Oscars 2022 Nominations: ಆಸ್ಕರ್ ನಾಮನಿರ್ದೇಶನ ಪಟ್ಟಿ ಪ್ರಕಟ; ಪ್ರಶಸ್ತಿ ರೇಸ್ನಲ್ಲಿದೆ ಭಾರತದ ಈ ಡಾಕ್ಯುಮೆಂಟರಿ!
Writing with Fire: ಭಾರತದ ರಿಂಟು ಥಾಮಸ್ ಹಾಗೂ ಸುಶ್ಮಿತ್ ಘೋಷ್ ನಿರ್ಮಿಸಿ, ನಿರ್ದೇಶಿಸಿರುವ ‘ರೈಟಿಂಗ್ ವಿತ್ ಫೈರ್’ ಆಸ್ಕರ್ನ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ. ಇಂದು ಪ್ರಶಸ್ತಿಗೆ ಅಂತಿಮ ನಾಮನಿರ್ದೇಶನಗಳನ್ನು ಘೋಷಿಸಲಾಗಿದೆ.
94ನೇ ಅಕಾಡೆಮಿ ಪ್ರಶಸ್ತಿಗಳಿಗೆ ಇಂದು (ಮಂಗಳವಾರ) ಸಂಜೆ ನಾಮನಿರ್ದೇಶನ ಮಾಡಲಾಗಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 94 ನೇ ಅಕಾಡೆಮಿ ಪ್ರಶಸ್ತಿಗಳ ನಾಮನಿರ್ದೇಶಿತರನ್ನು ಬ್ಲ್ಯಾಕ್-ಇಶ್ ಸ್ಟಾರ್ ಟ್ರೇಸಿ ಎಲ್ಲಿಸ್ ರಾಸ್ ಮತ್ತು ನಟ ಲೆಸ್ಲಿ ಜೋರ್ಡಾನ್ ನಿರೂಪಣೆ ಮಾಡುತ್ತಾ ಘೋಷಿಸಿದರು. ಎಲ್ಲಾ 23 ಅಕಾಡೆಮಿ ಪ್ರಶಸ್ತಿ ವಿಭಾಗಗಳಲ್ಲಿ ನಾಮನಿರ್ದೇಶಿತರನ್ನು ಇಂದು ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಸಾಕ್ಷ್ಯಚಿತ್ರವೊಂದು ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ (Best Documentary Feature category) ಪ್ರಶಸ್ತಿ ವಿಭಾಗಕ್ಕೆ ನಾಮನಿರ್ದೇಶನವಾಗಿದೆ. ದೆಹಲಿ ಮೂಲದ ಚಲನಚಿತ್ರ ನಿರ್ಮಾಪಕರಾದ ರಿಂಟು ಥಾಮಸ್ ಮತ್ತು ಸುಶ್ಮಿತ್ ಘೋಷ್ ಅವರ ಸಾಕ್ಷ್ಯಚಿತ್ರ ‘ರೈಟಿಂಗ್ ವಿತ್ ಫೈರ್’ (Writing With Fire) ಈ ವರ್ಷದ ಆಸ್ಕರ್ ನಾಮನಿರ್ದೇಶಿತ ಪಟ್ಟಿಯಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್ ವಿಭಾಗದಲ್ಲಿ ಸ್ಥಾನ ಪಡೆದಿದೆ. ಕಳೆದ ವರ್ಷ ಜನವರಿಯಲ್ಲಿ ನಡೆದ ಸನ್‌ಡಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ವಿಶೇಷ ಜ್ಯೂರಿ (ಇಂಪ್ಯಾಕ್ಟ್ ಫಾರ್ ಚೇಂಜ್) ಮತ್ತು ಪ್ರೇಕ್ಷಕರ ಪ್ರಶಸ್ತಿಗಳನ್ನು ಗೆದ್ದಾಗಿನಿಂದ ಈ ಸಾಕ್ಷ್ಯಚಿತ್ರವು ಸಖತ್ ಸುದ್ದಿ ಮಾಡುತ್ತಿದೆ. ಅಷ್ಟೇ ಅಲ್ಲ, ಅಂದಿನಿಂದ 20 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಸಾಕ್ಷ್ಯಚಿತ್ರ ಪಡೆದುಕೊಂಡಿದೆ. ಇದೀಗ ಪ್ರತಿಷ್ಠಿತ ಆಸ್ಕರ್ಗೆ (Oscar 2022) ನಾಮನಿರ್ದೇಶನಗೊಂಡಿದ್ದು, ಭಾರತದ ಪ್ರಶಸ್ತಿ ಆಸೆಗೆ ಬಲ ನೀಡಿದೆ.
True story – your Documentary Feature nominees are… #Oscar pic.twitter.com/wCvJ0Ao6Jr
— The Academy (@TheAcademy) February 8, 2022
‘ರೈಟಿಂಗ್ ವಿತ್ ಫೈರ್’ ಜತೆಗೆ, ‘ಅಸೆನ್ಶನ್’, ‘ಅಟಿಕಾ’, ‘ಫ್ಲೀ ಮತ್ತು ಸಮ್ಮರ್ ಆಫ್ ದಿ ಸೋಲ್’ (ಅಥವಾ ವೆನ್ ದಿ ರೆವಲ್ಯೂಷನ್ ಕುಡ್ ನಾಟ್ ಟೆಲಿವೈಸ್ಡ್) ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಇತರ ಚಿತ್ರಗಳಾಗಿವೆ. ‘ರೈಟಿಂಗ್ ವಿತ್ ಫೈರ್’ ಹೊರತುಪಡಿಸಿ ಭಾರತದ ಮತ್ಯಾವ ಚಿತ್ರಗಳೂ ಪ್ರಶಸ್ತಿ ರೇಸ್ನಲ್ಲಿ ಕಾಣಿಸಿಕೊಂಡಿಲ್ಲ.
‘ರೈಟಿಂಗ್ ವಿತ್ ಫೈರ್’ ಸಾಕ್ಷ್ಯಚಿತ್ರವನ್ನು ರಿಂಟು ಥಾಮಸ್ ಮತ್ತು ಸುಶ್ಮಿತ್ ಘೋಷ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಜಾತಿ ವ್ಯವಸ್ಥೆ, ಪುರುಷ ಪ್ರಧಾನ ಸಮಾಜ ಮೊದಲಾದ ವಿಚಾರಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ಕಟ್ಟಿಕೊಡಲಾಗಿದೆ. 2002 ರಿಂದ ದಲಿತ ಮಹಿಳೆಯರು ನಡೆಸುತ್ತಿರುವ ಖಬರ್ ಲಹರಿಯಾ ಎಂಬ ಒಂದು ರೀತಿಯ ಗ್ರಾಮೀಣ ಪತ್ರಿಕೆಯ ಸುತ್ತ ಇದರ ವಸ್ತುವಿಷಯವಿದೆ. ವಾಷಿಂಗ್ಟನ್ ಪೋಸ್ಟ್ ಈ ಡಾಕ್ಯುಮೆಂಟರಿ ಕುರಿತು ಹೊಗಳುತ್ತಾ, ‘ಇದು ಪತ್ರಿಕೋದ್ಯಮದ ಕುರಿತ ದೊಡ್ಡ ಪ್ರೇರಣಾದಾಯಿ ಚಿತ್ರ- ಎಂದೆಂದಿಗೂ’ ಎಂದು ಹೊಗಳಿತ್ತು.
‘ರೈಟಿಂಗ್ ವಿತ್ ಫೈರ್’ ಟ್ರೈಲರ್ ಇಲ್ಲಿದೆ:
ಆಸ್ಕರ್ ನಾಮನಿರ್ದೇಶನಗಳನ್ನು ಇಂದು (ಮಂಗಳವಾರ) ಪ್ರಕಟಿಸಲಾಗಿದೆ. ಪ್ರಶಸ್ತಿಯ ವಿಜೇತರನ್ನು ಮಾರ್ಚ್ 27 ರಂದು ನಡೆಯುವ ಸಮಾರಂಭದಲ್ಲಿ ಘೋಷಿಸಲಾಗುತ್ತದೆ.
ಇದನ್ನೂ ಓದಿ:
KGF 2: ಒಂದರ ಹಿಂದೊಂದು ಅಪ್ಡೇಟ್ ನೀಡುತ್ತಿದೆ ಕೆಜಿಎಫ್ 2 ತಂಡ; ಈ ಬಾರಿ ಏನು ಸಮಾಚಾರ?
Alia Bhatt: ರಿಲೀಸ್ಗೂ ಮುನ್ನವೇ ‘ಗಂಗೂಬಾಯಿ ಕಾಠಿಯಾವಾಡಿ’ ವಿರುದ್ಧ ಆಕ್ರೋಶದ ಸುರಿಮಳೆ; ಕಾರಣ ಒಂದೆರಡಲ್ಲ!
Published On - 8:24 pm, Tue, 8 February 22