ಚಿ. ಉದಯಶಂಕರ್ | Chi. Udayashankar: ಈ ಹೆಸರನ್ನು ನಾನು ಬಾಲ್ಯದಲ್ಲಿ ಅಸಂಖ್ಯಾತ ಸಲ ಕೇಳಿದ್ದು ಆಕಾಶವಾಣಿಯ ಮೂಲಕ. ಆಗ ಪ್ರಸಾರವಾಗುತ್ತಿದ್ದ ಬಹುತೇಕ ಚಿತ್ರಗೀತೆಗಳು ಅವರ ರಚನೆಗಳೇ, ಅಂತಹ ಮಧುರ ಗೀತೆಗಳ ಸೃಷ್ಟಿಕರ್ತ ನಮ್ಮ ಪಾಲಿಗೆ ಗಂಧರ್ವರೇ! ಇಂತಹ ಉದಯಶಂಕರ್ ಅವರನ್ನು ನೋಡಬೇಕು ಎನ್ನುವುದು ನನ್ನ ಬಾಲ್ಯದ ಮಹದಾಸೆಗಳಲ್ಲಿ ಒಂದು. ಬೆಂಗಳೂರಿಗೆ ಬಂದ ನಂತರ ಅದು ಸರಳವಾಗಿಯೇ ಸಾಧ್ಯವಾಗಿ ಬಿಟ್ಟಿತ್ತು. ನನ್ನ ಬಾಲ್ಯದ ಗಂಧರ್ವರು ಎರಡನೇ ಭೇಟಿಯಲ್ಲಿಯೇ ಆತ್ಮೀಯರೂ ಆಗಿ ಬಿಟ್ಟರು. ಅವರ ಖಾಯಂ ತಾಣ ಹೋಟಲ್ ಜನಾರ್ಧನದ 233ನೇ ನಂಬರ್ ಕೊಠಡಿಯಲ್ಲಿ ಆಡಿದ ಮಾತುಗಳು, ಕಂಡ ಕನಸುಗಳಿಗೆ ಕೊನೆಯೇ ಇರಲಿಲ್ಲ. ಆದರೆ ಉದಯಶಂಕರ್ ಒಡನಾಟ ಬಹಳ ಕಾಲ ಉಳಿಯಲಿಲ್ಲ. ಅವರ ಆಯಸ್ಸು ಅಪೂರ್ಣವಾಗಿ ಹಲವು ಕನಸುಗಳು ಹಾಗೇ ಉಳಿದುಕೊಂಡವು.
ಎನ್. ಎಸ್. ಶ್ರೀಧರಮೂರ್ತಿ, ಹಿರಿಯ ಪರ್ತಕರ್ತ
*
(ಭಾಗ 1)
ಮೂವತ್ತು ವರ್ಷಗಳಲ್ಲಿ ಚಿ.ಉದಯಶಂಕರ್ ಬರೆದಿದ್ದು 3,340 ಗೀತೆಗಳು. ಸಂಭಾಷಣೆ ರಚಿಸಿದ್ದು 330 ಚಿತ್ರಗಳಿಗೆ. ಕನ್ನಡ ಚಿತ್ರರಂಗದ ಮಟ್ಟಿಗೆ “ಅಲ್ಲಾವುದ್ದೀನನ ಅದ್ಭುತ ದೀಪ” ಎಂದು ಅವರು ಕರೆಸಿಕೊಂಡಿದ್ದರು. ರಾಜ್ ಕುಮಾರ್ ಅಭಿನಯಿಸಿದ 92 ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಉದಯಶಂಕರ್ ಅಣ್ಣಾವ್ರ ವೃತ್ತಿ ಜೀವನ ರೂಪಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಉದಯಶಂಕರ್ ಅವರ ಮುತ್ತಾತ ನಂಜುಂಡಯ್ಯ ಅಭಿನಯ ಮತ್ತು ಬರವಣಿಗೆ ಎರಡರಲ್ಲಿಯೂ ಹೆಸರು ಮಾಡಿದವರು. ಪವನಪುರೀ ನಾಟಕ ಸಭಾದ ಸ್ಥಾಪಕರು. ತಾತ ಶ್ರೀಕಂಠಯ್ಯ ಕವಿಗಳು ಗಣಿತದಲ್ಲಿ ಪರಿಣಿತರು. ಉದಯಶಂಕರ್ ಅವರ ತಂದೆ ಚಿ.ಸದಾಶಿವಯ್ಯ ಬರಹಗಾರರು. ಐದು ಕಾದಂಬರಿ 23 ನಾಟಕ ಮತ್ತು 120 ಕಥೆಗಳನ್ನು ಬರೆದವರು. ಚಿತ್ರರಂಗದಲ್ಲಿ ಕೂಡ ಹೆಸರು ಮಾಡಿದವರು.
ಶ್ರೀಧರ ಮೂರ್ತಿಯವರ ಈ ಬರಹವನ್ನೂ ಓದಿ : S.V. Parameshwar Bhat Birth Anniversary: ಬಡವ ತಬ್ಬಲಿ ಎಂದು ಚಡಪಡಿಸದಿಹೆ, ಕೊಡುವಾತ ಬಿಡುವಾತ ನನ್ನೊಳಗಿಹನು
ಬರಹಗಾರರ ವಂಶದಲ್ಲಿ ಜನಿಸಿದ ಉದಯಶಂಕರ್ ಹುಟ್ಟಿದ್ದು 1934ರ ಫೆಬ್ರವರಿ 18ರಂದು. ಬಾಲ್ಯದಿಂದಲೇ ಅವರಿಗೆ ಬರವಣಿಗೆಯ ಹವ್ಯಾಸ ಬಂದಿತು. ಆರನೇ ವಯಸ್ಸಿನಲ್ಲಿಯೇ “ನಾನು ಚಂದೂ ಕೆರೆ ಕಟ್ಟಿದೆವು” ಎನ್ನುವ ಕಥೆಯನ್ನು ಬರೆದರು. ಹನ್ನೊಂದನೇ ವಯಸ್ಸಿನಲ್ಲಿ ಅವರು ಬರೆದ “ಕರಡಿಗಳ ಸಿನಿಮಾ” ಕಥೆ “ಕಥಾವಳಿ” ಪತ್ರಿಕೆಯಲ್ಲಿ ಪ್ರಕಟವಾಯಿತು. ಹದಿಮೂರನೇ ವಯಸ್ಸಿಗೆ ಉದಯಶಂಕರ್ “ಅಖಿಲ ಕರ್ನಾಟಕ ಮಕ್ಕಳ ಕೂಟ”ದ “ಮಕ್ಕಳ ಬಾವುಟ” ಪತ್ರಿಕೆಯ ಸಂಪಾದಕರಾದರು. ಚಾಮರಾಜಪೇಟೆಯ ಪತ್ರಿಕೆಯ ಕಚೇರಿಯ ಹತ್ತಿರದಲ್ಲಿಯೇ ಇದ್ದ ಕನ್ನಡ ಸಾಹಿತ್ಯ ಪರಿಷತ್‌ಗೆ ಹೋಗಿ ಬರುವ ಪರಿಪಾಠ ಬೆಳೆಯಿತು. ಹದಿನಾರನೇ ವಯಸ್ಸಿಗೇ “ಸಕ್ಕರೆ ಅಚ್ಚು” ಕವಿತೆಗಳ ಸಂಕಲನ ಅಚ್ಚಾಯಿತು. ಇದಕ್ಕೆ ವರಕವಿ ಬೇಂದ್ರೆ ಮುನ್ನುಡಿ ಬರೆದಿದ್ದರು. ಅವರ “ಕಡ್ಲೆಕಾಯಿ ಚರಿತ್ರೆ”ಕಾದಂಬರಿ ದೇವುಡು ಸಂಪಾಕದರಾಗಿದ್ದ ಕಥಾವಳಿಯಲ್ಲಿ ಪ್ರಕಟವಾಯಿತು. ಬಯಕೆಯ ಬಲಿ, ಚಂದ್ರಿಕೆಯ ಚೆಲುವಿನಲ್ಲಿ, ವಿಜಯ ವೈಭವ ಹೀಗೆ ಹದಿನೆಂಟು ತುಂಬುವಷ್ಟರಲ್ಲಿ ಉದಯಶಂಕರ್ ಹತ್ತು ಕಾದಂಬರಿಗಳನ್ನು ಬರೆದಿದ್ದರು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಇದನ್ನೂ ಓದಿ : S.V. Parameshwar Bhat Birth Anniversary : ‘ಪ್ರೀತಿಯ ನಂದಾದೀಪ’ ಬೆಳಗಿದ ಎಸ್.ವಿ.ಪರಮೇಶ್ವರ ಭಟ್ಟರು
Published On - 11:55 am, Fri, 18 February 22