ರಮೇಶ್ ಅರವಿಂದ್ಗೆ ಅವಮಾನ: ‘ಒಬ್ಬ ಮಾಡಿದ ತಪ್ಪಿಗೆ ತೆಲುಗು ಚಿತ್ರರಂಗ ಹೊಣೆಯಲ್ಲ’: ಅಲ್ಲು ಅರ್ಜುನ್ ತಂದೆ ಪ್ರತಿಕ್ರಿಯೆ
ಡಿಸೆಂಬರ್ 2ರಂದು ಗೋವಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ತೆಲುಗಿನ ಪತ್ರಕರ್ತ ಆಯೋಜಿಸಿದ ಆ ಕಾರ್ಯಕ್ರಮಕ್ಕೆ ಕನ್ನಡದ ಅನೇಕ ಸೆಲೆಬ್ರಿಟಿಗಳನ್ನು ಆಹ್ವಾನಿಸಿ, ಅವಮಾನ ಮಾಡಲಾಗಿದೆ ಎಂಬ ಆರೋಪ ಎದುರಾಗಿದೆ. ಅದಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ತೆಲುಗು ಮಂದಿ ನಡೆಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದ (Kannada Film Industry) ಸೆಲೆಬ್ರಿಟಿಗಳಿಗೆ ಅವಮಾನ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿದೆ. ರಮೇಶ್ ಅರವಿಂದ್ (Ramesh Aravind) ಅವರನ್ನು ವೇದಿಕೆಗೆ ಕರೆದು ಅವಮಾನ ಮಾಡಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಟಾಲಿವುಡ್ನ ಹಿರಿಯ ನಿರ್ಮಾಪಕ, ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ (Ramesh Aravind) ಸ್ಪಷ್ಟನೆ ನೀಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ ಮಾಡಿದ ವ್ಯಕ್ತಿಗೂ ತಮ್ಮ ಕುಟುಂಬಕ್ಕೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಈ ಘಟನೆಗೆ ಇಡೀ ತೆಲುಗು ಚಿತ್ರರಂಗವನ್ನು ದೂಷಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಲ್ಲು ಅರವಿಂದ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ಪತ್ರಕರ್ತರೊಬ್ಬರು ನಡೆಸಿಕೊಂಡು ಬರುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭ. ಗೋವಾದಲ್ಲಿ ನಡೆದ ಸಮಾರಂಭ ಯಶಸ್ವಿಯಾಗಿಲ್ಲ. ನಮ್ಮ ಕುಟುಂಬದ ಕಲಾವಿದರಿಗೆ ಆ ಪತ್ರಕರ್ತನೇ ಪಿಆರ್ಓ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ಮ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ ಎಂದಮಾತ್ರಕ್ಕೆ ಆತ ನಮ್ಮ ಕುಟುಂಬದ ಪ್ರತಿನಿಧಿ ಅಲ್ಲ’ ಎಂದು ಅಲ್ಲು ಅರವಿಂದ್ ಅವರು ಹೇಳಿದ್ದಾರೆ.
Santosh Awards Mess!
Many Celebrities reportedly left wandering with poor arrangements at venue and hotel and also regarding Travel. Producer #AlluAravind clarifies that they are no way related to organiser. And Santosham Suresh apologises but says mistakes happen generally! pic.twitter.com/nIexOSdVUJ
— AndhraBoxOffice.Com (@AndhraBoxOffice) December 4, 2023
‘ಈ ವಿಷಯದಲ್ಲಿ ನಮ್ಮನ್ನು ಎಳೆದು ತರುವುದು ಸರಿಯಲ್ಲ. ಬೇರೆ ಚಿತ್ರರಂಗದವರು ಸಮಸ್ಯೆ ಅನುಭವಿಸಿದ್ದಕ್ಕೆ ಇಡೀ ತೆಲುಗು ಚಿತ್ರರಂಗದ ಮೇಲೆ ಆರೋಪ ಹೊರಿಸಲಾಗುತ್ತಿದೆ. ಒಬ್ಬ ಮಾಡಿದ ತಪ್ಪಿಗೆ ತಮ್ಮನ್ನೆಲ್ಲ ಆರೋಪಿಸಿದ್ದಕ್ಕೆ ನನಗೆ ತೀವ್ರ ಬೇಸರ ಆಗಿದೆ. ಆ ವ್ಯಕ್ತಿಗೂ ನಮಗೂ ಸಂಬಂಧ ಇಲ್ಲ. ಇಡೀ ಟಾಲಿವುಡ್ ಮೇಲೆ ಆರೋಪ ಮಾಡಿರುವುದು ಸರಿಯಲ್ಲ’ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ ಕನ್ನಡ ಸಿನಿಮಾ ನಟ-ನಟಿಯರಿಗೆ ಅವಮಾನ
ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿದ ಸುರೇಶ್ ಎಂಬ ವ್ಯಕ್ತಿ ಕೂಡ ಕ್ಷಮೆ ಕೇಳಿದ್ದಾರೆ. ‘ಇದು ಸಂಪೂರ್ಣ ನನ್ನ ಹೊಣೆಯೇ ಹೊರತು ತೆಲುಗು ಚಿತ್ರರಂಗದ್ದಲ್ಲ. ಸಂವಹನದ ಸಮಸ್ಯೆಯಿಂದ ಈ ತಪ್ಪು ನಡೆದಿದೆ. ಕನ್ನಡ ಮತ್ತು ತಮಿಳಿನ ಜನರಿಗೆ ಅವಮಾನ ಮಾಡುವ ಉದ್ದೇಶ ನಮ್ಮದಲ್ಲ. ನಮ್ಮ ಕಾರ್ಯಕ್ರಮದಲ್ಲಿ ಆದ ವ್ಯತ್ಯಯಕ್ಕೆ ನಾನು ಕ್ಷಮೆ ಕೇಳುತ್ತೇನೆ’ ಎಂದು ಸುರೇಶ್ ಕ್ಷಮೆ ಕೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.