AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡುಗಡೆ ಆಯ್ತು ‘ಬಾಹುಬಲಿ: ದಿ ಎಪಿಕ್’ ಟೀಸರ್, ವಿಶೇಷತೆಯೇನು?

Bahubali The Epic: ‘ಬಾಹುಬಲಿ 1 ಮತ್ತು 2’ ಸಿನಿಮಾಗಳು ಕ್ರಮವಾಗಿ 2015 ಮತ್ತು 2017ಕ್ಕೆ ಬಿಡುಗಡೆ ಆಗಿದ್ದವು. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆದಿದ್ದವು. ಇದೀಗ ಈ ಎರಡೂ ಸಿನಿಮಾಗಳನ್ನು ಒಂದೇ ಮಾಡಿ ಮತ್ತೆ ಮರು ಬಿಡುಗಡೆ ಮಾಡಲಾಗುತ್ತಿದೆ. ಹಲವಾರು ದೃಶ್ಯಗಳನ್ನು ಕತ್ತರಿಸಿ 3:30 ಗಂಟೆಯ ಸಿನಿಮಾ ಮಾಡಲಾಗಿದ್ದು, ಮರು ಬಿಡುಗಡೆ ದಿನಾಂಕ ಇಲ್ಲಿದೆ...

ಬಿಡುಗಡೆ ಆಯ್ತು ‘ಬಾಹುಬಲಿ: ದಿ ಎಪಿಕ್’ ಟೀಸರ್, ವಿಶೇಷತೆಯೇನು?
Bahubali Movie
ಮಂಜುನಾಥ ಸಿ.
|

Updated on:Aug 26, 2025 | 6:23 PM

Share

‘ಬಾಹುಬಲಿ’ (Bahubali) ಭಾರತ ಚಿತ್ರರಂಗದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ಸಿನಿಮಾ. ಒಳ್ಳೆಯ ಕಂಟೆಂಟ್ ಇದ್ದರೆ ನೂರಾರು ಕೋಟಿ ಬಂಡವಾಳ ಹಾಕಿ ಸಾವಿರಾರು ಕೋಟಿ ಹಣ ಬಾಚಬಹುದು ಎಂದು ತೋರಿಸಿಕೊಟ್ಟ ಸಿನಿಮಾ. ಭಾರತೀಯ ಸಿನಿಮಾ ಇತಿಹಾಸದಲ್ಲಿ ದಾಖಲಾದ ಈ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. ‘ಬಾಹುಬಲಿ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಇದೀಗ ಈ ಸಿನಿಮಾ ಒಂದೆ ಭಾಗದಲ್ಲಿ ಮರು ಬಿಡುಗಡೆ ಆಗುತ್ತಿದ್ದು, ಹಲವು ವಿಶೇಷತೆಗಳನ್ನು ಸಿನಿಮಾ ಒಳಗೊಂಡಿರಲಿದೆ.

ದಕ್ಷಿಣ ಭಾರತ ಚಿತ್ರರಂಗದ ಭವಿಷ್ಯ ಬದಲಾಯಿಸಿದ ‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನು ಹಲವು ಎಡಿಟ್​ಗಳ ಮೂಲಕ ಒಂದೇ ಸಿನಿಮಾ ಅನ್ನಾಗಿ ಬದಲಾಯಿಸಿದ್ದು, ಸಿನಿಮಾಕ್ಕೆ ‘ಬಾಹುಬಲಿ: ದಿ ಎಪಿಕ್’ ಎಂದು ಹೆಸರಿಡಲಾಗಿದೆ. ಇದೀಗ ಈ ಸಿನಿಮಾ ಅಕ್ಟೋಬರ್ 31ರಂದು ಮರು ಬಿಡುಗಡೆ ಆಗುತ್ತಿದೆ. ಇಂದು (ಆಗಸ್ಟ್ 26) ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

‘ಬಾಹುಬಲಿ ಮೂವಿ’ ಯೂಟ್ಯೂಬ್ ಚಾನೆಲ್​​ನಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಒಂದು ನಿಮಿಷ 15 ಸೆಕೆಂಡ್​ ಅವಧಿಯ ಟೀಸರ್ ಇದಾಗಿದ್ದು, ಟೀಸರ್​​ನಲ್ಲಿ ಮೊದಲ ಹಾಗೂ ಎರಡನೇ ಭಾಗದ ದೃಶ್ಯಗಳನ್ನು ಸೇರಿಸಲಾಗಿದೆ. ಸಿನಿಮಾದ ಕೆಲವು ಪ್ರಮುಖ ಸೀನ್​ಗಳ ದೃಶ್ಯಗಳನ್ನು ಈ ಸಿನಿಮಾನಲ್ಲಿ ಸೇರಿಸಿರುವುದು ವಿಶೇಷ. ಟೀಸರ್​​ಗೆ ಹೊಸತಾಗಿ ಹಿನ್ನೆಲೆ ಸಂಗೀತವನ್ನು ಸಹ ನೀಡಲಾಗಿದೆ. ಇದರ ಜೊತೆಗೆ ಸಿನಿಮಾವನ್ನು ತಾಂತ್ರಿಕವಾಗಿ ಇನ್ನಷ್ಟು ಅಪ್​ಗ್ರೇಡ್ ಸಹ ಮಾಡಲಾಗಿದೆ.

ಇದನ್ನೂ ಓದಿ:ಬಾಲಿವುಡ್​ ಮೇಲೆ ಮುನಿಸಿಕೊಂಡ ರಾಜಮೌಳಿ? ಕಾರಣ ಏನು?

ಸಿನಿಮಾಕ್ಕೆ ಡಾಲ್ಬಿ ಇನ್ನಿತರೆ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು, ಸಿನಿಮಾದ ಸೌಂಡ್ ಗುಣಮಟ್ಟ ಮತ್ತು ದೃಶ್ಯಗಳ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಸಿನಿಮಾವನ್ನು ಡಾಲ್ಬಿ ಸಿನಿಮಾಸ್ ಸಹಾಯದೊಂದಿಗೆ IMAX, 4DX, D-BOX ಮತ್ತು EPIQ ಗಳಲ್ಲಿ ನೋಡಿ ವಿಶೇಷ ಸಿನಿಮಾ ವೀಕ್ಷಣೆ ಅನುಭವ ಪಡೆಯಿರಿ ಎಂದು ಟೀಸರ್​​ನಲ್ಲಿಯೇ ಜಾಹೀರಾತು ನೀಡಲಾಗಿದೆ. ಅಂದಹಾಗೆ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಅಕ್ಟೋಬರ್ 31ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಅವಧಿ 3:30 ಗಂಟೆ ಇರಲಿದೆ ಎನ್ನಲಾಗುತ್ತಿದೆ.

ರಾಜಮೌಳಿ ನಿರ್ದೇಶಿಸಿದ್ದ ‘ಬಾಹುಬಲಿ’ ಸಿನಿಮಾಗಳು 2015 ಮತ್ತು 2017 ರಲ್ಲಿ ಬಿಡುಗಡೆ ಆಗಿದ್ದವು. ಎರಡೂ ಸಿನಿಮಾಗಳೂ ಸಹ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆದಿದ್ದವು. ಮೊದಲ ಸಿನಿಮಾ ಸುಮಾರು 700 ಕೋಟಿ ಕಲೆ ಹಾಕಿದರೆ ಎರಡನೇ ಸಿನಿಮಾ 2000 ಕೋಟಿಗೂ ಹೆಚ್ಚಿನ ಮೊತ್ತವನ್ನು ಕಲೆ ಹಾಕಿ ದಾಖಲೆ ಸೃಷ್ಟಿಸಿತ್ತು. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಈ ಬಾರಿಯೂ ಸಹ 1000 ಕೋಟಿ ಗಳಿಕೆ ಮಾಡಲಿದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Tue, 26 August 25