ಭಾರತದ ಅನೇಕ ಕಲಾವಿದರು ಹಾಲಿವುಡ್ (Hollywood) ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ಇರ್ಫಾನ್ ಖಾನ್ ಸೇರಿದಂತೆ ಹಲವರು ಇಂಗ್ಲಿಷ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗ ನಟಿ ಶ್ರುತಿ ಹಾಸನ್ (Shruti Haasan) ಕೂಡ ಹಾಲಿವುಡ್ನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿ ಹೊರಬಿದ್ದಿತ್ತು. ಆದರೆ ಆ ಚಿತ್ರದಿಂದ ಶ್ರುತಿ ಹಾಸನ್ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ, ಸಮಂತಾ ರುತ್ ಪ್ರಭು (Samantha Ruth Prabhu) ಕೂಡ ಇದೇ ಸಿನಿಮಾದಿಂದ ಹೊರಬಂದಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ..
ಹಾಲಿವುಡ್ ನಿರ್ದೇಶಕ ಫಿಲಿಪ್ ಜಾನ್ ಅವರು ‘ಚೆನ್ನೈ ಸ್ಟೋರಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಅರೇಂಜ್ಮೆಂಟ್ಸ್ ಆಫ್ ಲವ್’ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಹಾಲಿವುಡ್ನ ಈ ಸಿನಿಮಾಗೆ ನಾಯಕಿಯಾಗಿ ಮೊದಲು ಆಯ್ಕೆ ಆಗಿದ್ದು ಸಮಂತಾ ರುತ್ ಪ್ರಭು. ನಿರ್ದೇಶಕರ ಜೊತೆ ಅವರ ಫೋಟೋ ಕೂಡ ವೈರಲ್ ಆಗಿತ್ತು. ಆದರೆ ಆ ಪ್ರಾಜೆಕ್ಟ್ನಿಂದ ಸಮಂತಾ ಆಚೆ ಬಂದರು. ನಂತರ ಶ್ರುತಿ ಹಾಸನ್ ಆಯ್ಕೆ ಆಗಿದ್ದರು.
ಇದನ್ನೂ ಓದಿ: ‘ಸಲಾರ್’ ನಟಿ ಶ್ರುತಿ ಹಾಸನ್ ಗುಟ್ಟಾಗಿ ಮದುವೆ ಆಗಿದ್ದಾರಾ? ಸ್ಪಷ್ಟನೆ ನೀಡಿದ ಕಮಲ್ ಪುತ್ರಿ
ಶ್ರುತಿ ಹಾಸನ್ ಅವರು ‘ಚೆನ್ನೈ ಸ್ಟೋರಿ’ ಸಿನಿಮಾಗೆ ಚಿತ್ರೀಕರಣ ಕೂಡ ಪ್ರಾರಂಭಿಸಿದ್ದರು. ವರದಿಗಳ ಪ್ರಕಾರ, ಈ ಸಿನಿಮಾದಿಂದ ಶ್ರುತಿ ಹಾಸನ್ ಹೊರಬಂದಿದ್ದಾರೆ. ಆದರೆ ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ಬಹಿರಂಗ ಆಗಿಲ್ಲ. ಇಬ್ಬರು ನಟಿಯರು ಕೂಡ ಈ ರೀತಿ ಅರ್ಧಕ್ಕೆ ಬಿಟ್ಟು ಬಂದಿರುವುದು ಯಾಕೆ ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡಿದೆ.
ಇದನ್ನೂ ಓದಿ: ಮಗಳ ಸಿನಿಮಾಗೆ ಅಪ್ಪನದ್ದೇ ಬಂಡವಾಳ; ಶ್ರುತಿ ಹಾಸನ್ಗೆ ಸಿಕ್ತು ದೊಡ್ಡ ಆಫರ್
2023ರಲ್ಲಿ ಶ್ರುತಿ ಹಾಸನ್ ಅವರಿಗೆ ‘ಸಲಾರ್’ ಸಿನಿಮಾದಿಂದ ದೊಡ್ಡ ಗೆಲುವು ಸಿಕ್ಕಿತು. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಳೆದ ವರ್ಷ ಇಂಗ್ಲಿಷ್ನ ‘ದಿ ಐ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಅವರು ಒಪ್ಪಿಕೊಂಡ ಎರಡನೇ ಹಾಲಿವುಡ್ ಸಿನಿಮಾ ‘ಚೆನ್ನೈ ಸ್ಟೋರಿ’. ಆದರೆ ಆ ಪ್ರಾಜೆಕ್ಟ್ಗೆ ಅವರು ಗುಡ್ ಬೈ ಹೇಳಿದ್ದಾರೆ ಎಂದು ಸುದ್ದಿ ಹಬ್ಬಿದೆ. ಈ ಬಗ್ಗೆ ಶ್ರುತಿ ಹಾಸನ್ ಅವರೇ ಪ್ರತಿಕ್ರಿಯೆ ನೀಡಬೇಕಿದೆ. ಕಮಲ್ ಹಾಸನ್ ಪುತ್ರಿ ಎಂಬ ಕಾರಣಕ್ಕೆ ಶ್ರುತಿ ಹಾಸನ್ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಬ್ಯಾಕ್ ಟು ಬ್ಯಾಕ್ ಅವಕಾಶಗಳು ಅವರಿಗೆ ಸಿಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.