ಪತ್ನಿಗಾಗಿ ನಟನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ಬ್ಯಾನ್​; ಅಕಾಡೆಮಿ ನಿರ್ಧಾರ

| Updated By: ಮದನ್​ ಕುಮಾರ್​

Updated on: Apr 09, 2022 | 8:58 AM

Will Smith banned: ವಿಲ್​ ಸ್ಮಿತ್​ ಅವರು ಕ್ರಿಸ್​ ರಾಕ್​ ಮುಖಕ್ಕೆ ಬಾರಿಸಿದ ವರ್ತನೆಯನ್ನು ಖಂಡಿಸಿ ಅವರನ್ನು 10 ವರ್ಷ ಬ್ಯಾನ್​ ಮಾಡಲಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಪತ್ನಿಗಾಗಿ ನಟನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ಬ್ಯಾನ್​; ಅಕಾಡೆಮಿ ನಿರ್ಧಾರ
ವಿಲ್ ಸ್ಮಿತ್
Follow us on

ನಟ ವಿಲ್​ ಸ್ಮಿತ್​ (Will Smith) ಅವರಿಗೆ ಈಗ ಸಂಕಷ್ಟ ಕಾಲ. ವಿವಾದದ ಕಾರಣದಿಂದಲೇ ಅವರು ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಹಾಸ್ಯ ನಟ ಕ್ರಿಸ್​ ರಾಕ್​ (Chris Rock) ಅವರ ಕೆನ್ನೆಗೆ ಹೊಡಿದಿದ್ದಕ್ಕಾಗಿ ವಿಲ್​ ಸ್ಮಿತ್​ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಮುಂದಿನ 10 ವರ್ಷಗಳ ಕಾಲ ಆಸ್ಕರ್​ ಪ್ರಶಸ್ತಿ (Oscars) ಸಮಾರಂಭದಲ್ಲಿ ಭಾಗವಹಿಸದಂತೆ ವಿಲ್​ ಸ್ಮಿತ್​ ಅವರನ್ನು ಬ್ಯಾನ್​ ಮಾಡಲಾಗಿದೆ. ಆಸ್ಕರ್​ ಪ್ರಶಸ್ತಿ ನೀಡುವ ‘ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್ಸ್​ ಆರ್ಟ್ಸ್​ ಆ್ಯಂಡ್​ ಸೈನ್ಸ್​’ ಸಂಸ್ಥೆಯು ಈ ನಿರ್ಧಾರ ತಿಳಿಸಿದೆ. ಇದರಿಂದ ವಿಲ್​ ಸ್ಮಿತ್​ ಅವರ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕಿ ಬಿದ್ದಂತಾಗಿದೆ. ಶುಕ್ರವಾರ (ಏ.8) ಅಕಾಡೆಮಿಯ ಪ್ರಮುಖರು ಸಭೆ ನಡೆಸಿದರು. ವಿಲ್​ ಸ್ಮಿತ್​ಗೆ ಯಾವ ಶಿಕ್ಷೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ಅಂತಿಮವಾಗಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಮುಂದಿನ 10 ವರ್ಷಗಳ ಕಾಲ ವಿಲ್​ ಸ್ಮಿತ್​ ಅವರು ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಲಾಗಿದೆ. ಇದು ಅವರ ಅಭಿಮಾನಿಗಳಿಗೆ ಸಖತ್​ ಬೇಸರ ಮೂಡಿಸಿದೆ.

ಒಟ್ಟಾರೆಯಾಗಿ ಈ ಘಟನೆಯ ಸರಿ-ತಪ್ಪುಗಳ ಬಗ್ಗೆ ಚರ್ಚೆ ಆಗುತ್ತಿದೆ. ಮಾ.27ರಂದು ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿತ್ತು. ವೇದಿಕೆ ಮೇಲೆ ಹಾಸ್ಯ ನಟ ಕ್ರಿಸ್​ ರಾಕ್​ ಮಾತನಾಡುತ್ತಿದ್ದರು. ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ವಿತರಿಸಲು ಕ್ರಿಸ್​ ರಾಕ್​ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ಅವರು ಸುಮ್ಮನಿರಲಾರದೇ ವಿಲ್​ ಸ್ಮಿತ್​ ಅವರ ಪತ್ನಿ ಜೇಡಾ ಪಿಂಕೆಟ್​​ ಸ್ಮಿತ್​ ಅವರ ಬೋಳು ತಲೆಯ ಬಗ್ಗೆ ಕಾಮಿಡಿ ಮಾಡಿದ್ದರು. ಅದು ವಿಲ್​ ಸ್ಮಿತ್​ ಅವರಿಗೆ ಸರಿ ಎನಿಸಲಿಲ್ಲ. ಕ್ರಿಸ್​ ರಾಕ್​ ಅವರ ಮಾತು ಕೇಳಿ ಇಡೀ ಸಭಾಂಗಣ ಜೋರಾಗಿ ನಕ್ಕಿತು. ಕೂಡಲೇ ವೇದಿಕೆ ಏರಿದ ವಿಲ್​ ಸ್ಮಿತ್​ ಅವರು ಕ್ರಿಸ್​ ರಾಕ್​ ಮುಖಕ್ಕೆ ಬಾರಿಸಿದ್ದರು. ಆ ವರ್ತನೆಯನ್ನು ಖಂಡಿಸಿ ಅವರಿನ್ನು ಈಗ 10 ವರ್ಷ ಬ್ಯಾನ್​ ಮಾಡಲಾಗಿದೆ.

ವಿಲ್​ ಸ್ಮಿತ್​ ಕ್ಷಮೆ ಕೇಳಿದರೂ ಶಿಕ್ಷೆ ತಪ್ಪಲಿಲ್ಲ:

ಈ ಬಾರಿಯ ಆಸ್ಕರ್​ ವೇದಿಕೆಯಲ್ಲಿ ವಿಲ್​ ಸ್ಮಿತ್ ಅವರಿಗೆ ಸಿಹಿ ಮತ್ತು ಕಹಿ ಎರಡೂ ಅನುಭವ ಆಯಿತು. ಪತ್ನಿಯ ಬಗ್ಗೆ ಕಾಮಿಡಿ ಮಾಡಿದ ಕ್ರಿಸ್​ ರಾಕ್​ಗೆ ಕಪಾಳಮೋಕ್ಷ ಮಾಡಿದ ನಂತರ ವಿಲ್​ ಸ್ಮಿತ್ ಅವರು ವೇದಿಕೆ ಏರಿ ‘ಅತ್ಯುತ್ತಮ ನಟ’ ಆಸ್ಕರ್​ ಪ್ರಶಸ್ತಿ ಪಡೆದುಕೊಂಡರು. ‘ಕಿಂಗ್​ ರಿಚರ್ಡ್​’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಿಕ್ಕಿತು. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದ ಅವರು ಎಲ್ಲರಲ್ಲೂ ಕ್ಷಮೆ ಕೇಳಿದರು. ಕೆನ್ನೆಗೆ ಹೊಡೆದಿದ್ದಕ್ಕೆ ಅವರು ಪಶ್ಚಾತ್ತಾಪದಿಂದ ಕಣ್ಣೀರು ಹಾಕಿದರು. ನಂತರ ಅಕಾಡೆಮಿ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದರು. ಆದರೂ ಕೂಡ ವಿಲ್​ ಸ್ಮಿತ್​ ಅವರಿಗೆ ಶಿಕ್ಷೆ ತಪ್ಪಲಿಲ್ಲ.

ಕ್ರಿಸ್​ ರಾಕ್​ ಪ್ರತಿಕ್ರಿಯೆ ಏನು?

ಎಲ್ಲರ ಎದುರು ಕಪಾಳಮೋಕ್ಷ ಮಾಡಿಸಿಕೊಂಡ ಕ್ರಿಸ್​ ರಾಕ್​ ಅವರಿಗೆ ಅವಮಾನ ಆಗಿದೆ. ಈ ರೀತಿ ಆಗಿದ್ದಕ್ಕೆ ವಿಲ್​ ಸ್ಮಿತ್​ ವಿರುದ್ಧ ದೂರು ನೀಡಬಹುದು ಎಂದು ಪೊಲೀಸರು ಹೇಳಿದರೂ ಕೂಡ ಕ್ರಿಸ್​ ರಾಕ್​ ಅವರು ದೂರು ನೀಡಲು ನಿರಾಕರಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಬಗ್ಗೆ ಅವರು ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

ಆಸ್ಕರ್​ ವೇದಿಕೆಯಲ್ಲಿ ನಟ ಕ್ರಿಸ್​ ರಾಕ್​ ಕೆನ್ನೆಗೆ ಹೊಡೆದ ವಿಲ್​ ಸ್ಮಿತ್​ ಬಗ್ಗೆ ತಾಯಿಯ ಪ್ರತಿಕ್ರಿಯೆ ಏನು?

ಮುತ್ತು ಕೊಟ್ಟ ಪತ್ರಕರ್ತನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​; ಆಸ್ಕರ್​ ಗಲಾಟೆ ಬಳಿಕ ಮತ್ತೊಂದು ವಿಡಿಯೋ ವೈರಲ್​