AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್​ಗೆ ಹೆಸರಿಟ್ಟಿದ್ಯಾರು? ಅದೇ ಹೆಸರು ಆಯ್ಕೆ ಮಾಡಿದ್ದೇಕೆ?

Story behind Rajinikanth name: ರಜನೀಕಾಂತ್ ಭಾರತದ ಟಾಪ್ ಸೂಪರ್ ಸ್ಟಾರ್. ಹಲವು ದಶಕಗಳಿಂದಲೂ ಅವರು ಸೂಪರ್ ಸ್ಟಾರ್. ಬಹುತೇಕರಿಗೆ ತಿಳಿದಿರುವಂತೆ ರಜನೀಕಾಂತ್ ಅವರ ನಿಜ ಹೆಸರಲ್ಲ. ಅವರ ನಿಜ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಆದರೆ ಅವರ ಹೆಸರು ಬದಲಾವಣೆ ಮಾಡಿದ್ದು ಯಾರು? ರಜನೀಕಾಂತ್ ಹೆಸರನ್ನೇ ಆಯ್ಕೆ ಮಾಡಿದ್ದು ಏಕೆ? ಇಲ್ಲಿದೆ ನೋಡಿ ಮಾಹಿತಿ...

ರಜನೀಕಾಂತ್​ಗೆ ಹೆಸರಿಟ್ಟಿದ್ಯಾರು? ಅದೇ ಹೆಸರು ಆಯ್ಕೆ ಮಾಡಿದ್ದೇಕೆ?
Apoorva Ragangal
ಮಂಜುನಾಥ ಸಿ.
|

Updated on: Aug 26, 2025 | 4:47 PM

Share

ರಜನೀಕಾಂತ್ (Rajinikanth) ಭಾರತದ ನಂಬರ್ 1 ಸೂಪರ್ ಸ್ಟಾರ್. ಹಲವು ದಶಕಗಳಿಂದಲೂ ಅವರು ಸೂಪರ್ ಸ್ಟಾರ್. ಭಾರತ ಸೇರಿದಂತೆ ವಿಶ್ವದಾದ್ಯಂತ ರಜನೀಕಾಂತ್​ಗೆ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ಈಗಲೂ ಮೊದಲ ದಿನ ಹೌಸ್ ಫುಲ್ ಆಗುತ್ತವೆ. ರಜನೀಕಾಂತ್ ಅವರಂಥಹಾ ಸೂಪರ್ ಸ್ಟಾರ್ ಭಾರತದಲ್ಲಿ ಮತ್ತೊಬ್ಬರಿಲ್ಲ. ಅವರ ಸ್ಟೈಲು, ವ್ಯಕ್ತಿತ್ವ ಎಲ್ಲವೂ ಭಿನ್ನ. ಅವರ ಹೆಸರೂ ಸಹ ಅಪರೂಪವೇ. ಅಂದಹಾಗೆ ರಜನೀಕಾಂತ್ ಅವರಿಗೆ ಈ ಹೆಸರಿಟ್ಟಿದ್ದು ಯಾರು ಮತ್ತು ಏಕೆ ಅವರು ‘ರಜನೀಕಾಂತ್’ ಎಂಬ ಹೆಸರನ್ನೇ ಆಯ್ಕೆ ಮಾಡಿದರು.

ಬಹುತೇಕರಿಗೆ ಗೊತ್ತಿರುವಂತೆ ರಜನೀಕಾಂತ್ ಬೆಂಗಳೂರಿನವರು. ಅವರದ್ದು ಮರಾಠಿ ಮೂಲದ ಕುಟುಂಬ ಆದರೆ ರಜನೀಕಾಂತ್ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲೇ. ಶಿಕ್ಷಣ ಪಡೆದಿದ್ದೂ ಸಹ ಇಲ್ಲಿಯೇ. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಅವರು ಕೆಲಸ ಮಾಡುತ್ತಿದ್ದರು. ನಟನೆಯ ಮೇಲಿನ ಆಸಕ್ತಿಯಿಂದ ಅವರ ಗೆಳೆಯರನ ಸಹಾಯದೊಂದಿಗೆ ಆಗಿನ ಮದ್ರಾಸಿಗೆ ತೆರಳಿ ನಟನಾ ತರಬೇತಿ ಸೇರಿಕೊಂಡರು. ಅಲ್ಲಿಂದ ಅವರ ಅದೃಷ್ಟ ಬದಲಾಯ್ತು.

ರಜನೀಕಾಂತ್ ಮೊದಲು ನಟಿಸಿದ ಸಿನಿಮಾ ‘ಅಪೂರ್ವ ರಾಗಂಗಳ್’. ಆ ಸಿನಿಮಾದ ನಿರ್ದೇಶಕ ಲಿಜೆಂಡರಿ ಕೆ ಬಾಲಚಂದರ್. ಸಿನಿಮಾದ ವಿಲನ್ ಪಾತ್ರದಲ್ಲಿ ನಟಿಸಲು ಬಾಂಬೆಯಿಂದೆಲ್ಲ ನುರಿತ ನಟರು ಆಡಿಷನ್​ಗೆ ಬಂದಿದ್ದರಂತೆ. ಆದರೆ ರಜನೀಕಾಂತ್ ಅವರನ್ನು ನೋಡಿದ ಕೂಡಲೇ ಆಯ್ಕೆ ಮಾಡಿದರಂತೆ ಬಾಲಚಂದರ್. ಆದರೆ ರಜನೀಕಾಂತ್ ಅವರ ಮೂಲ ಹೆಸರಾಗಿದ್ದ ಶಿವಾಜಿ ರಾವ್ ಗಾಯಕ್​ವಾಡ್, ಬಾಲಚಂದರ್ ಅವರಿಗೆ ಇಷ್ಟವಾಗಲಿಲ್ಲವಂತೆ. ಹೆಸರು ಬದಲಾವಣೆ ಮಾಡಿಕೊಳ್ಳುವಂತೆ ರಜನೀಕಾಂತ್ ಅವರಿಗೆ ಹೇಳಿದರಂತೆ.

ಇದನ್ನೂ ಓದಿ:ರಜನೀಕಾಂತ್ ಅವರನ್ನು ಮಹಾಭಾರತದ ಆ ಪಾತ್ರಕ್ಕೆ ಹೋಲಿಸಿದ ಉಪ್ಪಿ

ಆಗ ರಜನೀಕಾಂತ್, ಶಿವಾಜಿ ರಾವ್ ಎಂದೇ ಇರಲಿ ಎಂದರಂತೆ. ಆದರೆ ಅದಾಗಲೇ ಶಿವಾಜಿ ಗಣೇಶನ್ ತಮಿಳಿನ ಸ್ಟಾರ್ ನಟ ಹಾಗಾಗಿ ಆ ಹೆಸರು ಬೇಡ ಎಂದರಂತೆ. ಬಳಿಕ ಎಸ್​ಆರ್ ಗಾಯಕ್​ವಾಡ್ ಎಂದು ಇಡಿ ಎಂದರಂತೆ. ಆದರೆ ಆ ಹೆಸರು ಉತ್ತರ ಭಾರತದ ಹೆಸರಿನಂತಿದೆ ಬೇಡ ಎಂದರಂತೆ ಬಾಲಚಂದರ್. ಹಾಗಿದ್ದರೆ ಶರತ್ ಎಂದು ಹೆಸರಿರಲಿ ಎಂದರಂತೆ. ಆದರೆ ಅದು ಹೊಸದಾಗಿಲ್ಲ, ಭಿನ್ನವಾಗಿಲ್ಲ ಎಂದು ಹೇಳಿ ಅದನ್ನೂ ರಿಜೆಕ್ಟ್ ಮಾಡಿದರಂತೆ ಬಾಲಚಂದರ್.

ಬಾಲಚಂದರ್ ಅವರು 1966 ರಲ್ಲಿ ನಿರ್ದೇಶಿಸಿದ್ದ ‘ಮೇಜರ್ ಚಂದ್ರಕಾಂತ್’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಆ ಸಿನಿಮಾದ ವಿಲನ್ ಹೆಸರು ರಜನೀಕಾಂತ್. ಸಿನಿಮಾನಲ್ಲಿ ರಜನೀಕಾಂತ್ ಪಾತ್ರವನ್ನು ಖ್ಯಾತ ನಟ ಎವಿಎಂ ರಾಜನ್ ನಿರ್ವಹಿಸಿದ್ದರು. ಆ ಪಾತ್ರವೂ ಸಹ ನಾಯಕನ ಪಾತ್ರದಂತೆ ಹಿಟ್ ಆಗಿತ್ತು. ಹಾಗಾಗಿ ಅದೇ ಹೆಸರನ್ನು ಬಾಲಚಂದರ್ ಅವರು ಆಗಿನ ಶಿವಾಜಿಗೆ ನೀಡಿದರು. ರಜನೀಕಾಂತ್ ‘ಅಪೂರ್ವ ರಾಗಂಗಳ್’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದ ಕಾರಣ ವಿಲನ್ ಪಾತ್ರದ ಹೆಸರನ್ನೇ ಬಾಲಚಂದರ್ ಕೊಟ್ಟರು. ಆ ಹೆಸರು ಭಾರತ ಚಿತ್ರರಂಗ ಇತಿಹಾಸದಲ್ಲಿ ಎಂದೂ ಅಳಿಸಲಾಗದ ಹೆಸರಾಗಿ ನಿಂತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ