AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3700 ಕೋಟಿ ನಷ್ಟ, ಚಿತ್ರರಂಗಕ್ಕೆ ವಿಲನ್, ಜನರಿಗೆ ಹೀರೋ ಯಾರು ಈ ಇಮ್ಮಡಿ ರವಿ?

Who is Immadi Ravi: ಕೆಲ ದಿನಗಳ ಹಿಂದೆಯಷ್ಟೆ ಸೈಬರಾಬಾದ್ ಪೊಲೀಸರು ಇಮ್ಮಡಿ ರವಿ ಹೆಸರಿನ ವ್ಯಕ್ತಿಯನ್ನು ಬಂಧಿಸಿದರು. ಈತನ ಬಂಧನದಿಂದ ತೆಲುಗು ಚಿತ್ರರಂಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ಈತನೊಬ್ಬನಿಂದ ಚಿತ್ರರಂಗಕ್ಕೆ 3700 ಕೋಟಿ ರೂಪಾಯಿ ನಷ್ಟವಾಗಿತ್ತು. ಆದರೆ ಈಗ ಜನ ಇಮ್ಮಡಿ ರವಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಈ ಇಮ್ಮಡಿ ರವಿ ಯಾರು?

3700 ಕೋಟಿ ನಷ್ಟ, ಚಿತ್ರರಂಗಕ್ಕೆ ವಿಲನ್, ಜನರಿಗೆ ಹೀರೋ ಯಾರು ಈ ಇಮ್ಮಡಿ ರವಿ?
Ibomma Ravi
ಮಂಜುನಾಥ ಸಿ.
|

Updated on: Nov 21, 2025 | 3:49 PM

Share

ಇಮ್ಮಡಿ ರವಿ (Immadi Ravi), ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲ ಇಡೀ ದೇಶದ ಸಿನಿ ಪ್ರೇಮಿಗಳ ಗಮನ ಈಗ ಈತನ ಮೇಲಿದೆ. ಪೈರಸಿ ಎಂಬುದು ಸಿನಿಮಾಕ್ಕೆ ಕ್ಯಾನ್ಸರ್ ಎನ್ನಲಾಗುತ್ತದೆ. ಈ ಕ್ಯಾನ್ಸರ್​​ ಹರಡಲು ಕಾರಣವಾದ ವ್ಯಕ್ತಿ ಈ ಇಮ್ಮಡಿ ರವಿ. ಯಾರೋ ಕೆಲವು ಕಂಪ್ಯೂಟರ್ ಸ್ಯಾವಿ ಜನರಿಗೆ ಮಾತ್ರವೆ ದೊರಕುತ್ತಿದ್ದ ಪೈರಸಿ ಸಿನಿಮಾಗಳನ್ನು, ಮನೆ-ಮನೆಗೆ ತಲುಪುವಂತೆ ಮಾಡಿದ (ಕು)ಖ್ಯಾತಿ ಈತನಿಗೆ ಸಲ್ಲುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಕುಖ್ಯಾತ ಪೈರಸಿ ವೆಬ್​​ಸೈಟ್ ತಮಿಳು ರಾಕರ್ಸ್ ಅನ್ನೇ ಹಿಂದಿಕ್ಕಿ ಸಾವಿರಾರು ಸಿನಿಮಾಗಳು ಉಚಿತವಾಗಿ ಬೆರಳು ತುದಿಗೆ ಸಿಗುವಂತೆ ಮಾಡಿಬಿಟ್ಟಿದ್ದ ಈತ. ಈಗ ಐಬೊಮ್ಮ ರವಿ ಸೈಬರಾಬಾದ್ ಪೊಲೀಸರ ವಶದಲ್ಲಿದ್ದಾನೆ. ಚಿತ್ರರಂಗದವರಂತೂ ಆತನನ್ನು ನೇಣಿಗೇರಿಸಿ ಎಂದು ಬೊಬ್ಬಿರಿಯುತ್ತಿದ್ದಾರೆ. ಆದರೆ ಸಾಮಾನ್ಯ ಜನ ಆತ ‘ಬಡವರ ಬಂಧು’ ಎನ್ನುತ್ತಾ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಮ್ಮಡಿ ರವಿಯಿಂದ ಚಿತ್ರರಂಗಕ್ಕೆ ಬರೋಬ್ಬರಿ 3700 ಕೋಟಿ ನಷ್ಟವಾಗಿದೆಯಂತೆ. ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ಖ್ಯಾತ ನಿರ್ಮಾಪಕ ಸುರೇಶ್ ಸೇರಿದಂತೆ ಹಲವು ಖುದ್ದಾಗಿ ಸೈಬರಾಬಾದ್ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಏನಾದರೂ ಮಾಡಿ ಆ ಐಬೊಮ್ಮ ವೆಬ್​​ಸೈಟ್ ಬಂದ್ ಮಾಡಿಸಿ ಎಂದು ಗೋಗರೆದಿದ್ದರು. ಚಿತ್ರರಂಗದ ಜನರಿಗೆ ಬೆಂಬಿಡದ ತಲೆ ನೋವಾಗಿದ್ದ ಐಬೊಮ್ಮ ಸಂಸ್ಥಾಪಕ ರವಿಯನ್ನು ಪೊಲೀಸರು ನವೆಂಬರ್ 15 ರಂದು ಬಂಧಿಸಿದರು. ಇಷ್ಟಕ್ಕೂ ಈ ಇಮ್ಮಡಿ ರವಿ ಯಾರು? ಈತನ ಹಿನ್ನೆಲೆ ಏನು?

ಇಮ್ಮಡಿ ರವಿ ವೈಜಾಗ್​​ನ ಒಬ್ಬ ಸಾಮಾನ್ಯ ಯುವಕ. ಅವರ ತಂದೆ ಬಿಎಸ್​​ಎನ್​​ಎಲ್​​ನಲ್ಲಿ ಕೆಲಸ ಮಾಡುತ್ತಿದ್ದರು. ರವಿ ಬಿಎಸ್​​ಸಿ ಕಂಪ್ಯೂಟರ್ ಸೈನ್ಸ್ ಪದವೀಧರ. ನಂತರ ಎಂಬಿಎ ಸಹ ಓದಿದ್ದಾನೆ. ಕಂಪೆನಿಯೊಂದರಲ್ಲಿ ಕೆಲಸ ಮಾಡುವಾಗ ಇಮ್ಮಡಿ ರವಿ ಯುವತಿಯೊಬ್ಬಾಕೆಯನ್ನು ಪ್ರೀತಿಸಿ ಮದುವೆ ಆದ. ರವಿ ಮದುವೆಯಾದ ಯುವತಿ ಶ್ರೀಮಂತ ಕುಟುಂಬದಾಕೆ, ಆಕೆಯ ಪೋಷಕರು ವಿದೇಶದಲ್ಲಿ ನೆಲೆಸಿದ್ದರು. ರವಿ ಆಗಿನ್ನೂ ವೆಬ್​​ಸೈಟ್ ಡಿಸೈನ್​​, ಹೋಸ್ಟಿಂಗ್ ಮಾಡುತ್ತಿದ್ದ. ನೀನು ಹಣ ಮಾಡಿ ಐಶಾರಾಮಿ ಜೀವನಶೈಲಿಯನ್ನು ಹೊಂದಬೇಕು ಎಂದು ರವಿಯ ಪತ್ನಿ, ಪತ್ನಿಯ ಮನೆಯವರು ರವಿಯನ್ನು ಒತ್ತಾಯಿಸುತ್ತಿದ್ದರು. ಆಗ ರವಿಗೆ ಸಿನಿಮಾ ರಂಗದಲ್ಲಿ ಏನಾದರೂ ಮಾಡುವ ಆಸೆಯಿತ್ತು.

ಅಲ್ಲದೆ ರವಿಗೆ ಸಿನಿಮಾ ನೋಡುವ ಹುಚ್ಚಿತ್ತು, ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಹಣ, ಸಮಯ ವ್ಯರ್ಥ ಎನಿಸಿ, ಪೈರಸಿ ಸೈಟ್​​ಗಳಿಂದ ಸಿನಿಮಾಗಳನ್ನು ಡೌನ್​​ಲೋಡ್ ಮಾಡಿಕೊಂಡು ನೋಡುತ್ತಿದ್ದ. ಆ ನಂತರ ತಾನೇ ಏಕೆ ಸಿನಿಮಾಗಳನ್ನು ಡೌನ್​​ಲೋಡ್ ಮಾಡಿ ತನ್ನದೇ ವೆಬ್​​ಸೈಟ್​​ನಲ್ಲಿ ಅದನ್ನು ಎಲ್ಲರಿಗೂ ತೋರಿಸಬಾರದು ಎನಿಸಿತು. ಅದರಂತೆ 2018-19ರ ಸಮಯದಲ್ಲಿ ಐಬೊಮ್ಮ (IBomma) ವೆಬ್​​ಸೈಟ್ ಪ್ರಾರಂಭಿಸಿದ. ಅದೇ ಸಮಯದಲ್ಲಿ ಕೋವಿಡ್ ಬಂದು ಡಿಜಿಟಲ್ ಕಂಟೆಂಟ್​​ಗೆ ಡಿಮ್ಯಾಂಡ್ ಹೆಚ್ಚಾಯ್ತು. ಹಾಗಾಗಿ ಐಬೊಮ್ಮ ಕೇವಲ ಒಂದೇ ವರ್ಷದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿತು.

ಇದನ್ನೂ ಓದಿ:ಪೊಲೀಸ್ ಆಯುಕ್ತರ ಭೇಟಿಯಾಗಿ ಧನ್ಯವಾದ ಹೇಳಿದ ಚಿರಂಜೀವಿ-ನಾಗಾರ್ಜುನ: ಕಾರಣವೇನು?

ಅದೇ ಸಮಯದಲ್ಲಿ 1ಎಕ್ಸ್ ಬೆಟ್ ಹಾಗೂ ಇನ್ನಿತರೆ ವಿದೇಶಿ ಬೆಟ್ಟಿಂಗ್ ಸೈಟ್​​ಗಳು ಐಬೊಮ್ಮದ ಇಮ್ಮಡಿ ರವಿಯನ್ನು ಸಂಪರ್ಕಿಸಿ, ವೆಬ್​​ಸೈಟ್​​ನಲ್ಲಿ ತಮ್ಮ ಜಾಹೀರಾತು ಪ್ರದರ್ಶಿಸುವಂತೆ ಕೇಳಿಕೊಂಡವು. ಇದಕ್ಕಾಗಿ 2020ರಲ್ಲಿಯೇ ರವಿಗೆ ತಿಂಗಳಿಗೆ ಐದು ಲಕ್ಷ ರೂಪಾಯಿ ಹಣ ನೀಡುತ್ತಿದ್ದವಂತೆ ಈ ಸೈಟ್​​ಗಳು. ರವಿ, ವಿವಿಧ ಒಟಿಟಿಗಳಿಂದ, ಬೇರೆ ವೆಬ್​​ಸೈಟ್​​ಗಳಿಂದ ಸಿನಿಮಾಗಳನ್ನು ಡೌನ್​​ಲೋಡ್ ಮಾಡಿ ಐಬೊಮ್ಮ ವೆಬ್​​ಸೈಟ್​​ಗೆ ಅಪ್​ಲೋಡ್ ಮಾಡಿ ಅವನ್ನು ಉಚಿತವಾಗಿ ನೋಡುವಂತೆ ಮಾಡಿದ್ದ. ಒಂದೇ ವರ್ಷದಲ್ಲಿ ಈತನ ತಿಂಗಳ ಆದಾಯ ಐದು ಲಕ್ಷದಿಂದ ಮೂವತ್ತು ಲಕ್ಷ ತಲುಪಿತ್ತು.

ಹೈದರಾಬಾದ್, ವೈಜಾಗ್​​ ಇನ್ನೂ ಕೆಲವೆಡೆ ಕೆಲವು ಪ್ರಾಪರ್ಟಿಗಳನ್ನು ಖರೀದಿ ಮಾಡಿದ್ದ. 2021ರಲ್ಲಿ ಪತ್ನಿಗೆ ವಿಚ್ಛೇದನವನ್ನೂ ನೀಡಿದ. ಭಾರತದಲ್ಲಿ ಪೈರಸಿ ಅಪರಾಧವಾದ ಕಾರಣ, 2022 ರಲ್ಲಿ ಭಾರತದ ನಾಗರೀಕತೆಯನ್ನು ತ್ಯಜಿಸಿ ಕೆರೆಬಿಯನ್ ದ್ವೀಪವೊಂದರ ನಾಗರೀಕತೆ ಪಡೆದು ಅಲ್ಲಿಗೆ ತೆರಳಿದ. ಆದರೆ ಆತ ನೆದರ್​​ಲ್ಯಾಂಡ್, ಥಾಯ್ಲೆಂಡ್, ಮಲೇಷಿಯಾ, ಸ್ವಿಟ್ಜರ್​​ಲ್ಯಾಂಡ್, ಅಮೆರಿಕ, ದುಬೈ ಹೀಗೆ ನಾನಾ ಕಡೆಗಳಲ್ಲಿ ಓಡಾಡುತ್ತಿರುತ್ತಿದ್ದ. ನೆದರ್ಲ್ಯಾಂಡ್ ಮತ್ತು ಸ್ವಿಟ್ಜರ್​​ಲ್ಯಾಂಡ್​​ಗಳಲ್ಲಿ ಸರ್ವರ್​​ಗಳನ್ನು ಖರೀದಿಸಿ ಅಲ್ಲಿಂದಲೇ ವೆಬ್​​ಸೈಟ್ ರನ್ ಮಾಡುತ್ತಿದ್ದ. ಜೊತೆಗೆ ಸರ್ವರ್​​ಗಳನ್ನು ಹ್ಯಾಕ್ ಮಾಡಿ ಹೊಸ ಸಿನಿಮಾಗಳನ್ನೇ ಕದ್ದು ವೆಬ್​​ಸೈಟ್​​ನಲ್ಲಿ ಹಂಚಿಕೊಳ್ಳಲು ಸಹ ಆರಂಭಿಸಿದ್ದ.

ಕೆಲವು ನಕಲಿ ಜಾಹೀರಾತು ಕಂಪೆನಿಗಳನ್ನು ಸೃಷ್ಟಿಸಿ, ಐಬೊಮ್ಮ ಹಾಗೂ ಅದರ ಜೊತೆಗೆ ಆತ ಸೃಷ್ಟಿಸಿದ್ದ ಇನ್ನೂ ಕೆಲವು ಪೈರಸಿ ವೆಬ್​​ಸೈಟ್​​ಗಳ ವೀವರ್​​ಶಿಪ್​​ ಅನ್ನು ನಕಲಿ ಕಂಪೆನಿಗೆ ಚಾನೆಲ್​​ ಮಾಡಿ ಅದನ್ನು ಗೂಗಲ್​​ಗೆ ಸಬ್ಮಿಟ್ ಮಾಡಿ ಅಲ್ಲಿಂದಲೂ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದ. ಅದರ ಜೊತೆಗೆ ಸ್ಥಳೀಯವಾಗಿದ್ದ ಕೆಲವು ಪೈರಸಿ ವೆಬ್​​ಸೈಟ್​​ಗಳ ಜೊತೆಗೆ ಟೈಪ್ ಸಹ ಮಾಡಿಕೊಂಡಿದ್ದ. ಚಿತ್ರಮಂದಿರಗಳಲ್ಲಿ ಪ್ರದರ್ಶನವಾದ ಸಿನಿಮಾಗಳ ಸ್ಕ್ರೀನ್ ರೆಕಾರ್ಡ್​​ಗಳನ್ನು ಖರೀದಿಸಿ ಅಪ್​ಲೋಡ್ ಮಾಡುತ್ತಿದ್ದ.

ಇತ್ತೀಚೆಗೆ ಪೊಲೀಸರು ಐಬೊಮ್ಮ ಜೊತೆಗೆ ಸಂಪರ್ಕ ಹೊಂದಿದ್ದ ಕೆಲ ಬೇರೆ ಪೈರಸಿ ವೆಬ್​​ಸೈಟ್​​ಗಳವರನ್ನು ಬಂಧಸಿದ್ದರು. ಆಗ ರವಿ, ಐಬೊಮ್ಮ ರವಿ ತನ್ನ ವೆಬ್​ಸೈಟ್​​ನಲ್ಲಿ ಪೊಲೀಸರಿಗೆ ಎಚ್ಚರಿಕೆ ಸಂದೇಶ ನೀಡಿದ್ದ. ಆ ಸಂದೇಶದಲ್ಲಿ ತನ್ನ ಬಳಿ 5 ಕೋಟಿಗೂ ಹೆಚ್ಚು ಬಳಕೆದಾರರ ಮಾಹಿತಿ ಇರುವುದಾಗಿ ಹೇಳಿದ್ದ. ಆದರೆ ರವಿ ತನ್ನ ವೆಬ್​​ಸೈಟ್​ ಐಪಿ ಅಡ್ರೆಸ್ ಮಾಕ್ ಮಾಡಿರುತ್ತಿದ್ದನಾದ್ದರಿಂದ ಪೊಲೀಸರಿಗೆ ಆತನ ಸುಳಿವು ಸಿಕ್ಕಿರಲ್ಲ. ಆದರೆ ಐಬೊಮ್ಮ ರವಿಯ ಜೊತೆಗೆ ಸಂಪರ್ಕದಲ್ಲಿ ಇದ್ದ ಕೆಲವರು ನೀಡಿದ ಆಧಾರದ ಮೇಲೆ ಪೊಲೀಸರು ರವಿಯ ಚಲನ-ವಲನಗಳ ಮೇಲೆ ನಿಗಾ ಇರಿಸಿದ್ದರು.

ಹೈದರಾಬಾದ್, ವೈಜಾಗ್​​ಗಳಲ್ಲಿ ಆಸ್ತಿ ಹೊಂದಿದ್ದ ರವಿ ಅವುಗಳನ್ನು ಮಾರಾಟ ಮಾಡಲೆಂದು ನವೆಂಬರ್ 15 ರಂದು ಹೈದರಾಬಾದ್​​ಗೆ ಬಂದಿದ್ದ. ಇಲ್ಲಿನ ಕುಕ್ಕಟಪಲ್ಲಿಯಲ್ಲಿರುವ ತನ್ನ ಅಪಾರ್ಟ್​​ಮೆಂಟ್​ನಲ್ಲಿ ಬಂದು ನೆಲೆಸಿದ್ದ. ಆತ ಬಂದಿದ್ದು ಖಾತ್ರಿ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದರು. ಆತನನ್ನು ವಿಚಾರಣೆಗಾಗಿ ಸೈಬರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಇದೀಗ ಜನ ರವಿ ಪರವಾಗಿ ನಿಂತಿದ್ದಾರೆ. ಹೆಚ್ಚಾಗಿರುವ ಟಿಕೆಟ್ ದರಗಳ ನಡುವೆ ರವಿ ತಮಗೆ ಉಚಿತವಾಗಿ ಮನರಂಜನೆ ಒದಗಿಸುತ್ತಿದ್ದ ಎಂದಿದ್ದಾರೆ. ಕೆಲವರಂತೂ ರವಿಯನ್ನು ದೇವರು ಎಂದೆಲ್ಲ ಕರೆದಿದ್ದಾರೆ. ಕೆಲ ವಕೀಲರು, ತಾವು ರವಿಯನ್ನು ಹೊರಗೆ ತಂದೇ ಸಿದ್ದ ಎಂದಿದ್ದಾರೆ. ರವಿಯ ಪ್ರಕರಣ ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ