ಪತ್ನಿ ಬಗ್ಗೆ ಜೋಕ್​ ಮಾಡಿದ್ದಕ್ಕೆ ಆಸ್ಕರ್​ ವೇದಿಕೆ ಮೇಲೆ ನಟನ ಕೆನ್ನೆಗೆ ಬಾರಿಸಿದ ವಿಲ್​ ಸ್ಮಿತ್​; ವಿಡಿಯೋ ವೈರಲ್​

| Updated By: ಮದನ್​ ಕುಮಾರ್​

Updated on: Mar 28, 2022 | 11:55 AM

Will Smith | Chris Rock: ಪತ್ನಿ ಜೇಡಾ ಪಿಂಕೆಟ್​ ಸ್ಮಿತ್​ ಬಗ್ಗೆ ಜೋಕ್​ ಮಾಡಿದ್ದಕ್ಕಾಗಿ ಕ್ರಿಸ್​ ರಾಕ್​ ಕೆನ್ನೆಗೆ ವಿಲ್​ ​ಸ್ಮಿತ್​ ಬಾರಿಸಿದ್ದಾರೆ. ಇದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.

ಪತ್ನಿ ಬಗ್ಗೆ ಜೋಕ್​ ಮಾಡಿದ್ದಕ್ಕೆ ಆಸ್ಕರ್​ ವೇದಿಕೆ ಮೇಲೆ ನಟನ ಕೆನ್ನೆಗೆ ಬಾರಿಸಿದ ವಿಲ್​ ಸ್ಮಿತ್​; ವಿಡಿಯೋ ವೈರಲ್​
ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದ ವಿಲ್​ ಸ್ಮಿತ್
Follow us on

ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ನಟ ವಿಲ್​ ಸ್ಮಿತ್​ (Will Smith) ಅವರು ಎರಡು ಕಾರಣಕ್ಕಾಗಿ ಸುದ್ದಿ ಆಗಿದ್ದಾರೆ. ‘ಕಿಂಗ್​ ರಿಚರ್ಡ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು. ಹಾಗೆಯೇ, ಹಾಸ್ಯ ನಟನ ಕೆನ್ನೆಗೆ ಬಾರಿಸುವ ಮೂಲಕ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಎಂದಿನಂತೆ ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಖುಷಿಖುಷಿಯಾಗಿ ನಡೆಯುತ್ತಿತ್ತು. ವೇದಿಕೆ ಮೇಲೆ ಹಾಸ್ಯ ನಟ ಕ್ರಿಸ್​ ರಾಕ್​ ಮಾತನಾಡುತ್ತಿದ್ದರು. ಅವರ ಮಾತು ವಿಲ್​ ಸ್ಮಿತ್​ ಪತ್ನಿ ಜೇಡಾ ಪಿಂಕೆಟ್​ ಸ್ಮಿತ್​ (Jada Pinkett Smith) ಕಡೆಗೆ ತಿರುಗಿತು. ಜೇಡಾ ಪಿಂಕೆಟ್​​ ಸ್ಮಿತ್​ ಬಗ್ಗೆ ಅವರು ಜೋಕ್​ ಮಾಡಿದರು. ಅದನ್ನು ಕೇಳಿ ಇಡೀ ಸಭಾಂಗಣ ಜೋರಾಗಿ ನಕ್ಕಿತು. ಒಂದು ಕ್ಷಣ ವಿಲ್​ ಸ್ಮಿತ್​ ಕೂಡ ನಕ್ಕರು. ಆದರೆ ಅಲ್ಲಿ ಮರುಕ್ಷಣ ನಡೆದಿದ್ದು ನಿಜಕ್ಕೂ ಶಾಕಿಂಗ್​. ಕೂಡಲೇ ವೇದಿಕೆ ಏರಿದ ವಿಲ್​ ಸ್ಮಿತ್​ ಅವರು ಕ್ರಿಸ್​ ರಾಕ್​ (Chris Rock) ಮುಖಕ್ಕೆ ಬಾರಿಸಿದರು. ಇಡೀ ಸಭಾಂಗಣದಲ್ಲಿ ಮೌನ ಆವರಿಸಿತು. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ವಿತರಿಸಲು ಕ್ರಿಸ್​ ರಾಕ್​ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ಅವರು ಸುಮ್ಮನಿರಲಾರದೇ ಜೇಡಾ ಪಿಂಕೆಟ್​​ ಸ್ಮಿತ್​ ಬಗ್ಗೆ ಕಾಮಿಡಿ ಮಾಡಿದರು. ಅದು ವಿಲ್​ ಸ್ಮಿತ್​ ಅವರಿಗೆ ಸರಿ ಎನಿಸಲಿಲ್ಲ. ಪತ್ನಿಯ ಬಗ್ಗೆ ಜೋಕ್​ ಮಾಡಿದ್ದಕ್ಕಾಗಿ ಕ್ರಿಸ್​ ರಾಕ್​ ಕೆನ್ನೆಗೆ ವಿಲ್​ ​ಸ್ಮಿತ್​ ಬಾರಿಸಿದರು. ಇದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.

ಇಡೀ ಸನ್ನಿವೇಶ ಸ್ಕ್ರಿಪ್ಟೆಡ್​ ಇರಬಹುದಾ? ವೇದಿಕೆಯಲ್ಲಿ ಬೇಕಂತಲೇ ಈ ರೀತಿ ನಾಟಕ ಮಾಡಿರಬಹುದಾ ಎಂಬ ಪ್ರಶ್ನೆ ಕೂಡ ಜನರ ಮನದಲ್ಲಿ ಮೂಡಿದೆ. ಒಟ್ಟಿನಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ರೀತಿ ಆಗಿದ್ದರ ಬಗ್ಗೆ ಸ್ವತಃ ವಿಲ್​ ಸ್ಮಿತ್​ ಅವರಿಗೂ ಬೇಸರ ಇದೆ. ಈಗ ಅವರು ಕ್ಷಮೆ ಕೇಳಿದ್ದಾರೆ. ‘ನಾನು ಅಕಾಡೆಮಿಯ ಕ್ಷಮೆ ಕೇಳುತ್ತೇನೆ. ನಾಮನಿರ್ದೇಶಕಗೊಂಡ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ’ ಎಂದು ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಆ ವಿಡಿಯೋ ಕೂಡ ವೈರಲ್​ ಆಗುತ್ತಿದೆ.

‘ದಿ ಐಸ್​ ಆಫ್​ ಟ್ಯಾಮಿ ಫೇ’ ಸಿನಿಮಾದಲ್ಲಿನ ನಟನೆಗಾಗಿ ಜೆಸ್ಸಿಕಾ ಚಾಸ್ಟೇನ್​ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮೂವರು ಮಹಿಳೆಯರು (ರೆಜಿನಾ ಹಾಲ್​, ಎಮಿ ಶೂಮಾರ್, ವೊಂಡಾ ಸ್ಕೈಸ್​) ಆಸ್ಕರ್​ ಸಮಾರಂಭವನ್ನು ಹೋಸ್ಟ್​ ಮಾಡಿದ್ದಾರೆ. ಶಾನ್​ ಹೆಡರ್ ನಿರ್ದೇಶನದ ‘ಕೋಡಾ’ ಚಿತ್ರವು ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್​ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್​’ ಪ್ರಿಯಾಂಕಾ ಚೋಪ್ರಾ

ಆಸ್ಕರ್​ ರೇಸ್​ನಿಂದ ‘ಜೈ ಭೀಮ್​’ ಚಿತ್ರ ಹೊರಬಿದ್ದರೂ ಸೂರ್ಯ ಫ್ಯಾನ್ಸ್​ ಖುಷಿ ಕಡಿಮೆ ಆಗಿಲ್ಲ; ಕಾರಣ ಏನು?

Published On - 11:53 am, Mon, 28 March 22