ತೆಲುಗು ಚಿತ್ರರಂಗ (Tollywood) ತನ್ನ ಅತ್ಯುತ್ತಮ ಸಿನಿಮಾಗಳಿಂದ ದೇಶ-ವಿದೇಶಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೊಮ್ಮೆ ಪ್ರಧಾನಿ ಮೋದಿಯವರು ಹೈದರಾಬಾದ್ಗೆ ಭೇಟಿ ನೀಡಿ ಮಾಡಿದ್ದ ಭಾಷಣದಲ್ಲಿಯೂ ತೆಲುಗು ಚಿತ್ರರಂಗದ ಗರಿಮೆಯನ್ನು ಕೊಂಡಾಡಿದ್ದರು. ಆದರೆ ಅದೇ ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ವ್ಯಾಪಕವಾಗಿದೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತರು ಟೀಕಿಸಿದ್ದಾರೆ.
ಹೊಸದಾಗಿ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ನೇಮಕವಾಗಿರುವ ಶ್ರೀನಿವಾಸ ರೆಡ್ಡಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸ ಸಿಎಂ ಹೇಮಂತ್ ರೆಡ್ಡಿ ಅವರ ಆಶಯದಂತೆ ಹೈದರಾಬಾದ್ ಅನ್ನು ಮಾದಕ ವಸ್ತು ಮುಕ್ತ ನಗರವಾಗಿ ಬದಲಾಯಿಸುವ ಲಕ್ಷ್ಯದ ಕಡೆಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಹೈದರಾಬಾದ್ನಲ್ಲಿ ಡ್ರಗ್ಸ್ ಸೇವಿಸುವ ಯುವಕರ ಸಂಖ್ಯೆ ಹೆಚ್ಚಿದೆ ಎಂದಿರುವ ಶ್ರೀನಿವಾಸ ರೆಡ್ಡಿ, ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಹೆಚ್ಚಾಗಿದೆ ಎಂದಿದ್ದಾರೆ.
ತೆಲುಗು ಚಿತ್ರರಂಗದ ಒಳಗೂ ಸಾಕಷ್ಟು ಮಾದಕ ವಸ್ತು ಬಳಕೆ ಚಾಲ್ತಿಯಲ್ಲಿದೆ, ಇದನ್ನು ನಿಯಂತ್ರಿಸಲು ಶೀಘ್ರವೇ ತೆಲುಗು ಚಿತ್ರರಂಗದ ಹಿರಿಯರ ಸಭೆ ಕರೆದು ಚರ್ಚಿಸಲಾಗುವುದು, ಚಿತ್ರರಂಗದಲ್ಲಿನ ಡ್ರಗ್ಸ್ ಸಂಸ್ಕೃತಿಯನ್ನು ತೊಲಗಿಸುವ ಸಕಲ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ. ಪೊಲೀಸರು ಹೈದರಾಬಾದ್ನ ಎಲ್ಲ ಪಬ್, ಬಾರ್ ಮತ್ತು ಅನುಮಾನಿತ ಪ್ರದೇಶಗಳ ಮೇಲೆ ನಿಗಾವಣೆ ಇಡಲಿದ್ದಾರೆ ಎಂದೂ ಸಹ ಆಯುಕ್ತರು ಹೇಳಿದ್ದಾರೆ.
ತೆಲುಗು ಚಿತ್ರರಂಗವು ಆಗಾಗ್ಗೆ ಡ್ರಗ್ಸ್ ವಿಷಯದಲ್ಲಿ ಸುದ್ದಿ ಆಗುತ್ತಲೇ ಇರುತ್ತದೆ. ಹಿಂದೊಮ್ಮೆ ದೊಡ್ಡ ನಟ, ನಟಿ ಹಾಗೂ ನಿರ್ದೇಶಕರ ಹೆಸರುಗಳು ಡ್ರಗ್ಸ್ ಪ್ರಕರಣದಲ್ಲಿ ಹೊರಬಂದಿತ್ತು. ನಿರ್ದೇಶಕ ಪುರಿ ಜಗನ್ನಾಥ್, ನಟಿ ಚಾರ್ಮಿ, ಮುಮೈತ್ ಖಾನ್, ನಟ ರವಿತೇಜ ಸಹೋದರ, ನಟ ನವದೀಪ್ ಇನ್ನೂ ಹಲವರು ವಿಚಾರಣೆ ಎದುರಿಸಿದರು. ಕೆಲವರ ಬಂಧನವೂ ಆಗಿತ್ತು. ಇತ್ತೀಚೆಗೆ ಸಹ ತೆಲುಗು ಚಿತ್ರರಂಗದ ನಟ ನವದೀಪ್ ವಿರುದ್ಧ ಮಾದಕ ವಸ್ತು ಪ್ರಕರಣ ದಾಖಲಾಗಿ, ವಿಚಾರಣೆಯನ್ನೂ ಸಹ ಎದುರಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ