ಮಾರ್ಚ್ 27ರ ಶನಿವಾರ ರಾತ್ರಿ ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ 66ನೇ ಸಾಲಿನ ಫಿಲ್ಮ್ ಫೇರ್ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮಕ್ಕೆ ಅನೇಕ ಬಾಲಿವುಡ್ ಸ್ಟಾರ್ ನಟರು ಆಗಮಿಸಿದ್ದರು. ಈ ವೇಳೆ ಭಾವುಕ ಘಟನೆಯೊಂದು ನಡೆದಿದೆ. ಇರ್ಫಾನ್ ಖಾನ್ಗೆ ಸಿಕ್ಕ ಫಿಲ್ಮ್ ಫೇರ್ ಪ್ರಶಸ್ತಿ ಸ್ವೀಕರಿಸಲು ಅವರ ಮಗ ಬಾಬಿಲ್ ತಂದೆಯ ಬಟ್ಟೆಯನ್ನೇ ತೊಟ್ಟು ಬಂದಿದ್ದಾರೆ. ಸದ್ಯ, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಅಂಗ್ರೇಜಿ ಮೀಡಿಯಂ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಇರ್ಫಾನ್ ಖಾನ್ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಲಾಗಿದೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರು ಕಳೆದ ಏಪ್ರಿಲ್ 29ರಂದು ನಿಧನರಾಗಿದ್ದರು. ಮರಣೋತ್ತರವಾಗಿ ಅವರಿಗೆ ಈಗ ಅತ್ಯುತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿದೆ. ಅಲ್ಲದೆ, 2021ನೇ ಸಾಲಿನ ಜೀವಮಾನ ಸಾಧಕ ಪ್ರಶಸ್ತಿ ಕೂಡ ಇರ್ಫಾನ್ ಖಾನ್ ಅವರಿಗೆ ದೊರೆತಿದೆ.
ಇರ್ಫಾನ್ ಖಾನ್ ಅವರ ಮಗ ಬಾಬಿಲ್ ತಂದೆ ಬದಲಿಗೆ ಈ ಪ್ರಶಸ್ತಿಯನ್ನು ಸ್ವೀಕಾರ ಮಾಡಿದ್ದರು. ಈ ವೇಳೆ ಅವರು ಧರಿಸಿದ್ದ ಬಟ್ಟೆ ಎಲ್ಲರ ಗಮನ ಸೆಳೆದಿತ್ತು. ನೀಲಿ ಬಣ್ಣದ ಈ ಬಟ್ಟೆ ಬಾಬಿಲ್ಗೆ ಸ್ವಲ್ಪ ದೊಡ್ಡದಾದಂತೆ ಕಂಡಿತ್ತು. ಇದು ಏಕೆ ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
ಇರ್ಫಾನ್ ಖಾನ್ ಫೆವರಿಟ್ ಬಟ್ಟೆಯನ್ನು ಬಾಬಿಲ್ ಧರಿಸಿ ಬಂದಿದ್ದರಂತೆ. ಈ ಮೂಲಕ ಅವರು ತಂದೆಗೆ ಗೌರವ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಬಾಬಿಲ್ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ತಾಪ್ಸಿ ಪನ್ನು ನಟನೆಯ ತಪ್ಪಡ್ ಸಿನಿಮಾಗೆ ‘ಅತ್ಯುತ್ತಮ ಚಿತ್ರ’ ಹಾಗೂ ಅತ್ಯುತ್ತಮ ಕಥೆ ಪ್ರಶಸ್ತಿಗಳು ಸಿಕ್ಕಿವೆ. ವಿಮರ್ಶಕರ ಆಯ್ಕೆ ವಿಭಾಗದಲ್ಲಿ ಅಮಿತಾಭ್ ಬಚ್ಚನ್ ಅತ್ಯುತ್ತಮ ನಟ (ಗುಲಾಬೋ ಸಿತಾಬೋ) ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಸರ್’ ಸಿನಿಮಾದಲ್ಲಿನ ನಟನೆಗಾಗಿ ತಿಲೋತ್ತಮಾ ಅವರು ಅತ್ಯುತ್ತಮ ನಟಿ ಎನಿಸಿಕೊಂಡಿದ್ದಾರೆ. ವಿಮರ್ಶಕರ ಆಯ್ಕೆಯ ಅತ್ಯುತ್ತಮ ಸಿನಿಮಾ ಮನ್ನಣೆಗೆ ‘ಈಬ್ ಅಲೆ ಊ’ ಚಿತ್ರ ಪಾತ್ರವಾಗಿದೆ. ದೆಹಲಿಯಲ್ಲಿ ಮಂಗಗಳ ಕಾಟ ತಪ್ಪಿಸಲು ಹೆಣಗಾಡುವ ವ್ಯವಸ್ಥೆಯ ಕಥೆಯನ್ನು ಈ ಸಿನಿಮಾ ಹೊಂದಿದೆ.
ಇದನ್ನೂ ಓದಿ: Taapsee Pannu: 66ನೇ ಫಿಲ್ಮ್ ಫೇರ್ ಪ್ರಶಸ್ತಿ; ಇರ್ಫಾನ್ ಖಾನ್-ತಾಪ್ಸಿ ಪನ್ನು ಅತ್ಯುತ್ತಮ ನಟ-ನಟಿ!
Published On - 7:52 pm, Sun, 28 March 21