ಏಕಪರದೆ ಅಳಿವಿಗೆ ಐಪಿಎಲ್​, ಒಟಿಟಿ ಕಾರಣ; ಕೊನೆಗೂ ಒಪ್ಪಿಕೊಂಡ ನಿರ್ಮಾಪಕ  

| Updated By: ರಾಜೇಶ್ ದುಗ್ಗುಮನೆ

Updated on: May 18, 2024 | 8:09 AM

ತೆಲಂಗಾಣ ರಾಜ್ಯ ಏಕ ಪರದೆ ಚಿತ್ರಮಂದಿರಗಳ ಮಾಲೀಕರ ಸಂಘ ಈ ನಿರ್ಧಾರ ತೆಗೆದುಕೊಂಡಿದೆ. ಈಗ ಹಿರಿಯ ನಿರ್ಮಾಪಕ, ನಟ ರಾಣಾ ದಗ್ಗುಬಾಟಿ ತಂದೆ ದಗ್ಗುಬಾಟಿ ಸುರೇಶ್ ಬಾಬು ಅವರು ಈ ಬಗ್ಗೆ ಮಾತನಾಡಿದ್ದಾರೆ.  

ಏಕಪರದೆ ಅಳಿವಿಗೆ ಐಪಿಎಲ್​, ಒಟಿಟಿ ಕಾರಣ; ಕೊನೆಗೂ ಒಪ್ಪಿಕೊಂಡ ನಿರ್ಮಾಪಕ  
ಏಕಪರದೆ ಅಳಿವಿಗೆ ಐಪಿಎಲ್​, ಒಟಿಟಿ ಕಾರಣ
Follow us on

ಕೇವಲ ಸ್ಯಾಂಡಲ್​ವುಡ್ ಮಾತ್ರವಲ್ಲ ತೆಲುಗಿನಲ್ಲೂ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಎಲೆಕ್ಷನ್ ಅಬ್ಬರ ಮುಗಿಯುವವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಈ ಮಧ್ಯೆ ಕರ್ನಾಟಕದಲ್ಲಿ ಹಲವು ಥಿಯೇರಟ್​ಗಳು ಮುಚ್ಚುತ್ತಿವೆ. ಗಾಂಧಿನಗರದಲ್ಲಿ ಬಹುತೇಕ ಎಲ್ಲಾ ಏಕಪರದೆ ಥಿಯೇಟರ್​ಗಳು ಬಾಗಿಲು ಹಾಕಿಕೊಳ್ಳುತ್ತಿದ್ದು ಆ ಜಾಗದಲ್ಲಿ ಕಮರ್ಷಿಯಲ್ ಬಿಲ್ಡಿಂಗ್, ಮಾಲ್​ಗಳು ತಲೆ ಎತ್ತುತ್ತಿವೆ. ತೆಲುಗಿನಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಸದ್ಯ ಸಿನಿಮಾಗಳು ಇಲ್ಲ ಎನ್ನುವ ಕಾರಣಕ್ಕೆ ತೆಲಂಗಾಣದ ಸುಮಾರು 400 ಚಿತ್ರಮಂದಿರಗಳನ್ನು ಹತ್ತು ದಿನಗಳ ಕಾಲದ ವರೆಗೆ ಬಂದ್ ಮಾಡಲು ನಿಶ್ಚಯಿಸಲಾಗಿದೆ. ತೆಲಂಗಾಣ ರಾಜ್ಯ ಏಕ ಪರದೆ ಚಿತ್ರಮಂದಿರಗಳ ಮಾಲೀಕರ ಸಂಘ ಈ ನಿರ್ಧಾರ ತೆಗೆದುಕೊಂಡಿದೆ. ಈಗ ಹಿರಿಯ ನಿರ್ಮಾಪಕ, ನಟ ರಾಣಾ ದಗ್ಗುಬಾಟಿ ತಂದೆ ದಗ್ಗುಬಾಟಿ ಸುರೇಶ್ ಬಾಬು (Daggubati Suresh Babu) ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಆಗ ಬೇಸಿಗೆ ಕಾಲದಲ್ಲಿ ಜನರು ಥಿಯೇಟರ್‌ಗಳಿಗೆ ಬರುತ್ತಿದ್ದರು. ಥಿಯೇಟರ್​ನಲ್ಲಿ ಎಸಿ ಇರುತ್ತದೆ, ಬೇಸಿಗೆಯ ಬಿಸಿಯಿಂದ ತಪ್ಪಿಸಿಕೊಳ್ಳಬಹುದು ಎಂಬುದು ಜನರ ಆಲೋಚನೆ ಆಗಿತ್ತು. ಆದರೆ ಇದೀಗ ಸನ್ನಿವೇಶ ಅದಲ್ಲ. ಒಟಿಟಿ ಪ್ಲಾಟ್‌ಫಾರ್ಮ್‌ಗಳು ವೈವಿಧ್ಯಮಯ ಕಂಟೆಂಟ್‌ಗಳನ್ನು ನೀಡುತ್ತಿವೆ. ಹೀಗಾಗಿ ದೊಡ್ಡ ಸಿನಿಮಾಗಳನ್ನು ನೋಡಲು ಮಾತ್ರ ಸಿನಿಪ್ರಿಯರು ಥಿಯೇಟರ್​ಗೆ ಬರುತ್ತಾರೆ’ ಎಂದಿದ್ದಾರೆ ಸುರೇಶ್ ಬಾಬು.

ಜನರು ಮಲ್ಟಿಪ್ಲೆಕ್ಸ್, ಒಟಿಟಿಗಳತ್ತ ವಾಲುತ್ತಿದ್ದಾರೆ. ಹೀಗೆ ಮುಂದುವರಿದರೆ ಸಿಂಗಲ್ ಸ್ಕ್ರೀನ್​ಗಳು ಮುಚ್ಚಲ್ಪಡುತ್ತವೆ. ಈ ಬಗ್ಗೆಯೂ ಸುರೇಶ್ ಬಾಬು ಮಾತನಾಡಿದ್ದಾರೆ. ‘ಬಹುಶಃ ನಾವು ಥಿಯೇಟರ್‌ಗಳನ್ನು ಮದುವೆ ನಡೆಸಲು ನೀಡಬೇಕು ಅಥವಾ ರಿಯಲ್ ಎಸ್ಟೇಟ್ ಉದ್ಯಮಗಳಾಗಿ ಪರಿವರ್ತಿಸಬೇಕು. ಇದನ್ನು ಬಿಟ್ಟು ಹೆಚ್ಚಿನದ್ದನ್ನು ಏನೂ ಮಾಡಲು ಸಾಧ್ಯ ಇಲ್ಲ’ ಎಂದಿದ್ದಾರೆ ಅವರು.

‘ಜನರು ಐಪಿಎಲ್​ನ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಹೀಗಿರುವಾಗ ದುಡ್ಡುಕೊಟ್ಟು ಜನರು ಏಕೆ ಥಿಯೇಟರ್​ಗೆ ಬರುತ್ತಾರೆ? ಒಟಿಟಿಯ ಆಗಮನದಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ದೊಡ್ಡ ಹೊಡೆತ ಉಂಟಾಗಿದೆ. ಐಪಿಎಲ್​ನ ನೀವು ಥಿಯೇಟರ್​​ನಲ್ಲಿ ಪ್ರಸಾರ ಮಾಡುತ್ತೀರಿ ಎಂದರೂ ಅದು ಸಹಕಾರಿ ಆಗಲಿಕ್ಕಿಲ್ಲ’ ಎಂದಿದ್ದಾರೆ ಸುರೇಶ್ ಬಾಬು.

ಇದನ್ನೂ ಓದಿ: ಟಾಲಿವುಡ್​ಗೂ ಬಂತು ಬರಗಾಲ, 400 ಚಿತ್ರಮಂದಿರಗಳು ಏಕಾ-ಏಕಿ ಬಂದ್

ಹಾಗಾದರೆ ನಿರ್ಮಾಪಕರು ಏನು ಮಾಡಬೇಕು? ಇದಕ್ಕೆ ಸುರೇಶ್ ಬಾಬು ಬಳಿ ಉತ್ತರ ಇದೆ. ‘ಕಂಟೆಂಟ್ ಆಧಾರಿತ ಸಿನಿಮಾಗಳು ಮಾತ್ರ ಸಹಕಾರಿ ಆಗುತ್ತವೆ. ನಿರ್ಮಾಪಕರು, ನಿರ್ದೇಶಕರು ಆ ರೀತಿಯ ಸಿನಿಮಾ ಮಾಡಲು ಹೆಚ್ಚಿನ ಆದ್ಯತೆ ನೀಡಬೇಕು. ಸಿನಿಮಾಗೆ ಹೆಚ್ಚೆಚ್ಚು ಪ್ರಚಾರ ನೀಡಬೇಕು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ’ ಎಂದಿದ್ದಾರೆ ಸುರೇಶ್ ಬಾಬು.

ಸುರೇಶ್ ಬಾಬು ನಿರ್ಮಾಪಕನಾಗಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಕೂಲಿ ನಂಬರ್ 1’, ‘ದೃಶ್ಯಂ’ ಮೊದಲಾದ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರು ಒಂದು ಸಿನಿಮಾದಲ್ಲಿ ನಟಿಸಿದ್ದಾರೆ ಕೂಡ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.