
ರಾಜಮೌಳಿ (Rajamouli) ನಿರ್ದೇಶನದ ‘ವಾರಣಾಸಿ’ ವಿಶ್ವ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದ ಕ್ಯಾನ್ವಾಸ್ ಬಲು ವಿಶಾಲ. ಇದೊಂದು ‘ಆಕ್ಷನ್-ಅಡ್ವೇಂಚರ್’ ಕತೆ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾಕ್ಕಾಗಿ ವಿಶ್ವದ ಹಲವು ಪ್ರಮುಖ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಿನಿಮಾದ ಕಥೆಯು ಖಂಡಗಳನ್ನು ದಾಟಿ ಶತಮಾನಗಳನ್ನು ದಾಟಿ ಸಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾದ ಹೆಸರಿನಂತೆ ಕತೆ ಪ್ರಾರಂಭವಾಗುವುದು ‘ವಾರಣಾಸಿ’ಯಲ್ಲಿ ಆದರೆ ಅದು ಅಲ್ಲಿಂದ ಹಲವು ದೇಶಗಳನ್ನು ದಾಟಿ ಸಾಗಿ ಕೊನೆಗೆ ಮತ್ತೆ ವಾರಣಾಸಿಗೆ ಬರುತ್ತದೆಯಂತೆ. ಬೃಹತ್ ಕ್ಯಾನ್ವಾಸ್ ಹೊಂದಿರುವ ಈ ಸಿನಿಮಾವನ್ನು ರಾಜಮೌಳಿ ಅವರು ಹಲವು ದೇಶಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ಅವುಗಳ ಬಗ್ಗೆ ಸ್ಥೂಲವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಪವಿತ್ರ ನಗರ ವಾರಣಾಸಿಯಿಂದ ಆರಂಭವಾಗಿ ಅಂಟಾರ್ಕ್ಟಿಕಾಕ್ಕೆ ಹೋಗಿ, ಅಲ್ಲಿಂದ ಆಫ್ರಿಕಾ, ನಂತರ ಕಾಲದಲ್ಲಿ ಹಿಂದೆ ಸರಿದು ಪ್ರಾಚೀನ ರೋಮ್‌ಗೆ ಪ್ರಯಾಣಿಸಿ, ಅಂತಿಮವಾಗಿ ಎಲ್ಲವೂ ಎಲ್ಲಿ ಆರಂಭವಾಯಿತೋ ಅಲ್ಲಿಗೆ ಮರಳುತ್ತದೆ ಎಂದು ರಾಜಮೌಳಿ ಇತ್ತೀಚೆಗಿನ ಹೇಳಿದ್ದಾರೆ. ‘ನಾವು ಒಂದು ಟೀಸರ್ ಬಿಡುಗಡೆ ಮಾಡಿದ್ದೇವೆ, ಆದರೆ ನಾನು ಕಥೆಯನ್ನು ಹೆಚ್ಚು ಬಹಿರಂಗಪಡಿಸಲು ಸಾಧ್ಯವಿಲ್ಲ, ಬದಲಿಗೆ, ಕಥೆಯನ್ನು ಬಿಟ್ಟುಕೊಡದೆ ಪ್ರೇಕ್ಷಕರು ಯಾವ ರೀತಿಯ ಅನುಭವವನ್ನು ನಿರೀಕ್ಷಿಸಬಹುದು ಎಂಬುದನ್ನು ತೋರಿಸುವ ವೀಡಿಯೊವನ್ನು ನಾವು ಮಾಡಿದ್ದೇವೆ’ ಎಂದು ರಾಜಮೌಳಿ ಯುರೋಪಿಯನ್ ಮ್ಯಾಗಜೀನ್ ‘ತ್ಸೌನಾಮಿ’ ಜೊತೆಗಿನ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:‘ವಾರಣಾಸಿ’: ಪ್ರಿಯಾಂಕಾ ಚೋಪ್ರಾ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ರಾಜಮೌಳಿ
ಚಿತ್ರೀಕರಣದ ಶೇಕಡಾ 80 ರಷ್ಟು ಭಾಗ ಪೂರ್ಣಗೊಂಡಿದ್ದು, ಸಣ್ಣಪುಟ್ಟ ದೃಶ್ಯಗಳು ಮಾತ್ರ ಬಾಕಿ ಇವೆ, ಎಲ್ಲಾ ಪ್ರಮುಖ ಆಕ್ಷನ್ ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಲಾಗಿದೆ ಎಂದು ರಾಜಮೌಳಿ ಹೇಳಿದ್ದಾರೆ. ‘ಆರ್‌ಆರ್‌ಆರ್’ ಮುಗಿದ ನಂತರ ನಾವು 2022 ರಲ್ಲಿ ಕಥೆಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆವು. ಇದು ಸುಮಾರು ನಾಲ್ಕುವರೆ ವರ್ಷಗಳಿಂದ ಸಾಗುತ್ತಿದೆ, ದಸರಾ ಹಬ್ಬದೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ಉಳಿದ ಶೇಕಡಾ 20 ರಷ್ಟು ಚಿತ್ರೀಕರಣವನ್ನು ಹೈದರಾಬಾದ್‌ನಲ್ಲಿ ನಡೆಸಲಾಗುವುದು ‘ವಾರಣಾಸಿ’ ಸಂಪೂರ್ಣವಾಗಿ ಐಮ್ಯಾಕ್ಸ್ (IMAX) ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾದ ಮೊದಲ ಇಂಗ್ಲಿಷ್ ಅಲ್ಲದ ಚಿತ್ರ ಎಂದಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮಗಳು ‘ವಾರಣಾಸಿ’ ಚಿತ್ರವನ್ನು ‘ಇಂಡಿಯಾನ ಜೋನ್ಸ್’ ಮತ್ತು ‘ಜೇಮ್ಸ್ ಬಾಂಡ್’ ಫ್ರಾಂಚೈಸಿಗಳ ಮಿಶ್ರಣ ಎಂದು ಬಣ್ಣಿಸಿವೆ. ಮುಂಚೆ ‘ಇನ್ವರ್ಸ್’ ಜೊತೆಗಿನ ಸಂದರ್ಶನದಲ್ಲಿ ಎಸ್ಎಸ್ ರಾಜಮೌಳಿ ಅವರು ಕಥೆಯ ತಿರುಳಾಗಿರುವ ತಂದೆ-ಮಗನ ಸಂಬಂಧದ ಬಗ್ಗೆ ಮಾತನಾಡಿದ್ದರು. ಮಹೇಶ್ ಬಾಬು ಅವರು ಸಾಮಾನ್ಯ ಮನುಷ್ಯ ರುದ್ರ ಮತ್ತು ಭಗವಾನ್ ರಾಮನಾಗಿ ದ್ವಿಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ನೀವು ರಾಮನ ಸಂಪೂರ್ಣ ಕಥೆಯನ್ನು ಅರ್ಥಮಾಡಿಕೊಳ್ಳದೇ ಇರಬಹುದು, ಪಾತ್ರಗಳ ಭಾವನೆಗಳನ್ನು ನೀವು ಅರ್ಥಮಾಡಿಕೊಂಡರೆ, ಅಲ್ಲಿ ಏನು ನಡೆಯುತ್ತಿದೆ ಎಂಬುದು ನಿಮಗೆ ತಿಳಿಯುತ್ತದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:38 pm, Wed, 5 August 26