿಸಿದ್ದು, ಈ ಬಾರಿಯ ಅಂದರೆ 94ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾರ್ಚ್ 27ರಂದು ನಡೆಯಲಿದೆ. ಇತ್ತೀಚೆಗೆ ಆಸ್ಕರ್ ಕಾರ್ಯಕ್ರಮದ ಟಿವಿ ರೇಟಿಂಗ್ನಲ್ಲಿ ಗಣನೀಯವಾಗಿ ಕುಸಿತವಾಗಿದೆ. ಇದೇ ಕಾರಣದಿಂದ ಮತ್ತೆ ನಿರೂಪಕರನ್ನು ಕರೆತರಲಾಗಿದೆ ಹಾಗೆಯೇ ಕಾರ್ಯಕ್ರಮದಲ್ಲೂ ಬದಲಾವಣೆ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.
ಜನರನ್ನು ಆಕರ್ಷಿಸಲು ಮತ್ತೊಂದು ಹೊಸ ವಿಭಾಗ!
ಕಾರ್ಯಕ್ರಮಕ್ಕೆ ಜನರನ್ನು ಸೆಳೆಯಲು ಈ ಬಾರಿ ಹಲವು ಕಸರತ್ತುಗಳನ್ನು ಮಾಡಲಾಗುತ್ತಿದೆ. ಪರಿಣಾಮ, ಮೊದಲ ಬಾರಿಗೆ ಪ್ರಶಸ್ತಿಯಲ್ಲಿ ಹೊಸ ವಿಭಾಗವೊಂದನ್ನು ಸ್ಥಾಪಿಸಲಾಗಿದೆ. ‘ಅಭಿಮಾನಿಗಳ ನೆಚ್ಚಿನ ಚಿತ್ರ’ ಎಂಬ ಹೊಸ ವಿಭಾಗವನ್ನು ಪರಿಚಯಿಸಲಾಗಿದ್ದು, ಇದಕ್ಕೆ ಟ್ವಿಟರ್ನಲ್ಲಿ ಜನರು ವೋಟ್ ಮಾಡಬಹುದಾಗಿದೆ. ಇದರ ಆಧಾರದಲ್ಲಿ ಹೊಸ ಪ್ರಶಸ್ತಿ ನೀಡಲಾಗುತ್ತದೆ.
ಬಾಕ್ಸಾಫೀಸ್ ಹಿಟ್ ಚಿತ್ರಗಳಾದ ‘ಸ್ಪೈಡರ್ಮ್ಯಾನ್: ನೋ ವೇ ಹೋಮ್’ ಹಾಗೂ ‘ನೋ ಟೈಮ್ ಟು ಡೈ’ ಮೊದಲಾದ ಚಿತ್ರಗಳು ಈ ಬಾರಿ ಹೆಚ್ಚು ವಿಭಾಗಗಳಿಗೆ ನಾಮಿನೇಟ್ ಆಗಿಲ್ಲ. ಆದ್ದರಿಂದ ವೀಕ್ಷಕರೂ ಪ್ರಶಸ್ತಿ ಸಮಾರಂಭಕ್ಕೆ ಆಸಕ್ತಿ ತೋರಿಸದಿರಬಹುದು ಎಂಬ ಕಾರಣಕ್ಕೆ, ಅಭಿಮಾನಿಗಳ ನೆಚ್ಚಿನ ಚಿತ್ರ ಎಂಬ ವಿಭಾಗ ಹುಟ್ಟುಹಾಕಲಾಗಿದೆ ಎನ್ನಲಾಗಿದೆ.
ಆಸ್ಕರ್ ಪ್ರಶಸ್ತಿಯಲ್ಲಿ ಈ ಬಾರಿ ಭಾರತವನ್ನು ‘ರೈಟಿಂಗ್ ವಿತ್ ಫೈರ್’ ಪ್ರತಿನಿಧಿಸಲಿದೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ಇದು ಸ್ಪರ್ಧಿಸಲಿದೆ.
ಇದನ್ನೂ ಓದಿ:
Oscars 2022 Nominations: ಆಸ್ಕರ್ ನಾಮನಿರ್ದೇಶನ ಪಟ್ಟಿ ಪ್ರಕಟ; ಪ್ರಶಸ್ತಿ ರೇಸ್ನಲ್ಲಿದೆ ಭಾರತದ ಈ ಡಾಕ್ಯುಮೆಂಟರಿ!
Oscar Nominations 2022: ಆಸ್ಕರ್ ಫೈನಲ್ ರೇಸ್ನಲ್ಲಿ ಯಾರೆಲ್ಲಾ? ಇಲ್ಲಿದೆ ಪೂರ್ಣ ಪಟ್ಟಿ